ಜಿಲ್ಲೆ

ಲೈಂಗಿಕ ಉದ್ದೇಶದಿಂದ ಮಗುವಿನ ಅಂಗಾಂಗ ಮುಟ್ಟುವುದೂ ಸಹ ಲೈಂಗಿಕ ದೌರ್ಜನ್ಯ: ನ್ಯಾ. ಕೆ. ಗುರುಪ್ರಸಾದ

Gadag - Shivanand Hiremath

ಗದಗ: ಲೈಂಗಿಕ ಉದ್ದೇಶದಿಂದ ಮಗುವಿನ ಖಾಸಗಿ ಅಂಗಾಂಗ ಮುಟ್ಟುವುದು ಲೈಂಗಿಕ ದೌರ್ಜನ್ಯವಾಗಿದೆ, ಮುಟ್ಟದೇ ಚುಡಾಯಿಸುವುದು, ಮೊಬೈಲ್‌ನಲ್ಲಿ ಕೆಟ್ಟದಾದ ಸಂದೇಶ ಕಳಿಸುವುದು, ಇಂತವುಗಳೆಲ್ಲವೂ ಕೂಡ ಅಪರಾಧವಾಗಿದ್ದು, ಇದಕ್ಕೆ ಕೂಡ ಶಿಕ್ಷೆ ವಿಧಿಸಬಹುದಾಗಿದೆ ಎಂದು ಹಿರಿಯ ದಿವಾಣಿ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆ. ಗುರುಪ್ರಸಾದ ಅವರು ನುಡಿದರು.
ಅವರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ವಕೀಲರ ಸಂಘ, ಶಿಕ್ಷಣ ಇಲಾಖೆ, ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಇಲಾಖೆ, ಆರೋಗ್ಯ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಕ್ಕಳ ಕಲ್ಯಾಣ ಸಮಿತಿ ಇವರ ಸಂಯುಕ್ತಾಶ್ರಯದಲ್ಲಿ ಗದಗ ನಗರದ ಸರ್ಕಾರಿ ಉರ್ದು ಪ್ರೌಡ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಪೋಕ್ಸೊ ಕಾಯ್ದೆ ಹಾಗೂ ಮಕ್ಕಳ ಕಾನೂನುಗಳ ಕುರಿತು ಕಾನೂನು ಸಾಕ್ಷರತಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮಕ್ಕಳ ಮೇಲೆ ಲೈಂಗಿಕ ಅತ್ಯಾಚಾರ ಅಥವಾ ಲೈಂಗಿಕ ದೌರ್ಜನ್ಯ ಎಸಗಿದರೆ ಕನಿಷ್ಠ ೨೦ ವರ್ಷಗಳವರೆಗೆ ಶಿಕ್ಷೆ ಹಾಗೂ ಗರಿಷ್ಠ ಆಜೀವಪರ್ಯಂತ ಸೆರೆವಾಸ ಶಿಕ್ಷೆಯನ್ನು ವಿಧಿಸುವಷ್ಟು ಪೋಕ್ಸೊ ಕಾಯ್ದೆ ಗಂಭೀರವಾಗಿದೆ ಎಂದು ವಿವರಿಸಿದರು. ಬಾಲ್ಯವಿವಾಹವೂ ಸಹ ಶಿಕ್ಷಾರ್ಹ ಅಪರಾಧವಾಗಿದೆ. ಪ್ರೌಢ ಶಾಲೆ ಹಾಗೂ ಕಾಲೇಜಿನ ಹುಡುಗ-ಹುಡುಗಿಯರು ಪೋಕ್ಸೊ ಕಾಯ್ದೆಯ ಗಾಂಭೀರ್ಯವನ್ನು ಅರಿಯದೇ ಸಮಸ್ಯೆಗೀಡಾಗುವುದು ಕಂಡುಬAದಿದ್ದರಿAದ ಶಾಲಾ ಕಾಲೇಜುಗಳಲ್ಲಿ ಪೋಕ್ಸೋ ಕಾಯ್ದೆಯ ಕುರಿತು ಹಾಗೂ ಮಕ್ಕಳ ಕಾನೂನುಗಳ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಸ್. ಬುರುಡಿ ಅವರು ಮಾತನಾಡಿ, ಲೈಂಗಿಕ ದೌರ್ಜನ್ಯದಂತಹ ಪ್ರಕರಣಗಳು ಕಂಡು ಬಂದಲ್ಲಿ, ಯಾವುದೇ ಹಿಂಜರಿಕೆ ಇಲ್ಲದೇ ಮಕ್ಕಳ ಸಹಾಯವಾಣಿ ೧೦೯೮ ಗೆ ಕರೆ ಮಾಡಿ ಅಥವಾ ೧೧೨ ಗೆ ಕರೆ ಮಾಡಿ ವಿಷಯ ತಿಳಿಸಬೇಕು ಎಂದು ಹೇಳಿದರು.

