ಮಂಜುನಾಥ ತಿಮ್ಮಯ್ಯ ಮೈಸೂರು
ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಲು ಕಾಂಗ್ರೆಸ್‌ನ ಪ್ರಬಲ ನಾಯಕರು ನಿರಾಸಕ್ತಿ ತೋರುತ್ತಿದ್ದಾರೆ. ಹೀಗಾಗಿ, ಪ್ರಬಲ ಅಭ್ಯರ್ಥಿಗಾಗಿ ತೀವ್ರ ಶೋಧ ಮುಂದುವರಿದಿದೆ.
ಲೋಕಸಭಾ ಚುನಾವಣೆ ದಿನಾಂಕ ಘೋಷಣೆ ಸಮೀಪವಾಗುತ್ತಿದೆ. ಎಲ್ಲ ಪಕ್ಷಗಳ ಮೈಕೊಡವಿಕೊಂಡು ಸಿದ್ಧತೆ ಮಾಡಿಕೊಳ್ಳುತ್ತಿವೆ. ಹಾಲಿ ಸಂಸದ ಪ್ರತಾಪ್ ಸಿಂಹ ಹ್ಯಾಟ್ರಿಕ್ ಜಯದ ಕನಸಿನೊಂದಿಗೆ ಅನಧಿಕೃತವಾಗಿ ಪ್ರಚಾರ ಕಾರ್ಯವನ್ನೂ ಬಿರುಸುಗೊಳಿಸಿದ್ದಾರೆ. ಆದರೆ, ಇತ್ತ ಕಾಂಗ್ರೆಸ್ ಅಭ್ಯರ್ಥಿ ಇನ್ನೂ ಅಂತಿಮವಾಗಿಲ್ಲ. ಇದರಿಂದಾಗಿ ಕೈ ಟಿಕೆಟ್ ಕೌತುಕ ಮೂಡಿಸಿದೆ.
ಕಳೆದ ಎರಡು ಬಾರಿ ಹೀನಾಯ ಸೋಲು ಕಂಡಿರುವ ಕಾಂಗ್ರೆಸ್, ಈ ಸಲ ಗೆಲ್ಲಬೇಕೆಂಬ ಹಠ ತೊಟ್ಟಿದೆ. ಆದರೆ, ಗೆಲ್ಲುವ ಕುದುರೆ ಮಾತ್ರ ದೊರೆಯುತ್ತಿಲ್ಲ. ಇದು ಕೈ ಪಡೆಯನ್ನು ಚಿಂತೆಗೀಡು ಮಾಡಿದೆ.
ಕಾಂಗ್ರೆಸ್ ಟಿಕೆಟ್ ಮೇಲೆ ಅನೇಕರು ಕಣ್ಣು ಹಾಕಿದ್ದಾರೆ. ಈ ಕ್ಷೇತ್ರದಿಂದ ಸ್ಪರ್ಧಿಸಲು 14 ಆಕಾಂಕ್ಷಿಗಳು ಈಗಾಗಲೇ ಕೆಪಿಸಿಸಿಗೆ ಅರ್ಜಿ ಸಲ್ಲಿಸಿದ್ದಾರೆ. ಇದರಲ್ಲಿ ಪ್ರಬಲ ಅಭ್ಯರ್ಥಿ ಕೊರತೆ ತೀವ್ರವಾಗಿ ಕಾಡುತ್ತಿದೆ. ಈ ಆಕಾಂಕ್ಷಿಗಳನ್ನು ಹೊರತುಪಡಿಸಿ ವಿವಿಧ ಆಯಾಮದಿಂದ ಬಲಿಷ್ಠ ಅಭ್ಯರ್ಥಿಗಾಗಿ ಹುಡುಕಾಟ ನಡೆದಿದೆ ಎಂದು ಮೂಲಗಳು ತಿಳಿಸಿವೆ.
