ಲಕ್ಷ್ಮೇಶ್ವರ: ಮುಕ್ತಿಮಂದಿರ ಧರ್ಮಕ್ಷೇತ್ರದಲ್ಲಿ ತ್ರಿಕೋಟಿ ಶಿವಲಿಂಗ ಸ್ಥಾಪನೆಯ ಮಹೋನ್ನತ ಕೈಗೊಳ್ಳುವ ಬಗ್ಗೆ ಚರ್ಚಿಸಲು ಆ. 29ರಂದು ಬೆಳಗ್ಗೆ 10.30ಕ್ಕೆ ಲಕ್ಷ್ಮೇಶ್ವರದ ರಂಭಾಪುರಿ ಜ. ವೀರಗಂಗಾಧರ ಕಲ್ಯಾಣ ಮಂಟಪದಲ್ಲಿ ಪೂರ್ವಭಾವಿ ಸಭೆ ಕರೆಯಲಾಗಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ತಮ್ಮ ಸಲಹೆ-ಸೂಚನೆ ನೀಡಬೇಕು ಎಂದು ಧರ್ಮಕ್ಷೇತ್ರದ ಪಟ್ಟಾಧ್ಯಕ್ಷರಾದ ಶ್ರೀ ವಿಮಲರೇಣುಕ ವೀರಮುಕ್ತಿಮುನಿ ಶಿವಾಚಾರ್ಯರು ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಲಿಂ. ಜ. ವೀರಗಂಗಾಧರ ಜಗದ್ಗುರುಗಳು ಭೂಕೈಲಾಸ ಮುಕ್ತಿಮಂದಿರ ಧರ್ಮಕ್ಷೇತ್ರದಲ್ಲಿ ತ್ರಿಕೋಟಿ ಶಿವಲಿಂಗ ಸ್ಥಾಪನೆಯಾಗಬೇಕೆಂಬ ಸಂಕಲ್ಪ ಹೊಂದಿದ್ದರು. ಅವರ ಸಂಕಲ್ಪ ಈಡೇರಿಕೆಗಾಗಿ ಈಗಾಗಲೇ ಭಕ್ತರ ಸಹಕಾರದಿಂದ ಕ್ಷೇತ್ರದಲ್ಲಿ ಬೇಕಾಗುವ 6 ಸಾವಿರ ಶಿವಲಿಂಗಗಳನ್ನು ಸಂಗ್ರಹಿಸಲಾಗಿದೆ. ಇದೀಗ ಬಾಳೇಹೊನ್ನೂರಿನ ರಂಭಾಪುರಿ ವೀರಸೋಮೇಶ್ವರ ಜಗದ್ಗುರುಗಳು, ನೊಣವಿನಕೇರಿ ಶ್ರೀಗಳ ಆಶೀರ್ವಾದದಿಂದ ಲಿಂ. ವೀರಗಂಗಾಧರ ಜಗದ್ಗುರುಗಳ (ಅಜ್ಜಯ್ಯ) ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಡಿಸಿಎಂ ಮತ್ತು ಶ್ರೀಮಠದ ಭಕ್ತ ಡಿ.ಕೆ. ಶಿವಕುಮಾರ ಅವರ ಸಹಕಾರದಿಂದ ಕ್ಷೇತ್ರದಲ್ಲಿ ತ್ರಿಕೋಟಿ ಶಿವಲಿಂಗ ಸ್ಥಾಪನೆಯ ಮಹೋನ್ನತ ಕಾರ್ಯ ಸಿದ್ಧಿಸುವ ಕಾಲ ಕೂಡಿಬಂದಿದೆ. ಲಿಂ. ಜಗದ್ಗುರುಗಳ ಸಂಕಲ್ಪದ ಕಾರ್ಯ ಯಶಸ್ವಿಯಾಗುವಲ್ಲಿ ಭಕ್ತರ ಸ್ವಯಂ ಪ್ರೇರಿತ ಸಹಕಾರ-ಪಾಲ್ಗೊಳ್ಳುವಿಕೆ ಅಗತ್ಯ. ಸಭೆಯಲ್ಲಿ ಶಾಸಕರು, ಮಾಜಿ ಶಾಸಕರು, ಹಿರಿಯರು ಉಪಸ್ಥಿತರಿರುವರು ಎಂದು ಶ್ರೀಗಳು ತಿಳಿಸಿದ್ದಾರೆ.