ಬೆಳಗಾವಿ: ಭಾರತದ ಸಂವಿಧಾನ ಇಡೀ ವಿಶ್ವಕ್ಕೆ ಮಾದರಿಯಾಗಿದೆ. ಕಾನೂನು ಪಾಲನೆ ಮಾಡುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು. ಬೆಳಗಾವಿ ಬಾರ್ ಅಸೋಸಿಯೇಷನ್‌ನಿಂದ ಕೋರ್ಟ್ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯ ಕ್ರಮದಲ್ಲಿ ಮಾತನಾಡಿದರು. ದೇಶದಲ್ಲಿ ಸಂವಿಧಾನಕ್ಕೆ ಬಹಳಷ್ಟು ಗೌರವ ಹಾಗೂ ಶಕ್ತಿಯಿದೆ. ಸಾಮಾನ್ಯ ಕುಟುಂಬದಿಂದ ಬಂದ ನಾನು ಸರ್ಕಾರದಲ್ಲಿ ಏಕೈಕ ಮಹಿಳಾ ಸಚಿವೆಯಾಗಿರುವೆ. ಅದಕ್ಕೆ ಕಾರಣ ಸಂವಿಧಾನ. ಇದು ನಮ್ಮ ಸಂವಿಧಾನದ ಶಕ್ತಿ ಎಂದರು. ಮಹಿಳೆಯರು, ಪುರುಷರಿಗೆ ಸಮಾನ ಹಕ್ಕು ಅಂತ ಅಂಬೇಡ್ಕರ್ ಹೇಳಿದ್ದರು. ವಕೀಲರ ಸಂಘಗಳಲ್ಲೂ ಶೇ.33 ಮಹಿಳೆಯರಿಗೆ ಪ್ರಾತಿನಿಧ್ಯ ಕೊಡಬೇಕು ಎಂದು ಕೋರ್ಟ್ ಆದೇಶಿಸಿದೆ. ಮಹಿಳೆ ಇಲ್ಲದ ಮನೆ ಇರುವುದಕ್ಕೆ ಸಾಧ್ಯವೇ ಇಲ್ಲ. ಮಹಿಳೆ ಶ್ರಮಪಟ್ಟು ಪ್ರತಿ ಕ್ಷೇತ್ರದಲ್ಲಿ ಪುರುಷರ ಸಮಾನವಾಗಿ ಬೆಳೆದಿದ್ದಾಳೆ ಎಂದರು. ನ್ಯಾಯಾಧೀಶ ತ್ಯಾಗರಾಜ ಇನ್ವ್ಯಾಲಿ, ಅಶ್ವಿನಿ ಸಿರಿಯನ್ನವರ, ಕೆ.ಕಾತ್ಯಾಯಣಿ, ಸಿ.ಎಂ. ಪುಷ್ಪಲತಾ, ಬಾರ್ ಅಸೋಸಿಯೇಷನ್ ಅಧ್ಯಕ್ಷ ಎಸ್.ಎಸ್.ಕಿವಡಸಣ್ಣವರ, ಉಪಾಧ್ಯಕ್ಷ ಬಸವರಾಜ ಮುಗಳಿ, ಕಾರ್ಯದರ್ಶಿ ಯಲ್ಲಪ್ಪ ದಿವಟೆ, ಅಶ್ವಿನಿ ಹವಾಲ್ದಾರ್ ಇತರರಿದ್ದರು.