ಜಿಲ್ಲೆ

ಜೆಡಿಎಸ್ ಜತೆ ಹೊಂದಾಣಿಕೆ ಇಲ್ಲವೆಂಬುದನ್ನು ಮುಖಂಡರ ಗಮನಕ್ಕೆ ತನ್ನಿ

Hassan

ಚನ್ನರಾಯಪಟ್ಟಣ: ಜಿಲ್ಲೆಯ ಮಟ್ಟಿಗೆ ಜೆಡಿಎಸ್ ಜತೆ ಹೊಂದಾಣಿಕೆಗೆ ಯಾರ ಸಹಮತ ಇಲ್ಲವೆಂಬುದನ್ನು ಪ್ರಬಲವಾಗಿ ಪಕ್ಷದ ಮುಖಂಡರ ಗಮನಕ್ಕೆ ತಂದು ಹೊಸಾ ಬದಲಾವಣೆ ಸೃಷ್ಟಿಸಬೇಕು ಎಂಬುದು ನಮ್ಮ ಮುಖ್ಯ ಉದ್ದೇಶವಾಗಿದೆ ಎಂದು ಕೆಪಿಸಿಸಿ ವೀಕ್ಷಕ ಡಾ.ಸಂಜಯ್‌ಗೌಡ ಹೇಳಿದರು.

ಪಟ್ಟಣದ ಮಾಜಿ ಶಾಸಕ ಸಿ.ಎಸ್.ಪುಟ್ಟೇಗೌಡ ಅವರ ನಿವಾಸದಲ್ಲಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಜು.2 ರಂದು ಅಧಿಕಾರ ಸ್ವೀಕಾರ ಮಾಡುವ ಹಿನ್ನೆಲೆ ಮಂಗಳವಾರ ಹಮ್ಮಿಕೊಂಡಿದ್ದ ಮುಖಂಡರು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.

ಮುಂದಿನ ದಿನಗಳು ಕಾಂಗ್ರೆಸ್ ಕಾರ್ಯಕರ್ತರ ಪಾಲಿಗೆ ಸಂತಸ ತರಲಿವೆ. ಕಳೆದ ಮೂರು ದಿನಗಳಿಂದ ತಾಲೂಕಿನಾದ್ಯಂತ ಪ್ರತಿಯೊಂದು ಗ್ರಾಮ ಪಂಚಾಯಿತಿ ಕೇಂದ್ರಗಳಿಗೆ ಭೇಟಿ ನೀಡಿ ಕಾರ್ಯಕರ್ತರ ಅಭಿಪ್ರಾಯ ಪಡೆಯುತ್ತಿದ್ದೇವೆ. ಈ ಕ್ಷೇತ್ರದಲ್ಲಿ ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತರು ತಲೆಎತ್ತಿ ಓಡಾಡುವಂತೆ ಮಾಡುವುದು ನಮ್ಮೆಲ್ಲರ ಕರ್ತವ್ಯ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಎಚ್.ಎಸ್.ವಿಜಯಕುಮಾರ್ ಮಾತನಾಡಿ, ಎಲ್ಲ ಪಂಚಾಯಿತಿ ವ್ಯಾಪ್ತಿಯಲ್ಲಿಯೂ ಸಭೆ ನಡೆಸಿದ್ದು ಉತ್ತಮ ಅಭಿಪ್ರಾಯ ವ್ಯಕ್ತವಾಗಿದೆ. ಜೆಡಿಎಸ್‌ನೊಂದಿಗೆ ಹೊಂದಾಣಿಕೆ ಬೇಡವೆಂಬ ಒತ್ತಾಯ ಕೇಳಿಬಂದಿದೆ. ಪುರಸಭೆ ವ್ಯಾಪ್ತಿಯಲ್ಲಿಯೂ ಅದೇ ಅನುಭವ ವೀಕ್ಷಕರಿಗೆ ಆಗಿದೆ ಎಂದರು.

ವಿಧಾನಪರಿಷತ್ ಸದಸ್ಯ ಎಂ.ಎ.ಗೋಪಾಲಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಜೆ.ಎಂ.ರಾಮಚಂದ್ರ ಮತ್ತು ಎಂ.ಕೆ.ಮಂಜೇಗೌಡ, ವೀಕ್ಷಕಿ ಕಮಲಾಕ್ಷಿ ರಾಜಣ್ಣ, ಎಪಿಎಂಸಿ ನಿರ್ದೇಶಕ ಎಂ.ಶಂಕರ್ ಯುವ ಮುಖಂಡರಾದ ಲಲಿತ್ ರಾಘವ್, ಕಿಶೋತ್ ಹಾಗೂ ಇತರರು ಇದ್ದರು.