ಉಡುಪಿ: ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ರಾಷ್ಟ್ರೀಕೃತ ಬ್ಯಾಂಕುಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವುದ ಜೊತೆಗೆ ಜನಸ್ನೇಹಿಯಾಗಬೇಕು. ಗ್ರಾಹಕರೊಂದಿಗೆ ವ್ಯವಹರಿಸಲು ಅನುಕೂಲವಾಗುವಂತೆ ಸ್ಥಳಿಯ ವ್ಯಕ್ತಿಗಳನ್ನು ನಿಯೋಜಿಸಬೇಕು ಎಂದು ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಕರೆ ನೀಡಿದರು.
ಮಣಿಪಾಲ ರಜತಾದ್ರಿಯ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಲೀಡ್ ಬ್ಯಾಂಕ್ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರಧಾನಮಂತ್ರಿ ಜೀವನಜ್ಯೋತಿ, ಸುರಕ್ಷಾ ಭೀಮಾ ಯೋಜನೆಯಡಿ ಹೆಚ್ಚಿನ ಫಲಾನುಭವಿಗಳು ಲಾಭ ಪಡೆಯುವಂತಾಗಬೇಕು. ಶೈಕ್ಷಣಿಕ ಯೋಜನೆಗಳಿಗೆ ಸಾಲ ನೀಡುವ ನಿಯಮಗಳು ಸರಳೀಕರಣ ಆಗಬೇಕು. ಸರ್ಕಾರದ ವಿವಿಧ ಯೋಜನೆಯಡಿ ಆಯ್ಕೆಯಾದ ಫಲಾನುಭವಿಗಳಿಗೆ ಆ ಯೋಜನೆಯ ಲಾಭಗಳು ಸಿಗಬೇಕು ಎಂದರು.
ಪಿ.ಎಂ.ಮುದ್ರಾ, ಸ್ಟಾರ್ಟ್ಅಪ್ ಯೋಜನೆಗಳಿಗೆ ಹೆಚ್ಚು ಆದ್ಯತೆ ನೀಡಿದ್ದಲ್ಲಿ ಜಿಲ್ಲೆಯಲ್ಲಿ ಸ್ವ-ಉದ್ಯೋಗ ಹೊಂದುವವರ ಸಂಖ್ಯೆ ಹೆಚ್ಚಾಗಲಿದ್ದು, ಇದರಿಂದ ಆರ್ಥಿಕ ಪ್ರಗತಿ ಹೆಚ್ಚಾಗಲಿದೆ. ಪಿ.ಎಂ.ವಿಶ್ವಕರ್ಮ ಯೋಜನೆಯಡಿ ಸಾಲ ವಿತರಣೆಯಲ್ಲಿ ಜಿಲ್ಲೆಯು ರಾಜ್ಯದಲ್ಲಿಯೇ ಎರಡನೇ ಸ್ಥಾನದಲ್ಲಿದೆ. ಇದನ್ನು ಮೊದಲನೇ ಸ್ಥಾನಕ್ಕೆ ತರುವಲ್ಲಿ ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು ಎಂದರು.
ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತಿಕ್ ಬಾಯಲ್ ಮಾತನಾಡಿ, ಜಿಲ್ಲೆಯಲ್ಲಿ ಆದ್ಯತಾ ವಲಯಕ್ಕೆ ಆರ್.ಬಿ.ಐ ನಿಯಮಾನುಸಾರ ನೀಡುವ ಆರ್ಥಿಕ ನೆರವು ಪ್ರಮಾಣ ಹೆಚ್ಚಾಗಬೇಕು. ಜಿಲ್ಲೆಯಲ್ಲಿ ಸ್ವ-ಸಹಾಯ ಗುಂಪಿನ ಮಹಿಳೆಯರು ಸ್ವ-ಉದ್ಯೋಗ ಪ್ರಾರಂಭಿಸಲು ಆರ್ಥಿಕ ನೆರವಿಗಾಗಿ ಅರ್ಜಿ ಸಲ್ಲಿಸಿದ್ದಲ್ಲಿ ಯೋಜನೆಗಳ ಹಾಗೂ ದಾಖಲಾತಿ ನಿರ್ವಹಣೆ ಬಗ್ಗೆ ಮಾಹಿತಿ ನೀಡಬೇಕು. ಯಾವುದೇ ಅರ್ಜಿಗಳು ತಿರಸತಗೊಳ್ಳದಂತೆ ನೋಡಿಕೊಳ್ಳಬೇಕು ಎಂದರು.