ಎಸ್.ಡಿ.ಎಂ.ಸಿ. ಅಧ್ಯಕ್ಷ ಅಕ್ಬರಸಾಬ ಬಬರ್ಚಿ ಅವರು ಮಾತನಾಡಿ, ಮಕ್ಕಳಿಗೆ ಇರುವ ಕಾನೂನುಗಳನ್ನು ಅರಿಯುವ ಮೂಲಕ ರಕ್ಷಣೆಯನ್ನು ಹೊಂದಬೇಕು ಎಂದರು. ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರಮೇಶ ಕಳ್ಳಿಮನಿ ಮಾತನಾಡಿ, ಇಂದಿನ ಮಕ್ಕಳೇ ಇಂದಿನ ಪ್ರಜೆಗಳಾಗಿದ್ದು, ತಮ್ಮ ಜವಾಬ್ದಾರಿಯನ್ನು ಅರಿತುಕೊಳ್ಳಬೇಕು ಎಂದು ತಿಳಿಸಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ದೊರೆಯುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಉಪನಿರ್ದೇಶಕರಾದ ಎಂ.ಎ. ರಡ್ಡೇರ ಅವರು ಮಾತನಾಡಿ, ಪಾಲಕರು, ಶಿಕ್ಷಕರು ಹಾಗೂ ಎಲ್ಲಾ ಇಲಾಖೆಯ ಅಧಿಕಾರಿ-ಸಿಬ್ಬಂದಿಗಳು ಮಕ್ಕಳ ಹಕ್ಕುಗಳನ್ನು ರಕ್ಷಣೆ ಮಾಡಬೇಕು. ಜತೆಗೆ ಅವರಿಗಾಗಿ ಇರುವ ಸೌಲಭ್ಯಗಳನ್ನು ಒದಗಿಸಿಕೊಡುವಲ್ಲಿ ಪ್ರಯತ್ನಿಸಬೇಕು ಎಂದರು. ಕಾರ್ಯಕ್ರಮದಲ್ಲಿ ಎಸ್.ಡಿ.ಎಂ.ಸಿ. ಉಪಾಧ್ಯಕ್ಷ ಅಬುಬಕರ ಅಣ್ಣಿಗೇರಿ, ಉಮರ್‌ಫಾರುಕ ಹುಬ್ಬಳ್ಳಿ ಸೇರಿದಂತೆ ಶಾಲಾ ಸಿಬ್ಬಂದಿ, ಮಕ್ಕಳು ಉಪಸ್ಥಿತರಿದ್ದರು. ಮುಖ್ಯೋಪಾದ್ಯಾಯ ಎಚ್.ಎ. ಫಾರೂಖಿ ಸ್ವಾಗತಿಸಿದರು. ಶ್ರೀಕಾಂತ ಬಟ್ಟೂರ ನಿರೂಪಿಸಿ, ವಂದಿಸಿದರು.