ಮಂಗಳೂರು: ನಗರದ ಬಲ್ಮಠ ಸರ್ಕಾರಿ ಹೆಣ್ಮಕ್ಕಳ ಶಿಕ್ಷಣ ಸಂಸ್ಥೆಗೆ ತನ್ನದೇ ಆದ ಹೆಸರಿದೆ. ಪ್ರಾಥಮಿಕ ಶಾಲೆಯಿಂದ ಹಿಡಿದು ಪದವಿವರೆಗೆ ಒಂದೇ ಕ್ಯಾಂಪಸ್‌ನಲ್ಲಿ ಶಿಕ್ಷಣಕ್ಕೆ ಅವಕಾಶವಿದೆ. ಆದರೆ ಸದ್ಯ ಇಲ್ಲಿನ ಪ್ರಾಥಮಿಕ ಶಾಲಾ ಮಕ್ಕಳು ಮಾತ್ರ ಶತಮಾನದ ಹಿಂದಿನ ಸೋರುವ, ಶಿಥಿಲವಾದ ಕಟ್ಟಡದಲ್ಲಿ (ಪದವಿ ಕಾಲೇಜಿನ ಹಳೇ ಕಟ್ಟಡ) ಪಾಠ ಕೇಳುವ ಪರಿಸ್ಥಿತಿ ಎದುರಾಗಿದೆ.
ಈ ಮೊದಲು ಪ್ರಾಥಮಿಕ ಶಾಲೆ ಇದ್ದ ಸ್ಥಳದಲ್ಲಿ ಕಾಲೇಜು ವಿಭಾಗಕಕ್ಕೆ ಕಟ್ಟಡವನ್ನು ನಿರ್ಮಿಸಿ, ತರಗತಿ ಆರಂಭಿಸಲಾಗಿದೆ. ಪರಿಣಾಮ ನೆಲ ಹಾಗೂ ಮೇಲಂತಸ್ತು ಇರುವ ಸಣ್ಣ ಕಟ್ಟಡವೊಂದರಲ್ಲಿ 1ರಿಂದ 7ನೇ ತರಗತಿ ವರೆಗಿನ ಮಕ್ಕಳಿಗೆ ನಿತ್ಯ ಪಾಠ ಪ್ರವಚನಗಳು ನಡೆಯುತ್ತಿದೆ. ಮಳೆಗಾಲವಾಗಿರುವುದರಿಂದ ಮೇಲಂತಸ್ತು ಸೋರುತ್ತಿದ್ದು, ಗೋಡೆಗಳು ಮಳೆ ನೀರಿನಿಂದ ಒದ್ದೆಯಾಗಿವೆ. ಅಲ್ಲಿ ತರಗತಿ ನಡೆಸಲು ಸಾಧ್ಯವೇ ಇಲ್ಲ. ನೆಲ ಮಟ್ಟದಲ್ಲಿ ಎರಡು ಕೋಣೆಗಳಿದ್ದು ಒಂದು ಕೋಣೆಯಲ್ಲಿ 4ರಿಂದ 6ನೇ ತರಗತಿ ಮಕ್ಕಳಿಗೆ ಒಟ್ಟಿಗೆ ಪಾಠ ಮಾಡಲಾಗುತ್ತಿದೆ. ಇನ್ನು ಶಿಕ್ಷಕರು ಕುಳಿತುಕೊಳ್ಳವ ಕೊಠಡಿಯ ಒಂದು ಬದಿಯಲ್ಲಿ 7ನೇ ತರಗತಿ, ಪಕ್ಕದ ಸಿಆರ್‌ಪಿ ಕಟ್ಟಡದಲ್ಲಿ 1ರಿಂದ 3ನೇ ತರಗತಿ ಮಕ್ಕಳಿಗೆ ಒಟ್ಟಿಗೆ ಪಾಠ ನಡೆಯುತ್ತಿದೆ.
