ಲಕ್ಷ್ಮೇಶ್ವರ: ಲಕ್ಷ್ಮೇಶ್ವರ ತಾಲೂಕಿನ ಶೆಟ್ಟಿಕೆರೆ, ಕಪ್ಪತಗುಡ್ಡದ ಭಾಗದಲ್ಲಿ ಅಳಿವಿನಂಚಿನಲ್ಲಿರುವ ನಕ್ಷತ್ರ ಆಕಾರದ ಆಮೆಯನ್ನು ಅರಣ್ಯ ಇಲಾಖೆಯ ನೌಕರ ಪ್ರಕಾಶ ಗಾಣಗೇರ ಎಂಬುವರು ಪತ್ತೆ ಹಚ್ಚಿದ್ದಾರೆ.
ಟೆಸ್ಟುಡಿನಿಡೆ ಕುಟುಂಬಕ್ಕೆ ಸೇರಿದ ನಕ್ಷತ್ರ ಆಮೆ (ವೈಜ್ಞಾನಿಕ ಹೆಸರು: ಜಿಯೋಚೆಲೋನ್ ಎಲೆಗನ್ಸ್) ಆವಾಸ ನಾಶ ಮತ್ತು ಕಳ್ಳಬೇಟೆಯಿಂದಾಗಿ ಅಳಿವಿನಂಚಿನಲ್ಲಿರುವ ಜಾತಿಯ ಆಮೆ. ನಕ್ಷತ್ರ ಆಮೆಗಳು 10 ಇಂಚಿನಷ್ಟು ಉದ್ದದವರೆಗೂ ಬೆಳೆಯುತ್ತವೆ. ಇದರ ದೇಹದ ಮೇಲೆ ನಕ್ಷತ್ರ ಆಕಾರದ ಗಾಢ ವರ್ಣದ ವಿನ್ಯಾಸ ಇರುತ್ತವೆ. ಮನೆಯಲ್ಲಿ ಆಮೆಗಳನ್ನು ಸಾಕಿದರೆ ಧನ ವೃದ್ಧಿಯಾಗುವುದೆಂಬ ನಂಬಿಕೆಯಿಂದ ಸಾಕಲು ಮುಂದಾದರೆ ಅವು ಬಹಳ ದಿನ ಬದುಕುವುದಿಲ್ಲ. ಚಿಪ್ಪು ಮತ್ತು ಮಾಂಸಕ್ಕಾಗಿ ಇವುಗಳ ಕಳ್ಳಬೇಟೆಯಿಂದಾಗಿ ಅಳಿವಿನಂಚಿಗೆ ತಲುಪುತ್ತಿವೆ ಎನ್ನುತ್ತಾರೆ ಜೀವವೈವಿಧ್ಯ ಸಂಶೋಧಕ ಮಂಜುನಾಥ ಎಸ್. ನಾಯಕ.
1990ರಲ್ಲಿ ದಿನಾಚರಣೆ: ಅಳಿವಿನಂಚಿನಲ್ಲಿರುವ ಆಮೆಗಳ ರಕ್ಷಣೆ, ಆಮೆಗಳ ಜೀವನ ಕ್ರಮದ ಬಗ್ಗೆ ಜ್ಞಾನಾರ್ಜನೆ ಹಾಗೂ ಅವುಗಳ ಉಳಿವಿಗಾಗಿ ಮಾನವರ ಸಹಕಾರವನ್ನು ಉತ್ತೇಜಿಸುವ ಸಲುವಾಗಿ ಮೇ 23ರಂದು ವಿಶ್ವ ಆಮೆ ದಿನ ಆಚರಿಸಲಾಗುತ್ತದೆ. ಅಮೆರಿಕದ ಟಾರ್ಟಾಯ್ಸ ರೆಸ್ಕ್ಯೂ ಸಂಸ್ಥೆ 1990ರಲ್ಲಿ ಈ ದಿನಾಚರಣೆ ಹುಟ್ಟು ಹಾಕಿತು.
ಆಮೆ ದಿನದ ಮಹತ್ವ: ಅಳಿವಿನಂಚಿನಲ್ಲಿರುವ ಆಮೆ ಪ್ರಭೇದಗಳನ್ನು ಗುರುತಿಸಿ ಅವುಗಳನ್ನು ರಕ್ಷಿಸುವುದು ಈ ದಿನದ ಪ್ರಮುಖ ಉದ್ದೇಶವಾಗಿದೆ. ಆಮೆ ರೂಪದ ಉಡುಪು ಅಥವಾ ಹಸಿರು ಉಡುಪುಗಳನ್ನು ಧರಿಸುವ ಮೂಲಕ ಹಾಗೂ ಆಮೆಗಳ ಬಗ್ಗೆ ಶಿಕ್ಷಣ ನೀಡುವ ಮೂಲಕ ಈ ದಿನವನ್ನು ಆಚರಿಸಲಾಗುತ್ತದೆ.
ವಿಶ್ವದ ಅತ್ಯಂತ ಹಳೆಯ ಸರೀಸೃಪ ಗುಂಪುಗಳಿಗೆ ಸೇರಿರುವ ಆಮೆ ಡೈನೋಸಾರ್, ಹಾವು, ಮೊಸಳೆ ಮತ್ತು ಅಲಿಗೇಟರ್‌ಗಳಿಗಿಂತ ಹೆಚ್ಚು ಹಿಂದಿನ ಕಾಲದ್ದಾಗಿದೆ. ಪ್ರಪಂಚದಲ್ಲಿ 300 ರೀತಿಯ ಆಮೆಗಳಿವೆ, ಅವುಗಳಲ್ಲಿ 129 ಜಾತಿಯ ಆಮೆಗಳು ಅಳಿವಿನಂಚಿನಲ್ಲಿವೆ. ಅದಕ್ಕಾಗಿಯೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಶ್ವ ಆಮೆ ದಿನ ಆಚರಿಸಲಾಗುತ್ತಿದೆ.
ಸಂಘ ಸಂಸ್ಥೆಗಳು ಈ ದಿನದಂದು ಹಲವಾರು ಚಟುವಟಿಕೆ ಆಯೋಜಿಸುತ್ತವೆ. ವಿದ್ಯಾರ್ಥಿಗಳು ಈ ದಿನದ ಬಗ್ಗೆ ತಿಳಿದುಕೊಳ್ಳಲು ಶಾಲೆಗಳಲ್ಲಿ ಅನೇಕ ಸೆಮಿನಾರ್‌ಗಳನ್ನು ಸಹ ನಡೆಸಲಾಗುತ್ತದೆ. ವನ್ಯಜೀವಿಗಳನ್ನು ರಕ್ಷಿಸಿಸುವುದು ಎಂದರೆ ನಮ್ಮ ಭವಿಷ್ಯದ ಉಳಿವನ್ನು ರಕ್ಷಿಸಿದಂತೆ. ಆದ್ದರಿಂದ ವನ್ಯಜೀವಿಗಳ ಜತೆ ಸಹಬಾಳ್ವೆ ನಡೆಸುವುದು ಉತ್ತಮ ಭವಿಷ್ಯದ ಭರವಸೆ ನೀಡುತ್ತದೆ.