ಜಿಲ್ಲೆ

ನಿಟ್ಟೂರಿನಲ್ಲಿ ಸೋರುತಿಹುದು ಅಂಗನವಾಡಿ

ಗೋಪಾಲಕೃಷ್ಣ ಪಾದೂರ್

ಉಡುಪಿ: ನಿಟ್ಟೂರು ಪ್ರಾಥಮಿಕ ಶಾಲಾ ವಠಾರದಲ್ಲಿ ರಂಗಮಂದಿರದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಂಗನವಾಡಿ ಕೇಂದ್ರ ಭಾರೀ ಮಳೆಗೆ ಸೋರುತ್ತಿದ್ದು, 25ಕ್ಕೂ ಅಧಿಕ ಪುಟಾಣಿ ಮಕ್ಕಳು ಮಳೆಯಲ್ಲಿ ನೆನೆಯುವ ಪರಿಸ್ಥಿತಿ ಉದ್ಭವಿಸಿದೆ.

ಶಾಲಾ ವಠಾರದಲ್ಲಿದ್ದ ಅಂಗನವಾಡಿ ಕೇಂದ್ರ ಕಳೆದ 5-6 ವರ್ಷದಿಂದ ಮುಚ್ಚಲ್ಪಟ್ಟಿದ್ದು, ಪಕ್ಕದಲ್ಲಿನ ಶಾಲೆಯ ರಂಗ ಮಂದಿರವೇ ಅಂಗನವಾಡಿ ಕೇಂದ್ರವಾಗಿ ಮಾರ್ಪಟ್ಟಿದೆ. ಆದರೆ ಈ ರಂಗ ಮಂದಿರ ಮಳೆಗಾಲದಲ್ಲಿ ಅಲ್ಲಲ್ಲಿ ಸೋರುತ್ತಿದ್ದು, ಐದಾರು ಬಕೇಟು ಇಟ್ಟು ಮಕ್ಕಳು ಪಾಠ ಕೇಳುವ ಅನಿವಾರ್ಯತೆ ಎದುರಾಗಿದೆ.

ಖಾಸಗಿ ಜಾಗದ ಸಮಸ್ಯೆ

ನಿಟ್ಟೂರು ಅನುದಾನಿತ ಶಾಲೆ ಖಾಸಗಿ ಟ್ರಸ್ಟ್​ ಮೂಲಕ ನಡೆಯುತ್ತಿದ್ದು, ಅಂಗನವಾಡಿ ಕೇಂದ್ರ ದುರಸ್ತಿ ಬಗ್ಗೆ ನಿರಾಸಕ್ತಿ ಹೊಂದಿದ್ದಾರೆ. ಖಾಸಗಿ ಜಾಗದಲ್ಲಿರುವುದರಿಂದ ಸರ್ಕಾರದ ಅನುದಾನ ಬಳಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಮಕ್ಕಳಿಗೆ ರಂಗಮಂದಿರದಲ್ಲೇ ತಾತ್ಕಾಲಿಕ ನೆಲೆ ಕಲ್ಪಿಸಲಾಗಿದೆ ಎನ್ನುತ್ತಾರೆ ಸ್ಥಳಿಯರು.

ಮಳೆ ಬಂದರೆ ಛತ್ರಿಯೇ ಗತಿ

ಅಂಗನವಾಡಿಯಲ್ಲಿ ಸುಮಾರು 25 ಮಕ್ಕಳು ಅಭ್ಯಾಸ ಮಾಡುತ್ತಿದ್ದು, ಮಳೆ ಬಂದರೆ ಛತ್ರಿ ಹಿಡಿದು ಕುಳಿತುಕೊಳ್ಳುವ ಪರಿಸ್ಥಿತಿ ಇದೆ. ಮಕ್ಕಳಿಗೆ ಮಲಗಲು ಆಗದೆ ಊಟ ಮಾಡಲು ಕುಳಿತುಕೊಳ್ಳಲು ಜಾಗವಿಲ್ಲದೆ ಒದ್ದೆ ನೆಲದಲ್ಲಿಯೇ ಅತ್ತಿಂದತ್ತ ತಿರುಗಾಡುವ ಪರಿಸ್ಥಿತಿ ಎದುರಾಗಿದೆ. ಇಲಾಖಾ ಅಧಿಕಾರಿಗಳು ಸ್ಥಳ ಪರಿಶೀಲಿಸದೆ ಅಂಗನವಾಡಿ ಕೇಂದ್ರಕ್ಕೆ ರಂಗಸ್ಥಳವನ್ನು ಆಯ್ಕೆ ಮಾಡಿ ಅನುಮತಿ ನೀಡಿರುವ ಬಗ್ಗೆ ಮಕ್ಕಳ ಪೋಷಕರು ಅಸಮಾಧಾನವ್ಯಕ್ತಪಡಿಸಿದ್ದಾರೆ.