ಶಾಲೆಯಲ್ಲಿ 43 ಮಕ್ಕಳು: ಶಾಲೆಗೆ ಸೂಕ್ತ ಕಟ್ಟಡ ಇಲ್ಲದಿರುವುದರಿಂದ ಮಕ್ಕಳ ಸಂಖ್ಯೆಯೂ ಕಡಿಮೆಯಾಗಿದೆ. ಸದ್ಯ ಶಾಲೆಯಲ್ಲಿ 43ಮಕ್ಕಳಿದ್ದಾರೆ. ಅದರಲ್ಲೂ ಮೂವರು ಮುರಾರ್ಜಿ ದೇಸಾಯಿ ಶಾಲೆಯಲ್ಲಿ ಸೀಟು ಲಭ್ಯವಾಗಿದ್ದು, ಶಾಲೆ ತೊರೆಯಲಿದ್ದಾರೆ. ಇನ್ನೂ ಕೆಲವು ಹೆತ್ತವರು ಮಕ್ಕಳನ್ನು ಬಿಡಿಸಿ ಬೇರೆ ಶಾಲೆಗೆ ಸೇರಿಸುವ ಉದ್ದೇಶ ಹೊಂದಿದ್ದಾರೆ ಎನ್ನುತ್ತಾರೆ ಎಸ್‌ಡಿಎಂಸಿ ಅಧ್ಯಕ್ಷ ಶೇಕಬ್ಬ.
ಈ ಮೊದಲು ಶಾಲಾ ಕಟ್ಟಡವಿದ್ದ ಸ್ಥಳದಲ್ಲಿ ಪದವಿ ವಿದ್ಯಾರ್ಥಿಗಳಿಗೆ ಸುಸಜ್ಜಿತ ಕಟ್ಟಡವೊಂದನ್ನು ನಿರ್ಮಿಸಲಾಗಿದೆ. ಕಟ್ಟಡ ನಿರ್ಮಿಸುವಾಗ ಅದರಲ್ಲಿಯೇ ಪ್ರಾಥಮಿಕ ಶಾಲೆಗೂ ಒಂದು ಮಹಡಿಯನ್ನು ನೀಡುವುದಾಗಿ ತಿಳಿಸಿದ್ದರು. ಈಗ ಕೇಳಿದರೆ ಕೊಡಲು ಆಗುವುದಿಲ್ಲ ಎಂದು ಹೇಳುತ್ತಿದ್ದಾರೆ. ಈ ಕುರಿತು ಮನವಿ ನೀಡಿದರೂ ಪ್ರಯೋಜನವಾಗಿಲ್ಲ.
-ಶೇಕಬ್ಬ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ
ಪದವಿ ವಿದ್ಯಾರ್ಥಿಗಳಿಗೆ 6 ಕೋಟಿ ರೂ. ವೆಚ್ಚದಲ್ಲಿ ಕಟ್ಟಡ ನಿರ್ಮಿಸಲಾಗಿದ್ದು, ಉನ್ನತ ಶಿಕ್ಷಣ ಇಲಾಖೆಗೆ ಸಂಬಂಧಿಸಿದ ಕಟ್ಟಡದಲ್ಲಿ ಪ್ರಾಥಮಿಕ ಶಾಲಾ ಮಕ್ಕಳನ್ನು ಇರಿಸಲು ಸಾಧ್ಯವಾಗದು. ಅಲ್ಲದೆ ಪದವಿ ತರಗತಿಯಲ್ಲಿ ಈಗಾಗಲೇ ಸಾಕಷ್ಟು ಮಕ್ಕಳಿದ್ದಾರೆ. ಅಲ್ಲಿ ಪ್ರಾಥಮಿಕ ಶಾಲೆಗೆ ಅವಕಾಶ ಕೊಡಲು ಸ್ಥಳಾವಕಾಶವೂ ಇಲ್ಲ. ಪ್ರಾಥಮಿಕ ಮಕ್ಕಳಿಗೆ ಸಮಸ್ಯೆ ಆಗುತ್ತಿದೆ ಎಂದು ಎಸ್‌ಡಿಎಂಸಿ ಅಧ್ಯಕ್ಷರು ತಿಳಿಸಿಲ್ಲ. ಮನವಿ ನೀಡಿದರೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು.
-ವೇದವ್ಯಾಸ ಕಾಮತ್, ಶಾಸಕರು