ಬೇಲೂರು ಪಟ್ಟಣದ ವಿದ್ಯಾ ವಿಕಾಸ ಪದವಿ ಪೂರ್ವ ಕಾಲೇಜಿನಲ್ಲಿ ದೇಶ ಭಕ್ತರ ಬಳಗದಿಂದ ಆಯೋಜಿಸಿದ್ದ ವಕೀಲರ ದಿನಾಚರಣೆ ಕಾರ್ಯಕ್ರಮದಲ್ಲಿ ವಕೀಲ ಚಂದ್ರು ಅವರನ್ನು ಸನ್ಮಾನಿಸಲಾಯಿತು. 
ಜಿಲ್ಲೆ

ವಕೀಲರು ಸಮಾಜದ ಶಕ್ತಿ

ನಾಗೇಶ ಎಸ್

ಬೇಲೂರು: ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ವಕೀಲರ ಪಾತ್ರ ಪ್ರಮಖವಾಗಿದ್ದು, ಸಮಾಜದ ಶಕ್ತಿಯಾಗಿದ್ದಾರೆ ಎಂದು ದೇಶ ಭಕ್ತರ ಬಳಗದ ಅಧ್ಯಕ್ಷ ಡಾ.ಸಂತೋಷ್‌ಕುಮಾರ್ ಹೇಳಿದರು.
ಪಟ್ಟಣದ ವಿದ್ಯಾ ವಿಕಾಸ ಪದವಿ ಪೂರ್ವ ಕಾಲೇಜಿನಲ್ಲಿ ದೇಶ ಭಕ್ತರ ಬಳಗ ಹಾಗೂ ಕವಿ ಕಾವ್ಯ ಸುಧೆಯವರ ಸಂಯುಕ್ತಾಶ್ರಯದಲ್ಲಿ ಸೋಮವಾರ ಆಯೋಜಿಸಿದ್ದ ವಕೀಲರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಕೀಲರ ದಿನಾಚರಣೆ ತನ್ನದೇ ಆದ ಮಹತ್ವ ಹೊಂದಿದೆ. ಈ ಹಿನ್ನೆಲೆಯಲ್ಲಿ ನಮ್ಮ ಬಳಗದಿಂದ ಗೌರವ ಸಲ್ಲಿಸುವ ಮೂಲಕ ಆಚರಿಸುತ್ತಿದ್ದೇವೆ. ಜತೆಗೆ ವಕೀಲರು ಸಹ ಸಮಾಜಮುಖಿಯಾಗಿ ಚಿಂತಿಸಿ ಜನರ ಸೇವೆಗೆ ಮುಂದಾಗಬೇಕು. ಆಗ ಮಾತ್ರ ಅವರ ಕೆಲಸಕ್ಕೆ ಗೌರವ ಸಿಗುತ್ತದೆ ಎಂದರು.
ವಕೀಲ ಎಚ್.ಆರ್.ಚಂದ್ರು ಮಾತನಾಡಿ, ವಕೀಲರು ಸಮಾಜದ ಶೋಷಿತರಿಗೆ ನ್ಯಾಯ ಒದಗಿಸುವ ಮೂಲಕ ಅವರ ಬೆಂಬಲವಾಗಿ ನಿಲ್ಲುವ ಅವಶ್ಯಕತೆ ಹೆಚ್ಚಿದೆ ಎಂದರು.
ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ಅವರ ಅಪ್ತ ಸಹಾಯಕ ಹಯವದನ ರಾವ್ ಮಾತನಾಡಿ, ವಕೀಲರು ಸಂವಿಧಾನವನ್ನು ಕಾಯುವ ರಕ್ಷಕರಾಗಿದ್ದಾರೆ. ವಕೀಲ ವೃತ್ತಿಯು ಸತ್ಯ ಮತ್ತು ನ್ಯಾಯದ ಹುಡುಕಾಟದಲ್ಲಿ ಸದಾ ಹೋರಾಡುತ್ತಿರಬೇಕು ಎಂದರು.
ಕವಿ ಕಾವ್ಯ ಸುಧೆ ಮುಖ್ಯಸ್ಥ ಎ.ಸಿ.ನಿರಂಜನ್, ವಿದ್ಯಾ ವಿಕಾಸ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಡಾ.ಎಂ.ಎಂ.ರಮೇಶ್, ದೇಶ ಭಕ್ತರ ಬಳಗದ ಶಾಲಿನಿ ವಿಜಯಕೇಶವ, ಬಿ.ಆರ್.ಮಹೇಶ್, ಪ್ರಕಾಶ್, ಶಿಕ್ಷಕಿ ಅನ್ನಪೂರ್ಣ ಇದ್ದರು.