ಜಿಲ್ಲೆ

ಕಲಾಪದಿಂದ ದೂರು ಉಳಿದು ವಕೀಲರ ಪ್ರತಿಭಟನೆ

ಮಂಜುನಾಥ ತಿಮ್ಮಯ್ಯ

ಮೈಸೂರು: ಕಲಬುರಗಿಯಲ್ಲಿ ವಕೀಲನ ಹತ್ಯೆ ಪ್ರಕರಣವನ್ನು ಖಂಡಿಸಿ ವಕೀಲರು ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.
ಕೋರ್ಟ್ ಕಲಾಪದಿಂದ ದೂರ ಉಳಿದು, ನ್ಯಾಯಾಲಯದ ಎದುರಿನ ಗಾಂಧಿ ಪುತ್ಥಳಿ ಬಳಿ ಎದುರು ಜಮಾವಣೆಗೊಂಡು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.


ಕಲಬುರಗಿಯಲ್ಲಿ ವಕೀಲ ಈರಣ್ಣ ಗೌಡ ಹತ್ಯೆ ಪ್ರಕರಣ ಖಂಡನೀಯ. ತಕ್ಷಣ ತಪ್ಪಿತಸ್ಥರನ್ನು ಬಂಧಿಸಿ, ಕಾನೂನು ಪ್ರಕಾರ ಶಿಕ್ಷೆ ಕೊಡಿಸಬೇಕು. ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸಿದಂತೆ ಕ್ರಮ ವಹಿಸಬೇಕು. ಅದಕ್ಕಾಗಿ ವಕೀಲರ ಸಂರಕ್ಷಣಾ ಮಸೂದೆಯನ್ನು ಬೆಳಗಾವಿಯಲ್ಲಿ ನಡೆಯುತ್ತಿರುವ ಪ್ರಸಕ್ತ ಚಳಿಗಾಲದ ಅಧಿವೇಶನದಲ್ಲೇ ಮಂಡಿಸಿ ಅಂಗೀಕಾರ ಪಡೆದುಕೊಳ್ಳಬೇಕು ಎಂದು ಆಗ್ರಹಿಸಿದರು.


ಮೈಸೂರು ವಕೀಲರ ಸಂಘದ ಅಧ್ಯಕ್ಷ ಎಂ.ಮಹದೇವಸ್ವಾಮಿ ಮಾತನಾಡಿ, ರಾಜ್ಯದಲ್ಲಿ ವಕೀಲರ ಮೇಲೆ ನಿರಂತರವಾಗಿ ಹಲ್ಲೆಗಳು ನಡೆಯುತ್ತಿದ್ದು, ರಕ್ಷಣೆ ಇಲ್ಲದಂತಾಗಿದೆ. ಚಿಕ್ಕಮಗಳೂರಿನಲ್ಲಿ ವಕೀಲರ ಮೇಲೆ ಪೊಲೀಸರು ಅಮಾನುಷವಾಗಿ ಹಲ್ಲೆ ನಡೆಸಿ ಅವಮಾನಿಸಿದ್ದಾರೆ. ಹಲ್ಲೆ ನಡೆಸಿದ ಪೊಲೀಸರನ್ನು ಸರ್ಕಾರ ಕೂಡಲೇ ಸೇವೆಯಿಂದ ವಜಾ ಮಾಡಬೇಕು. ಇದೀಗ ವಕೀಲರ ಹತ್ಯೆಯಾಗಿದೆ. ಆದ್ದರಿಂದ ಆಗಸ್ಟ್‌ನಲ್ಲಿ ಮೈಸೂರಿನಲ್ಲಿ ನಡೆದ ವಕೀಲರ ಸಮ್ಮೇಳನದಲ್ಲಿ ಮುಖ್ಯಮಂತ್ರಿ ಅವರು ಭರವಸೆ ನೀಡಿದಂತೆ ಪ್ರಸಕ್ತ ಅಧಿವೇಶನದಲ್ಲಿ ವಕೀಲರ ಸಂರಕ್ಷಣಾ ಮಸೂದೆಗೆ ಅಂಗೀಕಾರ ಪಡೆದು ಕಾಯ್ದೆಯನ್ನು ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.


ಸಂಘದ ಉಪಾಧ್ಯಕ್ಷ ಪುಟ್ಟಸಿದ್ದೇಗೌಡ, ಕಾರ್ಯದರ್ಶಿ ಎಸ್.ಉಮೇಶ್, ಖಜಾಂಚಿ ಎಚ್.ಎಸ್.ಮಹದೇವಸ್ವಾಮಿ, ಜಂಟಿ ಕಾರ್ಯದರ್ಶಿ ಜಿ.ಎಂ.ನಾಗೇಶ್, ಮಹಿಳಾ ಕಾರ್ಯದರ್ಶಿ ಬಿ.ಎಸ್.ಭಾಗ್ಯಮ್ಮ, ವಕೀಲರಾದ ಎನ್.ಪುನೀತ್, ಶಿವಣ್ಣ ಇನ್ನಿತರರಿದ್ದರು.