ರೇಷ್ಮೆ, ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್ ಅವರನ್ನು ಕಣಕ್ಕಿಳಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಬಹಳ ಉತ್ಸುಕವಾಗಿದ್ದಾರೆ. ಇವರು ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕರು. ಈ ಕ್ಷೇತ್ರವು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರಲಿದೆ. ಇಲ್ಲಿರುವ 1.96 ಲಕ್ಷ ಮತಗಳಲ್ಲಿ ಹೆಚ್ಚಿನ ಮತಗಳನ್ನು ಬೇಟೆಯಾಡಬಹುದು. ಕೊಡಗು ಜಿಲ್ಲೆಗೆ ಹೊಂದಿಕೊಂಡಿರುವುದರಿಂದ ಆ ಭಾಗದ ಮತಗಳನ್ನು ಸೆಳೆಯಬಹುದು.
ಪಿರಿಯಾಪಟ್ಟಣ ಕ್ಷೇತ್ರದ ಪಕ್ಕದಲ್ಲಿರುವ ಹುಣಸೂರು ಕ್ಷೇತ್ರದ ಮೇಲೆಯೂ ಹೆಚ್ಚಿನ ಪ್ರಭಾವ ಬೀರಬಹುದು. ಜತೆಗೆ, ಮೈಸೂರು ವ್ಯಾಪ್ತಿಯ ಚಾಮುಂಡೇಶ್ವರಿ, ಚಾಮರಾಜ, ಕೃಷ್ಣರಾಜ, ನರಸಿಂಹರಾಜ ಕ್ಷೇತ್ರದ ಮತದಾರರಿಗೂ ಇವರ ಮುಖ ಪರಿಚಯ ಇದೆ. ಈ ಎಲ್ಲ ಕಾರಣದಿಂದ ಜಿಲ್ಲೆಯ ಪ್ರಬಲ ಸಚಿವರಾಗಿರುವ ಕೆ.ವೆಂಕಟೇಶ್ ಸ್ಪರ್ಧೆಯಿಂದ ಕ್ಷೇತ್ರದಲ್ಲಿ ಹೊಸ ಸಂಚಲನ ಸೃಷ್ಟಿಸಬಹುದು. ಜತೆಗೆ, ಬಿಜೆಪಿ ಅಭ್ಯರ್ಥಿಗೂ ತಕ್ಕ ಸ್ಪರ್ಧೆಯನ್ನು ಒಡ್ಡಬಹುದು ಎಂಬ ಲೆಕ್ಕಾಚಾರವನ್ನು ಸಿದ್ದರಾಮಯ್ಯ ಹಾಕಿಕೊಂಡಿದ್ದಾರೆ.
ಸಿಎಂ ಈ ಪ್ರಸ್ತಾವನೆಗೆ ಕೆ.ವೆಂಕಟೇಶ್ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ. ಲೋಕಸಭಾ ಚುನಾವಣೆಗೆ ಸ್ಪರ್ಧಿಸಲೂ ಮನಸ್ಸು ಮಾಡುತ್ತಿಲ್ಲ. 5 ವರ್ಷ ನಂತರವಷ್ಟೇ ಶಾಸಕರಾಗಿದ್ದಾರೆ. ಕಳೆದ ವರ್ಷ ನಡೆದ ವಿಧಾನಸಭಾ ಚುನಾವಣೆಯಲ್ಲಿ ಜಯ ಸಾಧಿಸುವ ಮೂಲಕ ಸಚಿವರಾಗಿದ್ದಾರೆ. ಸಿದ್ದರಾಮಯ್ಯ ಬೆಂಬಲಿಗರಾಗಿರುವ ಇವರು, ಉತ್ತಮ ಖಾತೆಯನ್ನೇ ಗಿಟ್ಟಿಸಿಕೊಂಡಿದ್ದಾರೆ. ಸಚಿವರಾಗಿ ರಾಜ್ಯ ರಾಜಕಾರಣದಲ್ಲಿ ಮುಂದುವರಿಯಲು ಹೆಚ್ಚು ಒಲವು ತೋರುತ್ತಿದ್ದಾರೆ. ರಾಷ್ಟ್ರ ರಾಜಕಾರಣಕ್ಕೆ ತೆರಳು ಇವರಿಗೆ ಇಷ್ಟವಿಲ್ಲ.
