ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ ಪುರಸಭೆಗೆ ಕೌನ್ಸಿಲರ್‌ಗಳೇ ಆಧಾರವಾಗಿದ್ದು, ತಮ್ಮ ವ್ಯಾಪ್ತಿಯ ಸಮಸ್ಯೆಗಳನ್ನು ನಿವಾರಿಸುವಲ್ಲಿ ಆಲಸ್ಯ ತೋರುವ ಕೌನ್ಸಿಲರ್‌ಗಳು, ಗುತ್ತಿಗೆದಾರರು, ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸುವುದು ವ್ಯರ್ಥ ಎಂದು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅಸಮಾಧಾನ ಹೊರಹಾಕಿದರು. ಕಾಪು ಪುರಸಭೆಯಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ಅಧಿಕಾರಿಗಳ ಕಾರ್ಯವೈಖರಿ ವಿರುದ್ಧ ಶಾಸಕರು ಅತೃಪ್ತಿ ವ್ಯಕ್ತಪಡಿಸಿದರು. ಪುರಸಭೆ ವ್ಯಾಪ್ತಿಯಲ್ಲಿ ಕುಡಿಯುವ ನೀರು ಪೂರೈಕೆ, ಪೈಪ್‌ಲೈನ್ ಕಾಮಗಾರಿಯಲ್ಲಿ ಲೋಪ, ಸಾರ್ವಜನಿಕರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸದಸ್ಯರು ಗಮನ ಸೆಳೆದರು. ಭಾರತ್ ನಗರ ವಾರ್ಡ್‌ಗೆ ಇದುವರೆಗೆ ನೀರು ಸರಬರಾಜು ಆಗಿಲ್ಲ. ಈ ಕುರಿತು ಮನವರಿಕೆ ಮಾಡಲೆಂದು ಕರೆ ಮಾಡಿದರೂ ಗುತ್ತಿಗೆದಾರರು ಕರೆ ಸ್ವೀಕರಿಸುತ್ತಿಲ್ಲ ಎಂದು ಸದಸ್ಯ ಅರುಣ್ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದರು. ಇಂಜಿನಿಯರ್ ರಕ್ಷಿತ್ ಮಾತನಾಡಿ, ಪುರಸಭೆ ವ್ಯಾಪ್ತಿ ಎಲ್ಲ ಕಾಮಗಾರಿಗಳನ್ನೂ ಹಂತಹಂತವಾಗಿ ಪೂರ್ಣಗೊಳಿಸಲು ಪ್ರಯತ್ನಿಸುತ್ತಿದ್ದೇವೆ. ಆದರೆ ಕೌನ್ಸಿಲರ್‌ಗಳು ಹಾಗೂ ಸಾರ್ವಜನಿಕರ ಅಸಹಕಾರದಿಂದ ವಿಳಂಬವಾಗುತ್ತಿದೆ ಎಂದರು. ಸಂಬಂಧಪಟ್ಟ ಅಧಿಕಾರಿಗಳು, ಇಂಜಿನಿಯರ್‌ಗಳು ಹಾಗೂ ಗುತ್ತಿಗೆದಾರರು ಪ್ರತೀ ವಾರ್ಡ್‌ಗೆ ತೆರಳಿ ಅಲ್ಲಿನ ಸಮಸ್ಯೆ ಪರಿಶೀಲಿಸುವುದರೊಂದಿಗೆ ಬಗೆಹರಿಸಲು ಮುಂದಾಗಬೇಕು