ಜಿಲ್ಲೆ

ನ್ಯಾಯವಾದಿಗಳು ಪ್ರಜಾಪ್ರಭುತ್ವದ ಆಧಾರ

ವಿಜಯವಾಣಿ ಸುದ್ದಿಜಾಲ ಧಾರವಾಡ

ನ್ಯಾಯವಾದಿಗಳು ಪ್ರಜಾಪ್ರಭುತ್ವದ ಆಧಾರ ಸ್ತಂಭ. ವಕೀಲಿ ವೃತ್ತಿ ಮತ್ತು ನ್ಯಾಯಾಂಗ ಸೇವೆ ಮಾತ್ರವಲ್ಲದೆ ಸಮಾಜದ ವಿವಿಧ ವಿಧಾಯಕ ಕಾರ್ಯಗಳಲ್ಲಿ ತೊಡಗಿಸಿಕೊಂಡು ರಾಷ್ಟ್ರ ಕಟ್ಟುವ ಮಹತ್ವದ ಜವಾಬ್ದಾರಿ ನಿಭಾಯಿಸಬೇಕು ಎಂದು ಹೈಕೋರ್ಟ್​ ನ್ಯಾಯಮೂರ್ತಿ ಉಮೇಶ ಅಡಿಗ ಅಭಿಪ್ರಾಯಪಟ್ಟರು.

ನಗರದ ಸರ್​ ಸಿದ್ದಪ್ಪ ಕಂಬಳಿ ಕಾನೂನು ಕಾಲೇಜಿನಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ದಿ. ಐ. ಜಿ. ಹಿರೇಗೌಡರ ಸಂಸ್ಮರಣ ದತ್ತಿ ಉಪನ್ಯಾಸ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಕಾನೂನು ವಿದ್ಯಾರ್ಥಿಗಳಿಗೆ ಸತತ ಅಧ್ಯಯನ ಅಗತ್ಯ. ಪ್ರತಿ ನಿತ್ಯದ ಬೆಳವಣಿಗೆಗಳ ಬಗ್ಗೆ ಅರಿವಿರಬೇಕು. ಸಮಾಜದಲ್ಲಿ ನೊಂದವರ ನೋವಿಗೆ ಸ್ಪಂದಿಸುವ ಮಾನವೀಯ ಗುಣ ಅಳವಡಿಸಿಕೊಳ್ಳಬೇಕು. ಇದಕ್ಕೆ ಐ. ಜಿ. ಹಿರೇಗೌಡರ ಜೀವನ ಒಂದು ಮಾದರಿಯಾಗಿದೆ ಎಂದರು.

ರಾಜ್ಯ ವಕೀಲರ ಪರಿಷತ್ತಿನ ಅಧ್ಯಕ್ಷ ಎಸ್​.ಎಸ್​. ಮಿಟ್ಟಲಕೋಡ್​ ಮಾತನಾಡಿ, ದೇಶದ ನ್ಯಾಯಾಂಗ ಕ್ಷೇತ್ರಕ್ಕೆ ರತ್ನದಂತಹ ಕೊಡುಗೆಗಳನ್ನು ನೀಡಿದ ಕೀರ್ತಿ ಈ ಮಹಾವಿದ್ಯಾಲಯಕ್ಕಿದೆ. ಈ ಭವ್ಯ ಪರಂಪರೆ ಮುಂದುವರೆಸುವ ಜವಾಬ್ದಾರಿ ಈಗಿನ ವಿದ್ಯಾರ್ಥಿಗಳ ಮೇಲಿದೆ ಎಂದರು.

ವಿ. ಎಂ. ಶೀಲವಂತ, ಅಶೋಕ ಏಣಗಿ ಮಾತನಾಡಿದರು. ಡಾ. ಮಂಜುಳಾ ಎಸ್​.ಆರ್​. ಅಧ್ಯಕ್ಷತೆ ವಹಿಸಿದ್ದರು.

ಶುಭೇಂದು ಆಕಳವಾಡಿ, ಶಾರದಾ ನಿರ್ವಾಣಿ, ಡಾ. ಅರುಣಾ ಹಳ್ಳಿಕೇರಿ, ಎಸ್​.ಜಿ. ಪಾಟೀಲ, ಐ. ಜಿ. ಹಿರೇಗೌಡರ ಕುಟುಂಬಸ್ಥರು, ಎಸ್​. ಜಿ. ಪಾಟೀಲ, ಡಾ. ಸಿ. ರಾಜಶೇಖರ, ಕೆ. ಎಸ್​. ಕೋರಿಶೆಟ್ಟರ, ಪ್ರಾಧ್ಯಾಪಕರು, ಇತರರು ಇದ್ದರು.

ಡಾ. ಶಶಿರೇಖಾ ಮಾಳಗಿ ಸ್ವಾಗತಿಸಿದರು. ಧೃತಿ ಭಟ್​ ಹಾಗೂ ಪ್ರಣವ್​ ಕುಲಕರ್ಣಿ ನಿರೂಪಿಸಿದರು. ಮೋಹನ್​ ಕಾಂಬಳೆ ವಂದಿಸಿದರು.