ಹಿರಿಯ ರಾಜಕಾರಣಿ ಆಗಿರುವ ವೆಂಕಟೇಶ್ ಈವರೆಗೆ 9 ವಿಧಾನಸಭಾ ಚುನಾವಣೆಯನ್ನು ಎದುರಿಸಿದ್ದು, ಇದರಲ್ಲಿ 6 ಸಲ ಆಯ್ಕೆಯಾಗಿದ್ದು, 3 ಬಾರಿ ಸೋತಿದ್ದಾರೆ. ಆದರೆ, ಒಮ್ಮೆಯೂ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡಿಲ್ಲ. ಈ ಎಲ್ಲ ಕಾರಣಕ್ಕೆ ಸಂಸತ್ ಚುನಾವಣಾ ಅಖಾಡಕ್ಕೆ ಇಳಿಯಲು ನಿರಾಸಕ್ತಿ ತೋರುತ್ತಿದ್ದಾರೆ. ಆದಾಗ್ಯೂ, ಸಿಎಂ ಮಾತ್ರ ಇನ್ನೂ ಪಟ್ಟು ಸಡಿಲಿಸುತ್ತಿಲ್ಲ.
ಬೆಂಗಳೂರಿನ ಯಶವಂತಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್ ಹೆಸರು ಸಹ ಕೇಳಿಬರುತ್ತಿದೆ. ಬಿಜೆಪಿಯಿಂದ ಅಂತರ ಕಾಯ್ದುಕೊಂಡಿರುವ ಇವರನ್ನು ಕಣಕ್ಕೆ ಇಳಿಸಲು ಕಾಂಗ್ರೆಸ್ ಪ್ರಯತ್ನ ಮಾಡುತ್ತಿದೆ. ಆದರೆ, ಇದು ಸಹ ಅಂತಿಮವಾಗಿಲ್ಲ.
ಹಿಂದಿನ ಬಿಜೆಪಿ ಸರ್ಕಾರದಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ. ಹೀಗಾಗಿ, ಇವರಿಗೆ ಕ್ಷೇತ್ರವೂ ಹೊಸದಲ್ಲ. ಮೈತ್ರಿ ಅಭ್ಯರ್ಥಿ ವಿರುದ್ಧ ಸೋಮಶೇಖರ್ ಪ್ರಬಲ ಅಭ್ಯರ್ಥಿಯಾಗುತ್ತಾರೆ ಎಂಬ ಲೆಕ್ಕಾಚಾರ ಕಾಂಗ್ರೆಸ್‌ದ್ದಾಗಿದೆ. ಆದರೆ, ಸೋಮಶೇಖರ್ ಮಾತ್ರ ಇನ್ನೂ ಹಸಿರು ನಿಶಾನೆ ತೋರುತ್ತಿಲ್ಲ. ಲೋಕಸಭಾ ಚುನಾವಣೆಯಿಂದಾಗಿ ರಾಜಕೀಯ ರಂಗದಲ್ಲಿ ಬೆಳೆಯಲು ನೆರವಾಗಿರುವ ಯಶವಂತಪುರ ಕ್ಷೇತ್ರವನ್ನು ಬಿಟ್ಟು ಮೈಸೂರಿಗೆ ಬರಬೇಕಾಗುತ್ತದೆ. ಹೀಗೆ ಮಾಡಿದರೆ ಯಶವಂತಪುರ ಕ್ಷೇತ್ರ ಕೈ ತಪ್ಪಿ ಅನ್ಯರ ಪಾಲಾಗಲಿದೆ.
ಇದು ರಾಜಕೀಯ ದೊಡ್ಡ ಹಿನ್ನಡೆಗೆ ಕಾರಣವಾಗಲಿದೆ. ಆದ್ದರಿಂದ ಲೋಕಸಭಾ ಚುನಾವಣೆ ಸಹವಾಸವೇ ಬೇಡ ಎಂಬ ಆಲೋಚನೆಯಲ್ಲಿ ಎಸ್.ಟಿ.ಸೋಮಶೇಖರ್ ಇದ್ದಾರೆ. ಕೊನೆ ಘಳಿಗೆಯಲ್ಲಿ ಏನು ಆಗಲಿದೆಯೋ ಕಾದು ನೋಡಬೇಕಿದೆ.
