ಜಿಲ್ಲೆ

ಡಿ.3ಕ್ಕೆ ವಕೀಲರ ದಿನಾಚರಣೆ

Chitradurga

ಚಿತ್ರದುರ್ಗ: ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ವಕೀಲರ ದಿನಾಚರಣೆ ಅಂಗವಾಗಿ ಡಿ.3 ರಂದು ರಾತ್ರಿ 8ಕ್ಕೆ ಇದೇ ಪ್ರಥಮ ಬಾರಿಗೆ ಕುರುಕ್ಷೇತ್ರ ಪೌರಾಣಿಕ ನಾಟಕ ಪ್ರದರ್ಶನವಾಗಲಿದ್ದು, ಮುಂಜಾನೆ 3ರವರೆಗೂ ನಡೆಯಲಿದೆ ಎಂದು ವಕೀಲರ ಸಂಘದ ಅಧ್ಯಕ್ಷ ಸಿ. ಶಿವುಯಾದವ್ ತಿಳಿಸಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುರುಕ್ಷೇತ್ರ ಒಳಿತು-ಕೆಡಕು ಸೇರಿ ಎಲ್ಲವನ್ನೂ ಒಳಗೊಂಡಿದೆ. ಸಂಧಾನಕ್ಕೆ ಕೆಲವೊಮ್ಮೆ ಎರಡು ಕಡೆಯವರು ಒಪ್ಪದಿದ್ದರೆ, ಮುಂದೆ ಏನೆಲ್ಲಾ ಪರಿಣಾಮಗಳು ಎದುರಾಗುತ್ತವೆ ಎಂಬ ಅಂಶಗಳು ನಾಟಕದಲ್ಲಿ ಗಮನ ಸೆಳೆಯಲಿವೆ. ಪ್ರಸ್ತುತ ದಿನಮಾನಕ್ಕೂ ಅನ್ವಯಿಸಲಿದೆ ಎಂದರು.

ಚಿತ್ರದುರ್ಗದ ನ್ಯಾಯಾಲಯಕ್ಕೆ ನೂರು ವರ್ಷಗಳ ಇತಿಹಾಸವಿದೆ. ರಾಷ್ಟ್ರೀಯ ಲೋಕ ಅದಾಲತ್ ಆಯೋಜಿಸಿ ಇತ್ಯರ್ಥ ಪಡಿಸಬಹುದಾದ ಪ್ರಕರಣಗಳನ್ನು ರಾಜಿ ಸಂಧಾನಗಳ ಮೂಲಕ ಬಗೆಹರಿಸಿ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಜಿಲ್ಲೆಯ ನ್ಯಾಯಾಧೀಶರು, ವಕೀಲರು ಶ್ರಮಿಸುತ್ತಿದ್ದಾರೆ. ಆದ್ದರಿಂದ ಒಂದು ಉತ್ತಮ ಸಂದೇಶ ಸಾರುವ ಪ್ರಯತ್ನ ಕೂಡ ಇದೇ ವೇಳೆ ನಡೆಯಲಿದೆ ಎಂದು ಹೇಳಿದರು.

ನಾಟಕಕ್ಕಾಗಿ ಮೂರು ತಿಂಗಳಿನಿಂದ ವಕೀಲರು ಅಭ್ಯಾಸದಲ್ಲಿ ನಿರತರಾಗಿದ್ದು, ಒತ್ತಡದ ನಡುವೆ ನ್ಯಾಯಾಂಗ ವ್ಯವಸ್ಥೆಯಲ್ಲಿ ಕೆಲಸ ಮಾಡುವವರಿಗೂ ಮನರಂಜನೆ ನೀಡಬೇಕು ಎಂಬ ಉದ್ದೇಶವಿದೆ. ವಕೀಲ ವೃತ್ತಿಯಲ್ಲಿ 25 ವರ್ಷದಿಂದ ಸೇವೆ ಸಲ್ಲಿಸುತ್ತಿರುವ ಹಿರಿಯರನ್ನು ಗುರುತಿಸಿ ಸನ್ಮಾನಿಸಲಾಗುವುದು. ಹೊಸಬರನ್ನು ಸ್ವಾಗತಿಸಲಾಗುವುದು ಎಂದು ವಿವರಿಸಿದರು.

ಅಂದು ಮಧ್ಯಾಹ್ನ 12.30ಕ್ಕೆ ನಿವೃತ್ತ ನ್ಯಾಯಮೂರ್ತಿ ಬಿಲ್ಲಪ್ಪ ಸಮಾರಂಭ ಉದ್ಘಾಟಿಸುವರು. ಜಿಲ್ಲಾಧಿಕಾರಿ ಜಿ.ಆರ್.ಜೆ. ದಿವ್ಯಾಪ್ರಭು, ಎಸ್‌ಪಿ ಕೆ.ಪರಶುರಾಮ್, ಜಿಪಂ ಸಿಇಒ ಎಂ.ಎಸ್.ದಿವಾಕರ್ ಅತಿಥಿಗಳಾಗಿ ಭಾಗವಹಿಸುವರು ಎಂದರು ಹೇಳಿದರು.

ಸಂಘದ ಉಪಾಧ್ಯಕ್ಷ ಜಿ.ಸಿ.ದಯಾನಂದ್, ಪ್ರಧಾನ ಕಾರ್ಯದರ್ಶಿ ಎಂ.ಮೂರ್ತಿ, ಸಹಕಾರ್ಯದರ್ಶಿ ಬಿ.ಆರ್.ವಿಶ್ವನಾಥರೆಡ್ಡಿ, ಖಜಾಂಚಿ ಕೆ.ಎಂ.ಅಜ್ಜಯ್ಯ, ಮಾಜಿ ಅಧ್ಯಕ್ಷ ವಿಜಯಕುಮಾರ್, ಎಸ್.ಒ.ಸಕ್ರಯ್ಯ, ಬಿ.ಇ.ಪ್ರದೀಪ್, ಟಿ.ಶಿವಮೂರ್ತಿ, ಟಿ.ರವಿಸಿದ್ಧಾರ್ಥ್, ಬಿ.ಗಿರೀಶ್, ಕೆ.ಶ್ರೀರಾಮು ಇತರರಿದ್ದರು.

ಚಿತ್ರ: ಸಿಟಿಡಿ 29 ಶಿವುಯಾದವ್