ಲಕ್ಷ್ಮೇಶ್ವರ: ಲಕ್ಷ್ಮೇಶ್ವರ-ಮಾಗಡಿವರೆಗಿನ ಕಾರವಾರ- ಇಳಕಲ್ ರಾಜ್ಯ ಹೆದ್ದಾರಿಯ ಆಯ್ದ ಭಾಗದಲ್ಲಿ 9.95 ಕೋಟಿ ರೂ. ವೆಚ್ಚದಲ್ಲಿ ಕೈಗೊಂಡಿರುವ ರಸ್ತೆ ಅಭಿವೃದ್ಧಿ ಕಾಮಗಾರಿ ಕಳಪೆಯಾಗಿದೆ. ಗುಣಮಟ್ಟದ ಕಾಮಗಾರಿ ಮಾಡುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ತಾಲೂಕು ಘಟಕದ ಪದಾಧಿಕಾರಿಗಳು ಮಂಗಳವಾರ ವಾಹನ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.
ಕರವೇ ಜಿಲ್ಲಾಧ್ಯಕ್ಷ ಶರಣು ಗೋಡಿ ಮಾತನಾಡಿ, ಮಾಗಡಿ- ಲಕ್ಷ್ಮೇಶ್ವರ ರಸ್ತೆ ಸಂಪೂರ್ಣ ಹಾಳಾಗಿದ್ದು, ರಸ್ತೆ ಅಭಿವೃದ್ಧಿಪಡಿಸಬೇಕು ಎಂದು ಒತ್ತಾಯಿಸಿ ಎಂಟು ತಿಂಗಳ ಹಿಂದೆ ಕರವೇ ವಿವಿಧ ಸಂಘಟನೆಗಳ ಸಹಕಾರದಲ್ಲಿ ಹೋರಾಟ ಮಾಡಲಾಗಿತ್ತು. ಅದರ ಫಲವಾಗಿ ಸರ್ಕಾರ ಆಯ್ದ ಭಾಗದಲ್ಲಿ ಡಾಂಬರೀಕರಣ ಮತ್ತು ಪಟ್ಟಣದ ಹೊಸ ಬಸ್ ನಿಲ್ದಾಣದ ಹತ್ತಿರ ಕಾಂಕ್ರೀಟ್ ಹಾಕಲು 9.95 ಕೋಟಿ ರೂ. ಅನುದಾನ ಬಿಡುಗಡೆಗೊಳಿಸಿತ್ತು. ರಸ್ತೆ ಮಾಡಿದ ತಿಂಗಳೊಳಗೆ ಡಾಂಬರ್ ಕಿತ್ತು ಹೋಗಿದೆ, ಸಿಸಿ ರಸ್ತೆಯೂ ಕಳಪೆಯಾಗಿದೆ ಎಂದು ದೂರಿದರು.
ಪಿಡಬ್ಲುೃಡಿ ಹಿರಿಯ ಅಧಿಕಾರಿಗಳು ಕಾಮಗಾರಿಯ ಗುಣಮಟ್ಟ ಪರೀಕ್ಷಿಸಬೇಕು. 15 ದಿನದೊಳಗೆ ಕಳಪೆಯಾಗಿರುವ ಕಾಮಗಾರಿ ಸರಿಪಡಿಸಬೇಕು ಎಂದು ಆಗ್ರಹಿಸಿದರು. ಕರವೇ ಕಾರ್ಯಕರ್ತರು ಅಧಿಕಾರಿಗಳ ಎದುರೇ ಬಸ್ ನಿಲ್ದಾಣದ ಮುಂದಿನ ಸಿಸಿ ರಸ್ತೆಯನ್ನು ಸ್ವಚ್ಛಗೊಳಿಸಿ, ಬಿರುಕು ಬಿಟ್ಟ ಸಿಸಿ ರಸ್ತೆಯನ್ನು ಇಂಜಿನಿಯರ್‌ಗೆ ತೋರಿಸಿ, ಅಧಿಕಾರಿ ಮತ್ತು ಗುತ್ತಿಗೆದಾರರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪಿಡಬ್ಲುೃಡಿ ತಾಲೂಕು ಕಾರ್ಯನಿರ್ವಾಹಕ ಇಂಜಿನಿಯರ್ ಫಕೀರೇಶ ತಿಮ್ಮಾಪುರ ಮಾತನಾಡಿ, ಕಾಮಗಾರಿ ಗುಣಮಟ್ಟದ ಪರೀಕ್ಷೆ ನಡೆಸಲಾಗುವುದು. ಕಳಪೆಯಾಗಿರುವುದು ಸಾಬೀತಾದರೆ ಗುತ್ತಿಗೆದಾರರಿಂದ ಮರು ಕಾಮಗಾರಿ ಮಾಡಿಸಲಾಗುವುದು. ಅದಕ್ಕೆ 15 ದಿನಗಳ ಕಾಲಾವಕಾಶ ನೀಡಬೇಕು ಎಂದರು. ಕರವೇ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಬಸವರಾಜ ಹೊಗೆಸೊಪ್ಪಿನ, ತಾಲೂಕಾಧ್ಯಕ್ಷ ಲೋಕೇಶ ಸುತಾರ, ತಾಲೂಕು ಪ್ರಧಾನ ಕಾರ್ಯದರ್ಶಿ ಪ್ರಕಾಶ ಕೊಂಚಿಗೇರಿಮಠ, ಪ್ರವೀಣ ಗೌರಿ, ಅರುಣ ಮೆಕ್ಕಿ, ಅಸ್ಪಾಕ್ ಬಾಗೋಡಿ, ಮೈನು ಮನಿಯಾರ, ಗಂಗಾಧರ ಕೊಂಚಿಗೇರಿಮಠ, ಗಣೇಶ ಮೆಹರವಾಡೆ, ಬಸವರಾಜ ಮಡಿವಾಳರ, ಮುತ್ತು ಕರ್ಜೆಕಣ್ಣವರ, ಬಸವರಾಜ ಮಲ್ಲೂರ, ಪ್ರಕಾಶ ಹುಡೇದ, ಮಹಾಂತೇಶ ಕುರಿ, ಬಸವನಗೌಡ ಪಾಟೀಲ, ಮಹಿಳಾ ಘಟಕ ತಾಲೂಕಾಧ್ಯಕ್ಷೆ ಸಾವಿತ್ರಿ ಅತ್ತಿಗೇರಿ, ಶೇಖವ್ವ ಗೋಡಿ, ಹುಲಿಗೆವ್ವ ಮೇವುಂಡಿ, ಇತರರಿದ್ದರು. ಸಿಪಿಐ ಎಸ್.ಎಂ. ಶಿರಗುಪ್ಪಿ, ಪಿಎಸ್‌ಐ ಯೂಸೆಫ್ ಜಮುಲಾ ಮುಂಜಾಗ್ರತಾ ಕ್ರಮವಾಗಿ ಭದ್ರತೆ ಒದಗಿಸಿದ್ದರು.