ವಿಜಯವಾಣಿ ಸುದ್ದಿಜಾಲ ಉಡುಪಿ
ಹರಿಕಥೆಯೂ ಸಹ ಅಪೂರ್ವವಾದ ಕಲೆಯಾಗಿದ್ದು, ಧಾರ್ಮಿಕ ಪ್ರಸಾರದ ಪ್ರಮುಖ ಅಂಗವಾಗಿದೆ. ಇತ್ತೀಚೆಗೆ ಈ ಕಲೆ ನಶಿಸುತ್ತಿದ್ದು, ಬೆರಳೆಣಿಕೆಯಷ್ಟು ಜನ ಮಾತ್ರ ಹರಿಕಥೆ ಮಾಡುವವರಿದ್ದಾರೆ. ಪುಣ್ಯ ಗಳಿಕೆಯ ಈ ಕಲೆಯನ್ನು ಉಳಿಸಿಕೊಳ್ಳಬೇಕಿದೆ ಎಂದು ಉಡುಪಿ ಪರ್ಯಾಯ ಸುಗುಣೇಂದ್ರ ತೀರ್ಥ ಶ್ರೀಪಾದರು ನುಡಿದರು.
ಕೋಟಿ ಗೀತಾ ಲೇಖನ ಯಜ್ಞದ ಮುಂದುವರಿದ ಭಾಗವಾಗಿ ನ.20ರಿಂದ ಮಧ್ವ ಮಂಟಪದಲ್ಲಿ ಆರಂಭಗೊಂಡಿರುವ ಬೃಹತ್ ಗೀತೋತ್ಸವ ಕಾರ್ಯಕ್ರಮದಲ್ಲಿ ಹಂಡೆದಾಸ ಪ್ರತಿಷ್ಠಾನದ ಸಹಭಾಗಿತ್ವದಲ್ಲಿ ಸೋಮವಾರ ಆರಂಭಗೊಂಡ 18 ದಿನಗಳ ಭಗವದ್ಗೀತಾ ಹರಿಕಥಾ ಸರಣಿಗೆ ಚಾಲನೆ ನೀಡಿ ಆಶೀರ್ವದಿಸಿದರು.
ಪಟ್ಟದ ಕಿರಿಯ ಶಿಷ್ಯ ಸುಶ್ರೀಂದ್ರ ತೀರ್ಥ ಶ್ರೀಪಾದರು ಸಾನ್ನಿಧ್ಯ ವಹಿಸಿದ್ದರು. ಪ್ರತಿಷ್ಠಾನದ ರಾಮಚಂದ್ರ ಉಪಾಧ್ಯಾಯ ಸ್ವಾಗತಿಸಿದರು. ಸಗ್ರಿ ವೇದವ್ಯಾಸ ಐತಾಳ್ ವಂದಿಸಿದರು. ಮಧೂರು ಬಾಲಸುಬ್ರಹ್ಮಣ್ಯಂ, ಪ್ರಸನ್ನ ಆಚಾರ್ಯ, ರಮೇಶ್ ಭಟ್, ಉಪ್ಪೂರು ಭಾಗ್ಯಲಕ್ಷ್ಮೀ ಇತರರು ಉಪಸ್ಥಿತರಿದ್ದರು.
ಭಗವದ್ಗೀತೆ ಕುರಿತ ಹರಿಕಥೆಯ ಪ್ರಥಮ ಪ್ರಯೋಗ ಇದಾಗಿದೆ. ಕೃಷ್ಣನ ಸನ್ನಿಧಾನದಲ್ಲಿ ರುಕ್ಮಿಣಿ ಹಂಡೆ ಸರಣಿ ಮಾಲಿಕೆ ನಡೆಸಲಿದ್ದಾರೆ. ನಶಿಸುತ್ತಿರುವ ಈ ಕಲೆಯನ್ನು ಸಂರಕ್ಷಿಸುತ್ತಿರುವ ಅವರ ಕಾರ್ಯ, ಪ್ರಯತ್ನ ಅನುಕರಣೀಯ. ವಿಶ್ವಗೀತಾ ಪರ್ಯಾಯದಲ್ಲಿ ಹರಿಕಥೆ ನಡೆಯುತ್ತಿರುವುದು ಶ್ಲಾಘನೀಯ. | ಸುಗುಣೇಂದ್ರ ತೀರ್ಥ ಶ್ರೀಪಾದರು. ಪುತ್ತಿಗೆ ಮಠ, ಉಡುಪಿ