ಜಿಲ್ಲೆ

ಅಡಕೆಗೆ ಕಂಟಕ, ಕೃಷಿಕರಿಗೆ ಸಂಕಟ! : ಸಾಲು ಸಾಲು ರೋಗಗಳ ಹಾವಳಿ : ಕಂಗಾಲಾದ ಸುಳ್ಯದ ಬೆಳೆಗಾರರು

ಸೌಮ್ಯ ಆರ್

ಗಂಗಾಧರ ಕಲ್ಲಪಳ್ಳಿ ಸುಳ್ಯ

ಒಂದೆಡೆ ಹಳದಿ ರೋಗ ಅಡಕೆ ತೋಟಗಳಲ್ಲಿ ಕಾಡ್ಗಿಚ್ಚಿನಂತೆ ಹರಡಿದ್ದು, ಇನ್ನೊಂದೆಡೆ ಕೊಳೆರೋಗವೂ ತಾಂಡವ ಆರಂಭಿಸಿದೆ. ಮತ್ತೊಂದೆಡೆ ಎಲೆಚುಕ್ಕಿ ರೋಗವೂ ತನ್ನ ಪ್ರಭಾವ ತೋರಲಾರಂಭಿಸಿದ್ದು, ಬೆಳೆ ಇಳುವರಿಯಿಲ್ಲದೆ ಸುಳ್ಯ ಸಹಿತ ದ.ಕ.ಜಿಲ್ಲೆಯ ಹಲವು ತಾಲೂಕುಗಳ ಅಡಕೆ ಕೃಷಿಕರು ಕಂಗಾಲಾಗಿದ್ದಾರೆ.

ಅಡಕೆ ಜತೆಗೆ ಉಪ ಬೆಳೆಗಳಿಗೂ ಕೊಳೆರೋಗ ಹಾವಳಿ ಇದೆ. ಪ್ರಸ್ತುತ ಹಲವೆಡೆ ಕೃಷಿಕರ ಆರ್ಥಿಕ ಸ್ಥಿತಿಯೂ ಹದಗೆಟ್ಟಿದ್ದು, ಬೆಳೆನಾಶ ಗಾಯದ ಮೇಲೆ ಬರೆ ಎಳೆದಂತಾಗಿದೆ. ಮೇ ತಿಂಗಳ ಮಧ್ಯದಿಂದ ಆರಂಭಗೊಂಡ ಮಳೆ ಎಡೆಬಿಡದೆ ಸುರಿದ ಕಾರಣ ಕೊಳೆ ರೋಗ ವ್ಯಾಪಕವಾಗಿದೆ. ಅಡಕೆ ಜತೆಗೆ ಇತರ ವಾಣಿಜ್ಯ ಬೆಳೆಗಳಿಗೂ ಕೊಳೆರೋಗ ಬಾಧಿಸಿದ್ದು, ಸತತ ಮಳೆಯಿಂದಾಗಿ ಕೃಷಿಕರಿಗೆ ಔಷಧ ಸಿಂಪಡಣೆಯೂ ಸಾಧ್ಯವಾಗಿಲ್ಲ. ಸಣ್ಣ ಬಿಡುವಿನ ನಡುವೆ ಹಲವು ತೋಟಗಳಲ್ಲಿ ಔಷಧ ಸಿಂಪಡಿಸಿದರೂ ವ್ಯಾಪಕವಾಗಿ ಹರಡಿರುವ ಕೊಳೆರೋಗ, ತೇವಾಂಶ ಹೆಚ್ಚಳದಿಂದ ಔಷಧ ಪರಿಣಾಮ ಬೀರುವಲ್ಲಿ ವಿಫಲವಾಗಿದೆ. ಇದರಿಂದ ಕೆಲವು ತೋಟಗಳಲ್ಲಿ ಭಾರಿ ಪ್ರಮಾಣದ ಬೆಳೆ ನಾಶವಾಗಿದೆ.

