ಹುಬ್ಬಳ್ಳಿ: ಮಳೆಗಾಲದಲ್ಲಿ ಸಂಚಾರಕ್ಕೂ ಬಾರದಂತಾಗಿದ್ದ ರಸ್ತೆ ಇದೀಗ ದುರಸ್ತಿಯಾಗಿವೆ. ರಾಡಿ, ಕೊಳಕು ಚಿಮ್ಮುತ್ತ ಹೋಗುತ್ತಿದ್ದ ವಾಹನ ಸವಾರರು ಈಗ ನಿಟ್ಟುಸಿರು ಬಿಟ್ಟಿದ್ದಾರೆ. ಕೆಸರು ತುಳಿದು ಮನೆಯೊಳಗೆ ಹೋಗಬೇಕಾದ ಪ್ರಸಂಗ ಈಗ ಇಲ್ಲಿನ ಮನೆಯವರಿಗೆ ಇಲ್ಲ.
ಇಲ್ಲಿಯ ನವನಗರ ಬಳಿಯ ಗಾಮನಗಟ್ಟಿ- ಭೈರಿದೇವರಕೊಪ್ಪ ರಸ್ತೆಯಲ್ಲಿರುವ ಕೆಸಿಸಿ ಬ್ಯಾಂಕ್ ಲೇಔಟ್ ನಿವಾಸಿಗಳಿಗೆ ಇದೀಗ ಒಂದಿಷ್ಟು ನೆಮ್ಮದಿ ಸಿಕ್ಕಂತಾಗಿದೆ.
ಹೌದು. ಮಳೆಗಾಲದಲ್ಲಿ ರಾಡಿಮಯ ರಸ್ತೆಗಳಲ್ಲಿ ಸಂಚರಿಸುವುದೇ ದುಸ್ಸಾಹಸದ ಕೆಲಸವಾಗಿತ್ತು. ಮಣ್ಣಿನ ಕಚ್ಚಾ ರಸ್ತೆಗಳಿದ್ದ ಇಲ್ಲಿ ಮಳೆ ಬರುತ್ತಲೇ ಎಲ್ಲೆಡೆ ನೀರು ನಿಂತು ಸಂಚಾರ ದುಸ್ತರವಾಗುತ್ತಿತ್ತು. ಕೆಲದಿನಗಳಿಂದ ಮಳೆ ಸುರಿದು ರಸ್ತೆಯೋ, ಕೆಸರುಗದ್ದೆಯೋ ಎಂಬಂತಾಗಿತ್ತು.
ಇಲ್ಲಿ ವಾಹನ ಸವಾರರು, ಪಾದಚಾರಿಗಳು ಓಡಾಡಲು ಪಡುತ್ತಿದ್ದ ತೊಂದರೆ ಕುರಿತು ವಿಜಯವಾಣಿ ಗುರುವಾರ "ಕೆಸಿಸಿ ಬ್ಯಾಂಕ್ ಲೇಔಟ್ ರಸ್ತೆ ದುರಸ್ತಿ ಮಾಡಿ' ತಲೆಬರೆಹದಡಿ ವರದಿ ಪ್ರಕಟಿಸಿತ್ತು.
ವರದಿ ಗಮನಿಸಿದ ವಲಯ ಕಚೇರಿ ಸಹಾಯಕ ಆಯುಕ್ತ ರಮೇಶ ನೂಲ್ವಿ ಅವರು ಕೂಡಲೇ ಸ್ಥಳ ಪರಿಶೀಲನೆ ನಡೆಸಿದರು.
ಎಇಇ ಮಂಜುಳಾ ಹಿರೇಮಠ, ಇಂಜಿನಿಯರ್ ಸೌಮ್ಯಾ ರಜಪೂತ ಅವರೊಂದಿಗೆ ಲೇಔಟ್ ಗೆ ಆಗಮಿಸಿದ ಅವರು ಸುಗಮ ಸಂಚಾರಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಿದರು.
ರಸ್ತೆ ಮಧ್ಯದಲ್ಲಿ ನಿಂತಿದ್ದ ಕೊಳಕು ತೆಗೆದು ಹಾಕಿ, ಜೆಸಿಬಿ ಸಹಾಯದಿಂದ ಸಮತಟ್ಟು ಮಾಡಿಸಲಾಯಿತು. ನಂತರ ಅಗೆದ ಡಾಂಬರ್ ರಸ್ತೆಯ ತ್ಯಾಜ್ಯವನ್ನು ಹಾಕಿ, ನೀರು ನಿಲ್ಲದಂತೆ ಮಾಡಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೆಸಿಸಿ ಬ್ಯಾಂಕ್ ಲೇಔಟ್ ನಲ್ಲಿ ಪಕ್ಕಾ ರಸ್ತೆಗಳ ನಿರ್ಮಾಣಕ್ಕೆ ಪಾಲಿಕೆ ಸದಸ್ಯರಾದ ಚಂದ್ರಶೇಖರ ಮನಗುಂಡಿ ಹಾಗೂ ಮಲ್ಲಿಕಾರ್ಜುನ ಗುಂಡೂರ ಅವರು ಅನುದಾನ ಒದಗಿಸುವ ಭರವಸೆ ನೀಡಿದ್ದಾರೆ. ಮಳೆಗಾಲದ ನಂತರ ಟೆಂಡರ್ ಕರೆಯಲಾಗುವುದು. ಅಲ್ಲಿಯವರೆಗೂ ತಾತ್ಕಾಲಿಕ ಪರಿಹಾರ ನೀಡಲಾಗಿದೆ ಎಂದು ವಲಯ ಕಚೇರಿ ಸಹಾಯಕ ಆಯುಕ್ತ ರಮೇಶ ನೂಲ್ವಿ ತಿಳಿಸಿದ್ದಾರೆ.