ಜಿಲ್ಲೆ

ಕಾನೂನು ವಿದ್ಯಾರ್ಥಿಗಳಿಗೆ ಸ್ವಯಂ‌ ಸೇವಾ ಮನೋಭಾವನೆ‌ ಅಗತ್ಯ: ಮೋಹನ್ ಭಜಂತ್ರಿ

Gadag - Shivanand Hiremath

ಗದಗ: ಪ್ರಸ್ತುತ ದಿನಮಾ‌ನಗಳಲ್ಲಿ‌ ನಗರ, ಪಟ್ಟಣ ಮತ್ತು ಗ್ರಾಮೀಣ ಪ್ರದೇಶದಲ್ಲಿ ಜನರು ಕಾನೂನು‌ ತಿಳುವಳಿಕೆಯ ಕೊರತೆಯಿಂದ‌ ತಮ್ಮ ಜೀವನದಲ್ಲಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವುಗಳಿಗೆ ಸ್ವಲ್ಪ ಮಟ್ಟದ ಪರಿಹಾರ ಮತ್ತು‌ ಕಾನೂನು‌ ಅರಿವು ಹೊಂದಿರದ ಗ್ರಾಮಸ್ಥರಿಗೆ ಕಾನೂನು ಅರಿವು ಅಥವಾ ಜಾಗೃತಿ‌ ಮೂಡಿಸಲು ರಾಷ್ಟ್ರೀಯ ಸೇವಾ ಯೋಜನೆ ಇಂತಹ‌ ಕಾರ್ಯಕ್ರಮದಲ್ಲಿ ಕಾನೂನು ವಿದ್ಯಾರ್ಥಿಗಳು ಹೆಚ್ಚು ಪಾಲ್ಗೊಳ್ಳುವುದರಿಂದ ಸೃಜನಾತ್ಮಕ ಮತ್ತು ಕ್ರಿಯಾಶೀಲತೆ ಹೆಚ್ಚಾಗುತ್ತದೆ‌‌ ಎಂದು ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಹುಬ್ಬಳ್ಳಿ, ಸಿಂಡಿಕೇಟ್ ಸದಸ್ಯ ಹಾಗೂ ಹಿರಿಯ ನ್ಯಾಯವಾದಿ ಮೋಹನ್ ಭಜಂತ್ರಿ ಹೇಳಿದರು.

ಸಮೀಪದ ಹಾತಲಗೇರಿ ಗ್ರಾಮದಲ್ಲಿ ರವಿವಾರ ಜರುಗಿದ  ಕರ್ನಾಟಕ‌ ರಾಜ್ಯ ಕಾನೂನು ವಿಶ್ವವಿದ್ಯಾಲಯ, ಹುಬ್ಬಳ್ಳಿ ಹಾಗೂ ಎಸ್.ಎ.‌ಮಾನ್ವಿ ಕಾನೂನು ಮಹಾವಿದ್ಯಾಲಯ ಗದಗ, ಗ್ರಾಮ ಪಂಚಾಯತಿ ಹಾತಲಗೇರಿ ಇವರ ಸಂಯುಕ್ತಾಶ್ರಯದಲ್ಲಿ ನ. ೨೬ ರಿಂದ ನ.‌೨ ರ ವರೆಗೆ ನಡೆಯಲಿರುವ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ‌  ಉದ್ಘಾಟನೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ‌

ರಾಷ್ಟೀಯ ಸೇವಾ ಯೋಜನೆಯ‌ ಶಿಬಿರಾರ್ಥಿಗಳಿಂದ ವಿಶೇಷವಾಗಿ ಹಮ್ಮಿಕೊಂಡಿರುವ ಎನ್.ಎಸ್‌ಎಸ್. ಶಿಬಿರದ ಮೂಲಕ ಗ್ರಾಮೀಣ ಪ್ರದೇಶದಲ್ಲಿರುವ ಸಮಸ್ಯೆಗಳನ್ನು ಬಗೆಹರಿಸಲು ಕಾನೂನಿಗೆ ಸಂಬಂಧಿಸಿದ ಉಪಯುಕ್ತ ಮಾಹಿತಿ ಒದಗಿಸುವ ಕಾರ್ಯಕ್ರಮವಾಗಿದೆ. ಆದ್ದರಿಂದ ಗ್ರಾಮದ ಎಲ್ಲಾ ಯುವಕರು ಮತ್ತು‌ ಮಹಿಳೆಯರು ಹಾಗೂ ಹಿರಿಯರು ನಿಮ್ಮ‌ ಗ್ರಾಮದಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮದಿಂದ ಸಲಹೆಯನ್ನು ಪಡೆದುಕೊಂಡು ತಮ ಜೀವನದಲ್ಲಿ ಅಳವಡಿಸಿಕೊಂಡು ಜೀವನವನ್ನು‌ ಸಾಗಿಸಲು‌ ಮುಂದಾಗಬೇಕು. ಗ್ರಾಮೀಣ ಪ್ರದೇಶದ ಜನತೆ‌ ಕಾನೂನು ಮಾಹಿತಿ‌ಪಡೆದುಕೊಂಡು ಸರ್ಕಾರದ ಸೌಲಭ್ಯವನ್ನು‌ ಪಡೆದುಕೊಳ್ಳಲು ಮುಂದಗಾಬೇಕು ಎಂದು 

