ಜಿಲ್ಲೆ

ಸೌಹಾರ್ದ ಬೆಸೆಯುವ ಜಾತ್ರೆ, ಉತ್ಸವಗಳು

ವಿರೂಪಾಕ್ಷಯ್ಯ ಗುದ್ನಯ್ಯನವರಮಠ

ಲಕ್ಷ್ಮೇಶ್ವರ: ಪಟ್ಟಣದ ಕೆಂಚಲಾಪುರ ಓಣಿಯಲ್ಲಿನ ಬನಶಂಕರಿ ದೇವಿ ದೇವಸ್ಥಾನದ ಜಾತ್ರಾ ಮಹೋತ್ಸವ ಅಂಗವಾಗಿ ಜರುಗಿದ ನೂತನ ರಥೋತ್ಸವವನ್ನು ಶನಿವಾರ ಹೂವಿನಶಿಗ್ಲಿ ಮಠದ ಶ್ರೀ ಚನ್ನವೀರ ಮಹಾಸ್ವಾಮೀಜಿ ನೆರವೇರಿಸಿದರು.
ಧರ್ಮಸಭೆ ಉದ್ದೇಶಿಸಿ ಆಶೀರ್ವಚನ ನೀಡಿದ ಶ್ರೀಗಳು, ಜಾತ್ರೆ, ಧಾರ್ಮಿಕ ಕಾರ್ಯಕ್ರಮಗಳು, ಹಬ್ಬ-ಹರಿದಿನಗಳು ಪರಸಪರರಲ್ಲಿ ಸ್ನೇಹ, ಸೌಹಾರ್ಧತೆ ಬೆಸೆಯುವ ಜತೆಗೆ ಸಾತ್ವಿಕ ಸಮಾಜ ನಿರ್ಮಾಣಕ್ಕೆ ಕಾರಣವಾಗುತ್ತವೆ. ಜನರಿಗೆ ಶಾಂತಿ- ನೆಮ್ಮದಿ ಕರುಣಿಸುವ, ಸನ್ಮಾರ್ಗ ತೋರುವ ದೇವಸ್ಥಾನಗಳಲ್ಲಿ ನಿತ್ಯ ಪೂಜಾಕೈಂಕರ್ಯಗಳು ನಡೆಯಬೇಕು. ಎಲ್ಲಿ ಸ್ತ್ರೀಯರು ಗೌರವಿಸಲ್ಪಡುತ್ತಾರೋ ಅಲ್ಲಿ ದೇವತೆಗಳು ನೆಲೆಸುತ್ತಾರೆ ಆದ್ದರಿಂದ ಮಹಿಳೆಯರನ್ನು ಪೂಜ್ಯನೀಯ ಭಾವನೆಯಿಂದ ಕಾಣಬೇಕು ಎಂದು ಹೇಳಿದರು.
5 ವರ್ಷಗಳ ಹಿಂದೆ ಜೀರ್ಣೋದ್ಧಾರಗೊಂಡ ದೇವಸ್ಥಾನಕ್ಕೆ 75 ಲಕ್ಷ ರೂ. ವೆಚ್ಚದಲ್ಲಿ ನೂತನ ರಥ ನಿರ್ಮಾಣಗೊಂಡಿದೆ. 3 ದಿನಗಳಿಂದ ಜಾತ್ರಾ ಮಹೋತ್ಸವ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಗುರುವಾರ ಕಳಸಾರೋಹಣ, ಶುಕ್ರವಾರ ಹೋಮ ಹವನ ಪೂಜಾ ಕೈಂಕರ್ಯಗಳು, ಶನಿವಾರ ಶ್ರೀದೇವಿಮೂರ್ತಿಗೆ ಅಭಿಷೇಕ ವಿಶೇಷ ಅಲಂಕಾರ ನಡೆದು ಮಂಜುನಾಥ ಬೇವಿನಮರದ ದಂಪತಿ 1008 ಮಹಿಳೆಯರಿಗೆ ಉಡಿ ತುಂಬುವುದು ಮತ್ತು ಸತ್ಯನಾರಾಯಣ ಪೂಜಾ ಕಾರ್ಯಕ್ರಮ ನಡೆಯಿತು. ಸಂಜೆ ರಥೋತ್ಸವ ಬಳಿಕ ಧರ್ಮಸಭೆ ನಡೆಯಿತು. ಶಾಸಕ ಡಾ. ಚಂದ್ರು ಲಮಾಣಿ, ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ, ಮಹಾಬಳೇಶ್ವರಪ್ಪ ಬೇವಿನಮರದ, ಬನಶಂಕರಿ ಸೇವಾ ಸಮಿತಿ ಅಧ್ಯಕ್ಷ ನಾರಾಯಣಪ್ಪ ಗಾರ್ಗಿ, ಲಕ್ಷ್ಮಣ ಮೆಡ್ಲೇರಿ, ಸುನೀಲ ಮಹಾಂತಶೆಟ್ಟರ, ಈಶ್ವರ ಮೆಡ್ಲೇರಿ, ಗಣೇಶ ಬೇವಿನಮರದ ಸೇರಿ ಹಿರಿಯರು ಇದ್ದರು.