ಲಕ್ಷ್ಮೇಶ್ವರ: ನವರಾತ್ರಿ ಉತ್ಸವದ ಅಂಗವಾಗಿ ದಸರಾ ಉತ್ಸವ ಸಮಿತಿ ವತಿಯಿಂದ ಮೂರನೇ ವರ್ಷದ ದುರ್ಗಾದೌಡ್ ಸೆ.22ರಿಂದ 30ವರೆಗೆ ಜರುಗಲಿದೆ.
ಸೋಮೇಶ್ವರ ದೇವಸ್ಥಾನ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ದುರ್ಗಾದೌಡ್ ರೂವಾರಿ ಗುರುನಾಥ ದಾನಪ್ಪನವರ ಮಾಹಿತಿ ನೀಡಿ, ಯುವ ಜನತೆಯಲ್ಲಿ ದೇಶದ ಆಚರಣೆ, ಪರಂಪರೆಗಳನ್ನು ಉಳಿಸಿ ಬೆಳೆಸುವ ಸಲುವಾಗಿ ದುರ್ಗಾದೌಡ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. 22ರಂದು ಬೆಳಿಗ್ಗೆ 5ಕ್ಕೆ ಗ್ರಾಮದೇವತೆ ದೊಡ್ಡದ್ಯಾಮವ್ವನ ದೇವಸ್ಥಾನ ಆವರಣದಲ್ಲಿ ಕರೇವಾಡಿಮಠದ ಮಳೆಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಕಾರ್ಯಕ್ರಮಕ್ಕೆ ಚಾಲನೆ ನೀಡುವರು. 23ರಂದು ಹಳ್ಳದಕೇರಿಯ ಸಣ್ಣದ್ಯಾಮವ್ವ ದೇವಸ್ಥಾನ, 24ರಂದು ಕೆಂಚಲಾಪುರ ಓಣಿಯಬನಶಂಕರಿ ದೇವಸ್ಥಾನ, 25ರಂದು ಸೊಪ್ಪಿನಕೇರಿ ಓಣಿಯ ಕೆಮ್ಮಮ್ಮನ ದೇವಸ್ಥಾನ, 26ರಂದು ಮ್ಯಾಗೇರಿ ಓಣಿಯ ದುರ್ಗಾ ದೇವಸ್ಥಾನ, 27ರಂದು ಬಸ್ತಿಬಣದ ಬನಶಂಕರಿ ದೇವಸ್ಥಾನ, 28ರಂದು ಕದರಗೆರಿ ಓಣಿಯ ಶಿವರುದ್ರಮ್ಮ ದೇವಸ್ಥಾನ, 29ರಂದು ಸಮಗಾರ ಓಣಿಯ ದುರ್ಗಾದೇವಿ ದೇವಸ್ಥಾನದಿಂದ ಪ್ರತಿದಿನ ಬೆಳಿಗ್ಗೆ 5ಕ್ಕೆ ದುರ್ಗಾದೌಡ್ ಉತ್ಸವ ಜರುಗಲಿದೆ.
29ರಂದು ಸಂಜೆ 5ಕ್ಕೆ ಬೃಹತ್ ದುರ್ಗಾದೇವಿ ಸಭಾ ಉತ್ಸವ ನಡೆಯಲಿದೆ. ಅಂದು ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 30ರಂದು ಸೋಮೇಶ್ವರ ದೇವಸ್ಥಾನದಲ್ಲಿ ದುರ್ಗಾದೌಡ್ ಕಾರ್ಯಕ್ರಮದಲ್ಲಿ ಭಾಗವಹಿಸಿದವರಿಗೆ ರಂಗೋಲಿ ಸ್ಪರ್ಧೆ ಏರ್ಪಡಿಸಲಾಗಿದೆ. ನಂತರ ದುರ್ಗಾ ಉತ್ಸವದ ಭವ್ಯ ಶೋಭಾಯಾತ್ರೆ ಗ್ರಾಮ ದೇವತೆ ದ್ಯಾಮವ್ವನ ದೇವಸ್ಥಾನಕ್ಕೆ ಆಗಮಿಸಿ ಸಂಪನ್ನಗೊಳ್ಳಲಿದೆ ಎಂದು ತಿಳಿಸಿದರು.
ದಸರಾ ಉತ್ಸವ ಸಮಿತಿ ಸಂಚಾಲಕ ಬಸವರಾಜ ಅರಳಿ ಹಾಗೂ ಪುರಸಭೆ ಸದಸ್ಯೆ ಮಹೇಶ ಹೊಗೆಸೊಪ್ಪಿನ ಮಾತನಾಡಿ, ಯುವಜನತೆಯಲ್ಲಿ ಧರ್ಮಜಾಗೃತಿ ಮೂಡಿಸುವ ಕಾರ್ಯಕ್ರಮ ಇದಾಗಿದ್ದು, ಎಲ್ಲರೂ ದುರ್ಗಾದೌಡ್ ಭಾಗವಹಿಸಬೇಕು ಎಂದರು.
ದುರ್ಗಾದೌಡ್ ಸಮಿತಿ ಅಧ್ಯಕ್ಷ ಮಲ್ಲನಗೌಡ ಪಾಟೀಲ, ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಪೂಜಾರ, ತಿಪ್ಪಣ್ಣ ಸಂಶಿ, ರವಿ ಲಿಂಗಶೆಟ್ಟಿ, ದೇವಪ್ಪ ಗಡೇದ, ರಾಜು ಗುಡಗೇರಿ, ಪ್ರಶಾಂತ ಪೋತದಾರ, ಉಮೇಶ ಕಟ್ಟಿಮನಿ, ಮಲ್ಲಪ್ಪ ಅಂಕಲಿ, ಪ್ರಕಾಶ ಮೇವುಂಡಿ, ಗುರಪ್ಪ ಮುಳಗುಂದ ಎಂ.ಎಂ. ಕಂಡೊಜಿ, ಶಿವಣ್ಣ ಗಿಡಿಬಿಡಿ ಇತರರಿದ್ದರು