ಜಿಲ್ಲೆ

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ವಿಫಲ

ಗೋಪಾಲಕೃಷ್ಣ ಪಾದೂರ್

ಉಡುಪಿ: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ವಿಫಲಗೊಂಡಿದ್ದು, ಮಹಿಳೆಯರಿಗೆ ರಕ್ಷಣೆ ಸಿಗದಾಗಿದೆ. ಇದು ರಾಜ್ಯ ಸರ್ಕಾರದ ವೈಫಲ್ಯಕ್ಕೆ ಕಾರಣವಾಗಿದೆ ಎಂದು ಆರೋಪಿಸಿ ಜಿಲ್ಲಾ ಬಿಜೆಪಿ ಘಟಕ ಜಿಲ್ಲಾಧಿಕಾರಿ ಕಚೇರಿ ಮುಂಭಾದಲ್ಲಿ ಸೋಮವಾರ ಪ್ರತಿಭಟನೆ ನಡೆಸಿತು.

ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್​ ನಾಯಕ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್​ ಸರ್ಕಾರ ಅಧಿಕಾರಕ್ಕೆ ಬಂದು ಆರು ತಿಂಗಳಾಗಿದ್ದು ಯಾವುದೇ ಅಭಿವೃದ್ಧಿ ಕಾರ್ಯ ಆಗುತ್ತಿಲ್ಲ. ಗ್ಯಾರಂಟಿ ಯೋಜನೆ ನೆಪದಲ್ಲಿ ಎಲ್ಲ ಹಣವನ್ನೂ ವ್ಯಯಿಸುತ್ತಲಿದೆ. 200 ಯೂನಿಟ್​ವರೆಗೆ ವಿದ್ಯುತ್​ ಉಚಿತ ಮಾಡಿದ್ದು, ಅತ್ತ ವಿದ್ಯುತ್​ ಶುಲ್ಕ ಹೆಚ್ಚಿಸಿ ಜನರಿಗೆ ಆರ್ಥಿಕ ಹೊರೆಯನ್ನಾಗಿಸಿದ್ದಾರೆ. ಅಕ್ಕಿ ಕೊಡುತ್ತೇವೆ, ಹಣ ಕೊಡುತ್ತೇವೆ ಎಂದಿದ್ದರು. ಈಗ ಹೆಚ್ಚುವರಿ ಅಕ್ಕಿಯೂ ಇಲ್ಲ, ಖಾತೆಗೆ ಅಕ್ಕಿಯ ಹಣವೂ ಜಮಾ ಆಗುತ್ತಿಲ್ಲ ಎಂದು ಆರೋಪಿಸಿದರು.

ಉತ್ತರ ಕರ್ನಾಟಕ ಭಾಗದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎನ್ನುವುದಕ್ಕೆ ಇತ್ತೀಚೆಗೆ ಬೆಳಗಾವಿಯಲ್ಲಿ ದಲಿತ ಮಹಿಳೆಯೋರ್ವಳನ್ನು ನಗ್ನಗೊಳಿಸಿ ಹಲ್ಲೆ ಮಾಡಿರುವ ಅಮಾನವೀಯ ಘಟನೆಯೇ ಸಾಯಾಗಿದೆ. ಘಟನೆ ನಡೆದು ಎರಡು ವಾರ ಕಳೆದರೂ ದುಷ್ಕರ್ಮಿಗಳನ್ನು ಬಂಧಿಸದಿರುವುದು ಸರ್ಕಾರದ ವೈಫಲ್ಯಕ್ಕೆ ಸಾಕ್ಷಿಯಾಗಿದೆ ಎಂದರು.

ರಾಜ್ಯ ಸರ್ಕಾರದ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಉಡುಪಿ ಜಿಲ್ಲಾಡಳಿತ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು. ಪ್ರಭಾರ ಜಿಲ್ಲಾಧಿಕಾರಿ ಮಮತಾದೇವಿ ಜಿ.ಎಸ್​. ಮನವಿ ಸ್ವೀಕರಿಸಿದರು.

ರಾಜ್ಯ ಬಿಜೆಪಿ ಉಪಾಧ್ಯೆ ನಯನಾ ಗಣೇಶ್​, ಜಿಲ್ಲಾ ಉಪಾಧ್ಯಕ್ಷ ರವಿ ಎಂ.ಎನ್​., ಪ್ರಮುಖರಾದ ವೀಣಾ ಶೆಟ್ಟಿ, ಸತ್ಯಾನಂದ ನಾಯಕ್​, ಗುರುಪ್ರಸಾದ್​ ಶೆಟ್ಟಿ, ಶಿವಕುಮಾರ್​ ಅಂಬಲ್ಪಾಡಿ, ವಿಜಯ್​ ಕೊಡವೂರು, ರಶ್ಮಿತಾ ಶೆಟ್ಟಿ, ಗಿರೀಶ್​ ಅಂಚನ್​, ದಾವೂದ್​ ಅಬೂಬಕ್ಕರ್​, ಅಕ್ಷಯ್​ ಶೆಟ್ಟಿ, ಪ್ರಭಾಕರ್​ ಪೂಜಾರಿ, ಟಿ.ಜಿ. ಹೆಗ್ಡೆ, ಗಿರಿಧರ ಆಚಾರ್ಯ, ತಾರಾ ಆಚಾರ್ಯ, ಬಡಗೆಟ್ಟು ಗ್ರಾಪಂ ಉಪಾಧ್ಯೆ ರೂಪಾ ನಾಯಕ್​, ಸವಿತಾ ಹರೀಶ್​ರಾಮ್​, ಭಾರತಿ ಪ್ರಶಾಂತ್​, ಶ್ರೀದೇವಿ, ನಿರುಪಮಾ ಹೆಗಡೆ, ರಾಧಿಕಾ ಇತರರಿದ್ದರು.