ಜಿಲ್ಲೆ

ನಾಯಕತ್ವ ಗುಣ ಕಲಿಸುವ ಕ್ಲಬ್

ಮರಿದೇವ ಹೂಗಾರ

ಹುಬ್ಬಳ್ಳಿ: ಆರ್ಥಿಕ ಸ್ವಾವಲಂಬನೆ ಜತೆಗೆ ದೇಶದ ಅಭಿವೃದ್ಧಿಯ ದೃಷ್ಟಿಕೋನವನ್ನು ಸರ್ವರೂ ಹೊಂದಿರಬೇಕು. ಈ ನಿಟ್ಟಿನಲ್ಲಿ ಯೋಜನೆ ರೂಪಿಸಿಕೊಳ್ಳಬೇಕು ಎಂದು ನವೋದ್ಯಮಿ, ಸಾಫ್ಟ್ ಸ್ಕಿಲ್ ಟ್ರೇನರ್ ಸೋನಲ್ ಶೈಲೇಂದ್ರ ಸಲಹೆ ನೀಡಿದರು.

ದೇಶಪಾಂಡೆ ಎಜುಕೇಷನಲ್ ಟ್ರಸ್ಟ್, ಟೋಸ್ಟ್​ಮಾಸ್ಟರ್ಸ್ ಕ್ಲಬ್ ಸಹಯೋಗದಲ್ಲಿ ನಗರದ ಗೋಕುಲ ರಸ್ತೆಯ ದೇಶಪಾಂಡೆ ಫೌಂಡೇಷನ್ ಸ್ಟಾರ್ಟಪ್ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ಟೋಸ್ಟ್​ಮಾಸ್ಟರ್ಸ್ ಕ್ಲಬ್​ನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಉಪನ್ಯಾಸ ನೀಡಿದರು.

ಟೋಸ್ಟ್​ಮಾಸ್ಟರ್ಸ್ ಕ್ಲಬ್ ವಿಶ್ವದಾದ್ಯಂತ ಯಾವುದೇ ಲಾಭೊದ್ದೇಶವಿಲ್ಲದೇ ಶೈಕ್ಷಣಿಕ ಚಟುವಟಿಕೆಗಳನ್ನು ರೂಪಿಸಿ, ವೃತ್ತಿಪರರ ಅಗತ್ಯ ಅಂಶಗಳಾದ ಸಾರ್ವಜನಿಕ ಭಾಷಣ, ಸಂವಹನ ಮತ್ತು ನಾಯಕತ್ವದ ಗುಣಗಳನ್ನು ಬೆಳೆಸುತ್ತಿದೆ ಎಂದರು.

ಕ್ಲಬ್​ಗಳು ಆರ್ಥಿಕ ಬೆಂಬಲ ಮತ್ತು ಸಕಾರಾತ್ಮಕ ಕಲಿಕೆಯ ವಾತಾವರಣವನ್ನು ಒದಗಿಸುತ್ತವೆ. ಇದರಿಂದ ಸದಸ್ಯರು ಬೆಳೆಯಲು ಅವಕಾಶ ಕಲ್ಪಿಸುವ ಮೂಲಕ ಹೆಚ್ಚಿನ ಆತ್ಮವಿಶ್ವಾಸ ಮತ್ತು ವೈಯಕ್ತಿಕ ಸಾಧನೆಗೆ ಕಾರಣವಾಗುತ್ತದೆ ಎಂದರು.

ಕ್ಲಬ್ ನಿರ್ದೇಶಕಿ ಚಿತ್ರಾ ವೀರೇಶ ಮಾತನಾಡಿ, ಒಂದು ಚಿಂತನೆಯು ಹಲವು ವಿಷಯಗಳನ್ನು ಬದಲಿಸಬಲ್ಲದು. ಅದೇ ನಿಟ್ಟಿನಲ್ಲಿ ದೇಶಪಾಂಡೆ ಶೈಕ್ಷಣಿಕ ಟ್ರಸ್ಟ್, ಟೋಸ್ಟ್​ಮಾಸ್ಟರ್ಸ್ ಕ್ಲಬ್ ಹಲವು ಚಿಂತನೆಗಳೊಂದಿಗೆ ಹಲವರ ಬದುಕಿನಲ್ಲಿ ಬದಲಾವಣೆ ತಂದಿದೆ. ಯವಕರಲ್ಲಿ ಬದಲಾವಣೆ ತರುವ ಉದ್ದೇಶದಿಂದ ಇಂದು ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕದಲ್ಲಿ ಹೆಸರು ಮಾಡುತ್ತಿವೆ ಎಂದರು.

ಸಿರಿ ತರ್ಲಗಟ್ಟಿ (ಅಧ್ಯಕ್ಷೆ), ಬಿ.ಕೆ. ಮನೋಜ (ಉಪಾಧ್ಯಕ್ಷ), ಪ್ರಮೋದ್ ದತ್ವಾಡ್ (ಕಾರ್ಯದರ್ಶಿ), ಅನನ್ಯಾ ಪಾಟೀಲ( ಖಜಾಂಚಿ), ರುಚಿತಾ ಅಮೀನಗಡ (ಸಾರ್ವಜನಿಕ ಸಂಪರ್ಕಾಧಿಕಾರಿ-ಉಪಾಧ್ಯಕ್ಷೆ), ದರ್ಶಿತಾ ರಾಯ್ಕರ್ (ಶೈಕ್ಷಣಿಕ ವಿಭಾಗದ ಉಪಾಧ್ಯಕ್ಷೆ ) ಹಾಗೂ ವಿನೀತ್ ಗುಲೇಚಾ (ಉಸ್ತುವಾರಿ) ಅವರಿಗೆ ಪ್ರಮಾಣ ವಚನ ಬೋಧಿಸಿ, ಅಧಿಕಾರ ಹಸ್ತಾಂತರಿಸಲಾಯಿತು.

ಕ್ಲಬ್ ಸಂಸ್ಥಾಪಕ ಅಧ್ಯಕ್ಷ ವೀರನಾರಾಯಣ ಕುಲಕರ್ಣಿ, ನಿರ್ಗಮಿತ ಅಧ್ಯಕ್ಷ ಸಿತಾಂಶೂ ಹಳ್ಳದ, ನಿತೀಶ ಯತಗೇರಿ, ಪ್ರೀತಿ ಕೊಠಾರಿ, ಸಾಕ್ಷಿ ಸಾಂಗೈ, ಮುತ್ತುರಾಜ ಬಡಿಗೇರ, ಆಫಾಖಾನ್, ನಿಖಿತಾ ಸ್ವಾದಿ ಇತರರು ಇದ್ದರು.