ಟಿಳಕವಾಡಿಯ ಕೆ.ಕೆ. ವೇಣುಗೋಪಾಲ ಸಭಾಭವನದಲ್ಲಿ ಎಂ.ಕೆ. ನಂಬಿಯಾರ್ ಸ್ಮರಣಾರ್ಥ ಶುಕ್ರವಾರ ಆಯೋಜಿಸಿದ್ದ 15ನೇ ರಾಷ್ಟ್ರಮಟ್ಟದ ಕಲ್ಪಿತ ನ್ಯಾಯಾಲಯ ಸ್ಪರ್ಧೆಯನ್ನು ಹೈಕೋರ್ಟ್ ನ್ಯಾಯಮೂರ್ತಿ ಉಮೇಶ ಅಡಿಗ ಉದ್ಘಾಟಿಸಿದರು. ಎಸ್.ವಿ.ಗಣಾಚಾರಿ, ವಿ.ಜಿ.ಕುಲಕರ್ಣಿ, ವಿ.ಎಂ.ದೇಶಪಾಂಡೆ, ಎ.ಎಚ್.ಹವಾಲ್ದಾರ, ಅಶ್ವಿನಿ ಪರಬ್ ಇದ್ದರು. 
ಜಿಲ್ಲೆ

ಕಾನೂನು ವಿದ್ಯಾರ್ಥಿಗಳಿಗೆ ಕಲ್ಪಿತ ನ್ಯಾಯಾಲಯ ಸ್ಪರ್ಧೆ ಸಹಕಾರಿ

ಬೆಳಗಾವಿ: ಕಾನೂನು ಕಾಲೇಜಿನ ವಿದ್ಯಾರ್ಥಿಗಳು ಕಲ್ಪಿತ ನ್ಯಾಯಾಲಯ ಸ್ಪರ್ಧೆಗಳಲ್ಲಿ ಭಾಗವಹಿಸುವುದರಿಂದ ಭವಿಷ್ಯದಲ್ಲಿ ವಾಸ್ತವ ಪ್ರಕರಣಗಳನ್ನು ಕೈಗೆತ್ತಿಕೊಂಡು ವಾದ ಮಾಡುವುದಕ್ಕೆ ಅನುಕೂಲವಾಗುತ್ತದೆ. ಹೀಗಾಗಿ ವಿದ್ಯಾರ್ಥಿ ದೆಸೆಯಲ್ಲೇ ಇಂತಹ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಬೇಕು ಎಂದು ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಉಮೇಶ ಅಡಿಗ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಕರ್ನಾಟಕ ಲಾ ಸೊಸೈಟಿಯ ರಾಜಾ ಲಖಮಗೌಡ ಕಾನೂನು ಮಹಾವಿದ್ಯಾಲಯದಿಂದ ಟಿಳಕವಾಡಿಯ ಕೆ.ಕೆ. ವೇಣುಗೋಪಾಲ ಸಭಾಭವನದಲ್ಲಿ ಎಂ.ಕೆ. ನಂಬಿಯಾರ್ ಸ್ಮರಣಾರ್ಥ ಶುಕ್ರವಾರ ಆಯೋಜಿಸಿದ್ದ 15ನೇ ರಾಷ್ಟ್ರಮಟ್ಟದ ಕಲ್ಪಿತ ನ್ಯಾಯಾಲಯ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿ, ಮಾದರಿ ನ್ಯಾಯಾಲಯ ಸ್ಪರ್ಧೆಗಳಿಂದ ವಿವಿಧ ಪ್ರಕರಣಗಳಲ್ಲಿ ಹೇಗೆ ವಾದ ಮಂಡಿಸಬೇಕು ಎನ್ನುವುದು ಅರಿವಿಗೆ ಬರುತ್ತದೆ. ಸ್ಪರ್ಧೆಯಲ್ಲಿ ಭಾಗವಹಿಸುವುದರಿಂದ ವಿದ್ಯಾರ್ಥಿಗಳು ವಕೀಲಿ ವೃತ್ತಿಯನ್ನು ಬೇಗ ಅಭ್ಯಾಸ ಮಾಡುವುದಕ್ಕೆ ಶುರು ಮಾಡುತ್ತಾರೆ ಎಂದರು. ಕೆಲಸದ ಸ್ಥಳದಲ್ಲಿ ಮಹಿಳೆಯರ ಲೈಂಗಿಕ ಕಿರುಕುಳ ತಡೆಗಟ್ಟುವ, ನಿಷೇಸುವ ಮತ್ತು ಪರಿಹಾರ ಒದಗಿಸುವ ಕಾಯಿದೆ ಕುರಿತು ವಿವರಿಸಿದರು. ಭಾರತೀಯ ಸಂವಿಧಾನದ ಕಲಂ 14, 15, 19(1)(ಜಿ) ಮತ್ತು 21 ಅನ್ನು ವಿವರಿಸಿದರು.

ಅಧ್ಯಕ್ಷತೆ ವಹಿಸಿದ್ದ ಕೆಎಲ್‌ಎಸ್ ಕಾರ್ಯದರ್ಶಿ ವಿ.ಜಿ. ಕುಲಕರ್ಣಿ, ಸ್ಪರ್ಧೆಯಲ್ಲಿ ಭಾಗವಹಿಸಿದ ದೇಶದ ವಿವಿಧ ರಾಜ್ಯಗಳಿಂದ ಆಗಮಿಸಿದ ಸ್ಪರ‌್ಗಳನ್ನು ಸ್ವಾಗತಿಸಿದರು. ವಿ.ಎಂ. ದೇಶಪಾಂಡೆ, ಪ್ರಾಚಾರ್ಯ ಡಾ. ಅನಿಲ್ ಹವಾಲ್ದಾರ, ಪ್ರೊ. ಅಶ್ವಿನಿ ರಬ, ವಿದ್ಯಾರ್ಥಿ ಪ್ರಧಾನ ಕಾರ್ಯದರ್ಶಿ ಭರತೇಶ ನಾಯಕ, ಸ್ಪರ್ಧೆಯ ವಿದ್ಯಾರ್ಥಿ ಸಮನ್ವಯಕಾರ ಮೃಣಾಲ ಕಾಮತ ಇದ್ದರು. ಮಾರ್ಚ್ 9ರ ವರೆಗೆ ಸ್ಪರ್ಧೆ ನಡೆಯಲಿದ್ದು, ದೇಶದ ಒಂಬತ್ತು ರಾಜ್ಯಗಳಿಂದ 42 ತಂಡಗಳು ಭಾಗವಹಿಸಿವೆ. ಸ್ಪರ್ಧೆಯ ಸಮಾರೋಪ ಮಾ.9ರಂದು ಸಂಜೆ 4 ಗಂಟೆಗೆ ನಡೆಯಲಿದೆ. ಕರ್ನಾಟಕ ಹೈಕೋರ್ಟ್ ನ್ಯಾ.ಜಿ. ಬಸವರಾಜ ಅತಿಥಿಯಾಗಿ ಆಗಮಿಸುವರು. ಜಿಐಟಿಯ ಗವರ್ನಿಂಗ್ ಕೌನ್ಸಿಲ್ ಅಧ್ಯಕ್ಷ ರಾಜೇಂದ್ರ ಬೆಳಗಾಂಕರ ಅಧ್ಯಕ್ಷತೆ ವಹಿಸುವರು.