ಎಂದು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಸೂಚಿಸಿದರು. ರಾಷ್ಟ್ರೀಯ ಹೆದ್ದಾರಿ 66ಕ್ಕೆ ಸಂಬಂಧಿಸಿ ಅನೇಕ ಸಮಸ್ಯೆಗಳಿದ್ದರೂ, ಪ್ರಾಧಿಕಾರದ ಯಾವ ಅಧಿಕಾರಿಯೂ ಸಭೆಗೆ ಹಾಜರಾಗುತ್ತಿಲ್ಲ. ಶಾಸಕರು ಈ ಬಗ್ಗೆ ವಿಶೇಷ ಮುತುವರ್ಜಿ ವಹಿಸಬೇಕು ಎಂದು ಸದಸ್ಯ ಕಿರಣ್ ಆಳ್ವ ಒತ್ತಾಯಿಸಿದರು. ಶಾಸಕರು ಪ್ರತಿಕ್ರಿಯಿಸಿ, ಪುರಸಭಾ ವ್ಯಾಪ್ತಿಯ ಸಮಸ್ಯೆಗಳ ಕುರಿತು ಪಟ್ಟಿ ಮಾಡಿ ನೀಡಿದರೆ ಪರಿಹರಿಸಲು ಪ್ರಯತ್ನಿಸುವೆ ಎಂದು ಭರವಸೆ ನೀಡಿದರು. ಸಭೆಯಲ್ಲಿ ಪುರಸಭೆ ಅಧ್ಯಕ್ಷೆ ಹರಿಣಾಕ್ಷಿ ದೇವಾಡಿಗ, ಉಪಾಧ್ಯಕ್ಷೆ ಸರಿತಾ ಶಿವಾನಂದ್, ಸ್ಥಾಯಿ ಸಮಿತಿ ಅಧ್ಯಕ್ಷ ಅನಿಲ್ ಕುಮಾರ್ ಉಪಸ್ಥಿತರಿದ್ದರು.
ಉಳಿಯಾರಗೋಳಿ ಭಾರತ್ ನಗರ ಅಂಗನವಾಡಿಯಲ್ಲಿ ಅವಧಿ ಮೀರಿದ ಆಹಾರ ಪತ್ತೆಯಾಗಿದೆ. ಇದನ್ನು ಸೇವಿಸಿದರೆ ಮಕ್ಕಳು, ಗರ್ಭಿಣಿಯರು ಹಾಗೂ ಬಾಣಂತಿಯರ ಆರೋಗ್ಯಕ್ಕೆ ಅಪಾಯವಿದ್ದು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ವಹಿಸಿರುವ ನಿರ್ಲಕ್ಷೃ ದೊಡ್ಡ ಅನಾಹುತಕ್ಕೆ ಕಾರಣವಾಗಬಹುದು. ಅಲ್ಲದೇ, ಈ ಇಲಾಖೆಯ ಅಧಿಕಾರಿಗಳು ಕೆಲವು ವರ್ಷಗಳಿಂದ ಯಾವುದೇ ಸಭೆಗಳಿಗೆ ಹಾಜರಾಗಿಲ್ಲ ಎಂದು ಸದಸ್ಯ ಅರುಣ್ ಶೆಟ್ಟಿ ಆರೋಪಿಸಿದರು. ಮುಖ್ಯಾಧಿಕಾರಿ ನಾಗರಾಜ್ ಸಿ. ಮಧ್ಯಪ್ರವೇಶಿಸಿ, ಅಧಿಕಾರಿಗಳಿಗೆ, ಇಲಾಖೆಗಳಿಗೆ ಶಾಸಕರೇ ನಿರ್ದೇಶನ ನೀಡಬೇಕು. ಮೇಲಧಿಕಾರಿಗಳಿಗೆ ಪತ್ರ ಬರೆಯಲಷ್ಟೇ ನಮಗೆ ಅವಕಾಶವಿದೆ ಅಸಹಾಯಕತೆ ವ್ಯಕ್ತಪಡಿಸಿದರು.
ಪಶುಸಂಗೋಪನಾ ಇಲಾಖೆಯ ಕಾರ್ಯವೈಖರಿ ಕುರಿತು ಕೇಳಿದ ಪ್ರಶ್ನೆಗೆ ಸಮಜಾಯಿಷಿ ನೀಡಿದ ಸಹಾಯಕ ನಿರ್ದೇಶಕ ಡಾ.ವೆಂಕಟಗಿರಿ ಅವರನ್ನು ಪುರಸಭೆ ಸದಸ್ಯರು ತಾರಟೆಗೆ ತೆಗೆದುಕೊಂಡರು.