ಮಾಜಿ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಸಹ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ. ಕಳೆದ ಎರಡ್ಮೂರು ತಿಂಗಳಿನಲ್ಲಿ ಡಾ.ಯತೀಂದ್ರ ಹೆಸರು ರಾಜಕೀಯ ವಲಯದಲ್ಲಿ ಹರಿದಾಡುತ್ತಿತ್ತು. ಈ ಸುದ್ದಿಯನ್ನು ಇವರು ಸಹ ನಿರಾಕರಣೆ ಮಾಡಿಲ್ಲ. ‘ಹೈಕಮಾಂಡ್ ತೀರ್ಮಾನಕ್ಕೆ ಬದ್ಧ’ ಎಂಬ ಹೇಳುವ ಮೂಲಕ ಲೋಕಸಭಾ ಎಲೆಕ್ಷನ್‌ಗೆ ಸ್ಪರ್ಧೆ ಮಾಡುವ ಆಸೆಯನ್ನು ಪರೋಕ್ಷವಾಗಿ ಬಿಚ್ಚಿಟ್ಟಿದ್ದರು. ಆದರೀಗ ಅವರ ನಿಲುವಿನಲ್ಲಿ ಬದಲಾವಣೆ ಆಗಿದೆಂದೆನಿಸುತ್ತಿದೆ. ಸಿಎಂ ಪುತ್ರ ಆಗಿರುವ ಕಾರಣಕ್ಕೆ ಶಾಸಕರಲ್ಲದಿದ್ದರೂ ಪ್ರಭಾವಿ ಆಗಿರುವ ಇವರು ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡುವುದು ಬೇಡ ಎಂಬ ತೀರ್ಮಾನಕ್ಕೆ ಬಂದಿದ್ದಾರೆ.
ಯುವ ನಟ ಡಾಲಿ ಧನಂಜಯ ಹೆಸರು ಕೇಳಿಬಂದಿದೆ. ಇದು ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆ ಸಹ ಆಯಿತು. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಕುರಿತು ಸ್ಪಷ್ಟನೆ ನೀಡಿದರು. ‘ನಾನು ಚುನಾವಣೆಗೆ ಬರುವುದಿಲ್ಲ’ ಎಂದು ಡಾಲಿ ಸಹ ಪ್ರತಿಕ್ರಿಯೆ ನೀಡಿದರು. ಬಳಿಕ ಈ ವಿಷಯ ತಣ್ಣಗಾಗಿದೆ.
ಕೆಪಿಸಿಸಿ ವಕ್ತಾರರಾದ ಎಂ.ಲಕ್ಷ್ಮಣ್, ವೈದ್ಯ ಶುಶ್ರುತ್ ಗೌಡ ಹೆಸರು ಸಹ ಕೈ ಪಾಳಯದಲ್ಲಿ ಓಡಾಡುತ್ತಿದೆ. ಕಾಂಗ್ರೆಸ್ ಪಡಸಾಲೆಯಲ್ಲಿ ಇಷ್ಟೆಲ್ಲ ರಾಜಕೀಯ ಬೆಳವಣಿಗೆಗಳು ನಡೆಯುತ್ತಿವೆ. ಆದಾಗ್ಯೂ, ಈವರೆಗೆ ಗಟ್ಟಿ ಉರಿಯಾಳು ಕೈಗೆ ದೊರೆಯುತ್ತಿಲ್ಲ ಎಂಬ ಕೊರಗು ಆ ಪಕ್ಷದ ಕಾರ್ಯಕರ್ತರಲ್ಲಿ ಕಾಡುತ್ತಿದೆ. ಹೀಗಾಗಿ, ಅಳೆದು ತೂಗಿ ಯಾವ ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತದೆ ಎಂಬ ಕೌತುಕ ಮಾತ್ರ ಹಾಗೇ ಉಳಿದಿದೆ.