ರಾಷ್ಟ್ರೀಯ ಸೇವಾ ಯೋಜನಾಧಿಕಾರಿ  ಡಾ.‌ಸಿ.‌ಬಿ ರಣಗಟ್ಟಿಮಠ ಎನ್.ಎಸ್.ಎಸ್‌ ಇತಿಹಾಸ ಮತ್ತು ಹಿನ್ನಲೆ ಹಾಗೂ ಉದ್ದೇಶದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. 

ಕಾನೂನು ವಿದ್ಯಾರ್ಥಿ ಸಂತೋಷ ಭದ್ರಾಪೂರ ಸಂವಿಧಾನದ ಪೀಠಿಕೆಯನ್ನು ಎನ್.ಎಸ್.ಎಸ್ ಶಿಬಿರಾರ್ಥಿಗಳಿಗೆ ಬೋದಿಸಿದರು. ಗ್ರಾ.ಪಂ ಅಧ್ಯಕ್ಷೆ ಗಂಗವ್ವ ಮಾದರ ಅಧ್ಯಕ್ಷತೆ ವಹಿಸಿದ್ದಾರೆ.‌ ಗ್ರಾ.ಪಂ‌ ಸದಸ್ಯೆ ಭೀಮವ್ವ ಲಕ್ಕಣ್ಣವರ, ಉಪನ್ಯಾಸಕರಾದ ಜೈಹನುಮಾನ ಎಚ್.ಕೆ. ಡಾ.‌ಜ್ಯೋತಿ ಸಿ.ವಿ ಸೇರಿದಂತೆ ಇತರರಿದ್ದರು. ವಿದ್ಯಾರ್ಥಿನಿ ಸುಮಿತ್ರಾ ನಾವಳ್ಳಿ ಪ್ರಾರ್ಥಿಸಿದರು. ವಿದ್ಯಾರ್ಥಿ ಶಿವಲೀಲಾ ಕಲಬಂಡಿ ಸ್ವಾಗತಿಸಿದರು. ವಿದ್ಯಾರ್ಥಿ ಹನಮಂತ ಸಂದಿಮನಿ ವಂದಿಸಿದರು. ವಿದ್ಯಾರ್ಥಿನಿ ಮುಕ್ತಾ ಹಪಡದ ನಿರೂಪಿಸಿದರು.‌

ಫೋಟೋ ಶಿರ್ಷಿಕೆ ೨೬ಗದಗ೧ :  ಗದಗ ಸಮೀಪದ ಹಾತಲಗೇರಿ ಗ್ರಾಮದಲ್ಲಿ ರವಿವಾರ ಜರುಗಿದ  ಕರ್ನಾಟಕ‌ ರಾಜ್ಯ ಕಾನೂನು ವಿಶ್ವವಿದ್ಯಾಲಯ, ಹುಬ್ಬಳ್ಳಿ ಹಾಗೂ ಎಸ್.ಎ.‌ಮಾನ್ವಿ ಕಾನೂನು ಮಹಾವಿದ್ಯಾಲಯ ಗದಗ, ಗ್ರಾಮ ಪಂಚಾಯತಿ ಹಾತಲಗೇರಿ ಇವರ ಸಂಯುಕ್ತಾಶ್ರಯದಲ್ಲಿ ನ. ೨೬ ರಿಂದ ನ.‌೨ ರ ವರೆಗೆ ನಡೆಯಲಿರುವ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ‌  ಉದ್ಘಾಟನೆ ಸಮಾರಂಭವನ್ನು ಸಿಂಡಿಕೇಟ್ ‌ಸದಸ್ಯ ಹಾಗೂ ಹಿರಿಯ ನ್ಯಾಯವಾದಿ ಮೋಹನ್ ಭಜಂತ್ರಿ ಉದ್ಘಾಟಿಸಿದರು.‌