ಜೂನ್‌ನಲ್ಲಿ ಮಳೆ ಆರಂಭವಾದರೂ ಜುಲೈ, ಆಗಸ್ಟ್ ವೇಳೆ ಕೊಂಚ ಬಿಡುವು ಲಭಿಸಿ ತೋಟಗಳಲ್ಲಿ ಔಷಧ ಸಿಂಪಡಣೆ ನಡೆಯುತ್ತಿತ್ತು. ಪ್ರಸಕ್ತ ವರ್ಷ ಸತತ ಮೂರು ತಿಂಗಳು ಮಳೆಯಾದ್ದರಿಂದ ಔಷಧ ಸಿಂಪಡಣೆ ಬಹುತೇಕ ಕಡೆಗಳಲ್ಲಿ ಸಾಧ್ಯವಾಗಿಲ್ಲ. ಕಳೆದ ವರ್ಷವೂ ಕೊಳೆರೋಗಕ್ಕೆ ಬೆಳೆಗಳು ತುತ್ತಾಗಿ ಕೃಷಿಕರು ಕೈಸುಟ್ಟುಕೊಂಡಿದ್ದರು. ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಸಕ್ತ ವರ್ಷವೂ ಫಸಲು ಬಹಳ ಕಡಿಮೆಯಿದೆ. ಆದರೆ ಹಳೇ ಅಡಕೆಗೆ ಈಗ ಉತ್ತಮ ಧಾರಣೆ ದೊರೆಯುತ್ತಿದ್ದು, ಸಮಸ್ಯೆ ಮುಂದುವರಿದರೆ ಮುಂದಿನ ವರ್ಷಕ್ಕೆ ಬೆಳೆ ಸ್ಥಿತಿ ಬಿಗಡಾಯಿಸಲಿದೆ ಎಂದು ಕೃಷಿಕ ಜಯಪ್ರಕಾಶ್ ಕುಕ್ಕೇಟಿ ಅಳಲು ತೋಡಿಕೊಂಡಿದ್ದಾರೆ.

ಕೊಳೆ ರೋಗದ ಜತೆಗೆ ಅಡಕೆ ತೋಟಕ್ಕೆ ಎಲೆಚುಕ್ಕಿ ರೋಗವೂ ಕಂಟಕವಾಗುತ್ತಿದೆ. ಸುಳ್ಯ ತಾಲೂಕಿನ ತೋಟಗಳಲ್ಲಿ ಕೊಳೆರೋಗ, ಹಳದಿ ರೋಗ ಹಾಗೂ ಎಲೆಚುಕ್ಕಿ ರೋಗ ಜತೆಗೂಡಿ ಅಡಕೆ ಕೃಷಿಕರನ್ನು ಹಿಂಡಲಾರಂಭಿಸಿವೆ.

ಒಂದೂವರೆ ತಿಂಗಳಿನಿಂದ ನಿರಂತರ ಅಡಕೆ ಮಿಡಿ, ಬೆಳೆದ ಅಡಕೆಗಳೂ ಕಪ್ಪು ಬಣ್ಣಕ್ಕೆ ತಿರುಗಿ ಉದುರುತ್ತಿವೆ. ಕೊಳೆ ರೋಗದ ಕಾರಣದಿಂದ ಶೇ.80ರಷ್ಟು ಫಸಲು ಈ ಬಾರಿಯೂ ನಾಶವಾಗಿದೆ. ತೇವಾಂಶ ಹೆಚ್ಚಳ ಹಾಗೂ ರೋಗದ ಪ್ರಭಾವ ಹೆಚ್ಚಿರುವುದರಿಂದ ಔಷಧ ಸಿಂಪಡಿಸಿದರೂ ಪ್ರಯೋಜನವಾಗುತ್ತಿಲ್ಲ. ಪುಷ್ಪರಾಜ ಶೆಟ್ಟಿ ಪೆರುವಾಜೆ, ಕೃಷಿಕ ಕಪ್ಪು ಬಣ್ಣಕ್ಕೆ ತಿರುಗಿರುವ ರೋಗಗ್ರಸ್ತ ಅಡಕೆಗಳು https://www.vijayavani.net/tiger-costume-shines-during-ganesh-festival https://www.vijayavani.net/pipeline-work-highway-collapse-fears