ಕೃಷಿ, ಶಿಕ್ಷಣ ಹಾಗೂ ಸ್ವ-ಸಹಾಯ ಗುಂಪುಗಳಿಗೆ ಆರ್ಥಿಕ ನೆರವು ನೀಡುವ ಸಂದರ್ಭದಲ್ಲಿ ಮುದ್ರಾಂಕ ಶುಲ್ಕವು ವಿನಾಯಿತಿ ಇದೆ. ಆದರೂ ಸಹ ಜಿಲ್ಲೆಯ ಕೆಲವು ಬ್ಯಾಂಕುಗಳಲ್ಲಿ ಮುದ್ರಾಂಕ ಶುಲ್ಕವನ್ನು ತೆಗೆದುಕೊಳ್ಳುತ್ತಿದ್ದಾರೆ ಎಂಬ ದೂರುಗಳು ಕೇಳಿ ಬರುತ್ತಿವೆ. ಈ ಬಗ್ಗೆ ಗಂಭೀರವಾಗಿ ಪರಿಗಣಿಸಲಾಗುವುದು. ಮುಂದಿನ ದಿನಗಳಲ್ಲಿ ಪುನರಾವರ್ತನೆಯಾದಲ್ಲಿ ಸೂಕ್ತ ಕ್ರಮಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದರು. ರೆನೆವಬಲ್ ಎನರ್ಜಿ, ಮೀನುಗಾರಿಕಾ ಾಮ್ರ್, ಸ್ವಯಂ ಉದ್ಯೋಗ ಸೇರಿದಂತೆ ವಿವಿಧ ಚಟುವಟಿಕೆಗಳನ್ನು ಕೈಗೊಳ್ಳಲು ನಿಗಧಿಪಡಿಸಿರುವ 12 ಲಕ್ಷ ರೂ. ಮೊತ್ತದ ಗುರಿಯನ್ನು ಸಾಧಿಸಿಲ್ಲ. ಬ್ಯಾಂಕುಗಳಿಗೆ ಸಾಮಾಜಿಕ ಜವಾಬ್ದಾರಿ ಇರುತ್ತದೆ. ಇದನ್ನು ಮನಗಂಡು ಕಾರ್ಯನಿರ್ವಹಿಸಬೇಕು ಎಂದರು.
ಉಡುಪಿ ಕೆನರಾ ಬ್ಯಾಂಕ್ ರೀಜನಲ್ ಮ್ಯಾನೆಜರ್ ತದಿನಾಡ ಶ್ರೀನಾಗ ಪೂರ್ಣಾನಂದ ಮಾತನಾಡಿ, ಜಿಲ್ಲೆಯಲ್ಲಿ 2024-&25 ನೇ ಸಾಲಿನಲ್ಲಿ ಕೃಷಿ ವಲಯಕ್ಕೆ 3830.27 ಕೋಟಿ ರೂ., ಎಂ.ಎಸ್.ಎಂ.ಇ ವಲಯಕ್ಕೆ 3119.68 ಕೋಟಿ ರೂ., ಶಿಕ್ಷಣ ವಲಯಕ್ಕೆ 132.73 ಕೋಟಿ ರೂ., ವಸತಿ ಕ್ಷೇತ್ರಗಳಿಗೆ 255.02 ಕೋಟಿ ರೂ., ಆದ್ಯತೇತರ ವಲಯಗಳಿಗೆ 6039.64 ಕೋಟಿ ರೂ. ನೀಡಲಾಗಿದೆ ಎಂದರು.
ಕಳೆದ ವರ್ಷಕ್ಕೆ ಹೋಲಿಸಿದ್ದಲ್ಲಿ ಬ್ಯಾಂಕಿಂಗ್ ಠೇವಣಿ ಅನುಪಾತವು ಶೇ.46.94 ಇದ್ದು, ಪ್ರಸಕ್ತ ಸಾಲಿನಲ್ಲಿ ಶೇ.47.68 ರಷ್ಟಾಗಿ ಶೇ. 0.74 ರಷ್ಟು ಏರಿಕೆಯಾಗಿದೆ. ಸಿ.ಡಿ ಅನುಪಾತದಲ್ಲಿ ಶೇ. 50 ಕ್ಕಿಂತ ಕಡಿಮೆ ಇರಬಾರದು. ಮುಂದಿನ ದಿನಗಳಲ್ಲಿ ಸಿ.ಡಿ ಅನುಪಾತ ಹೆಚ್ಚಿಸಲು ಎಲ್ಲಾ ಬ್ಯಾಂಕರ್ಸ್ಗಳು ಕಾರ್ಯಪ್ರವೃತ್ತರಾಗಬೇಕು ಎಂದರು. ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೇಜರ್ ಹರೀಶ್ ಜಿ, ನಬಾರ್ಡ್ನ ಡಿ.ಡಿ.ಎಂ ಸಂಗೀತಾ ಕಾರ್ಥಾ ಮತ್ತಿತರರು ಉಪಸ್ಥಿತರಿದ್ದರು.