ಹುಣಸೂರು ನಗರದ ಅಂಚೆ ಕಚೇರಿ ಆವರಣದಲ್ಲಿ ಆದಿವಾಸಿ ಮುಖಂಡರು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸರ್ಕಾರಕ್ಕೆ ಪತ್ರ ಬರೆದು ಪತ್ರವನ್ನು ಅಂಚೆಪೆಟ್ಟಿಗೆಗೆ ಹಾಕುವ ಮೂಲಕ ಪತ್ರ ಚಳವಳಿಗೆ ಚಾಲನೆ ನೀಡಿದರು. ವಿಠಲ್ ನಾಣಾಚ್ಚಿ, ಶಾರದಾ ವಳಗೆರೆ, ಜಯಪ್ಪ, ಹರ್ಷ ಇದ್ದಾರೆ. 
ಜಿಲ್ಲೆ

ವಾರ ಕಾಲದ ಪತ್ರ ಚಳವಳಿಗೆ ಚಾಲನೆ

ವಸಂತಕುಮಾರ್ ಬಿ

ಹುಣಸೂರು: ಪ್ರೊ.ಮುಜಾಫರ್ ಅಸಾದಿ ವರದಿಯನ್ವಯ ಉಚ್ಛ ನ್ಯಾಯಾಲಯ 3418 ಆದಿವಾಸಿ ಕುಟುಂಬಗಳ ಪುನರ್ವಸತಿಗೆ ನೀಡಿರುವ ಆದೇಶವನ್ನು ಜಾರಿಗೊಳಿಸಲು ಆಗ್ರಹಿಸಿ ಆದಿವಾಸಿಗಳು ವಾರ ಕಾಲದ ಪತ್ರ ಚಳವಳಿಗೆ ಚಾಲನೆ ನೀಡುವ ಮೂಲಕ ವಿಶಿಷ್ಟವಾಗಿ ಪ್ರತಿಭಟನೆ ನಡೆಸಿದರು.

ನಗರದ ಅಂಚೆ ಮತ್ತು ತಂತಿ ಕಚೇರಿ ಬಳಿಯರುವ ಪೋಸ್ಟ್ ಬಾಕ್ಸ್‌ಗೆ ಆದಿವಾಸಿ ಮುಖಂಡರು ಮುಖ್ಯಮಂತ್ರಿ ಮತ್ತು ಸರ್ಕಾರದ ಸಂಬಂಧಪಟ್ಟ ಇಲಾಖೆಗಳ ಮುಖ್ಯಸ್ಥರಿಗೆ ಪತ್ರ ಬರೆದು ಒತ್ತಾಯಿಸಿ ಪೋಸ್ಟ್ ಮಾಡಿದರು.

ಈ ವೇಳೆ ಮಾತನಾಡಿದ ಆದಿವಾಸಿ ಜನತಾ ಪಾರ್ಲಿಮೆಂಟ್ ಅಧ್ಯಕ್ಷ ಹರ್ಷ, ಈ ಪತ್ರ ಚಳವಳಿ ಒಂದು ವಾರ ಕಾಲ ನಡೆಯಲಿದ್ದು, ಹೈಕೋರ್ಟ್ ವರದಿಯ ಪಟ್ಟಿಯಲ್ಲಿರುವ ಹುಣಸೂರು, ಎಚ್ ಡಿ.ಕೋಟೆಯ 40 ಹಾಡಿಗಳಿಂದ ಅಂಚೆ ಮೂಲಕ ಸರ್ಕಾರಕ್ಕೆ ಪತ್ರ ಕಳುಹಿಸಿ ಫೆ.17ರಂದು ಮಲೆ ಮಹದೇಶ್ವರ ಬೆಟ್ಟದಲ್ಲಿ ಆಯೋಜನೆಗೊಂಡಿರುವ ಸಂಪುಟ ಸಭೆಯಲ್ಲಿ ಹೈಕೋರ್ಟ್ ಆದೇಶ ಹಾಗೂ ಪ್ರೊ.ಅಸ್ಸಾದಿ ವರದಿ ಅನ್ವಯ ಕಾಡಿನಿಂದ ಹೊರಹಾಕಿರುವ 3418 ಆದಿವಾಸಿ ಕುಟುಂಬಗಳಿಗೆ ಪುನರ್ವಸತಿ ನೀಡಲು ತೀರ್ಮಾನ ಕೈಗೊಂಡು ಮೈಸೂರು ಜಿಲ್ಲಾಧಿಕಾರಿ ಅದನ್ನು ಅನುಷ್ಠಾನಗೊಳಿಸಲು ಆದೇಶಿಸಬೇಕೆಂದು ಒತ್ತಾಯಿಸಲಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ, ಮುಖ್ಯಕಾರ್ಯದರ್ಶಿ, ಅರಣ್ಯ ಇಲಾಖೆ ಮತ್ತು ಪರಿಶಿಷ್ಟ ಪಂಗಡಗಹಳ ಕಲ್ಯಾಣ ಇಲಾಖೆ ಮುಖ್ಯಕಾರ್ಯದರ್ಶಿಗಳಿಗೆ ಪತ್ರದ ಮೂಲಕ ಒತ್ತಾಯಿಸಲಾಗುತ್ತಿದೆ ಎಂದರು.

ರಾಜ್ಯ ಕಾನೂನು ಸೇವಾ ಸಮಿತಿ ಮಾಜಿ ಸದಸ್ಯ ವಿಠಲ್ ನಾಣಾಚ್ಚಿ ಮಾತನಾಡಿ, ಈ ಕಾರ್ಯಕ್ಕೆ ಬೇಕಾದ ಹಣಕಾಸು ವ್ಯವಸ್ಥೆಯನ್ನು ಈ ಸಾಲಿನ ರಾಜ್ಯ ಆಯವ್ಯಯದಲ್ಲಿ ಸೇರಿಸಬೇಕು. ಜಿಲ್ಲಾ ಪುನರ್ವಸತಿ ಸಮಿತಿಗೆ ಹೈಕೋರ್ಟ್ ಅರ್ಜಿದಾರರದ ಡೀಡ್ ಹಾಗೂ ಬುಡಕಟ್ಟು ಕೃಷಿಕರ ಸಂಘದ ಪ್ರತಿನಿಧಿಗಳನ್ನು ಮತ್ತು ಮೂರು ತಾಲೂಕಿನ ಕಾಡಿಂದ ಹೊರಹಾಕಲ್ಪಟ್ಟ ಆದಿವಾಸಿಗಳ 3 ಪ್ರತಿನಿಧಿಗಳನ್ನು ಸೇರಿಸಬೇಕು ಎಂದು ಆಗ್ರಹಿಸಿದರು.

ಬುಡಕಟ್ಟು ಕೃಷಿಕರ ಸಂಘದ ಅಧ್ಯಕ್ಷ ಜಯಪ್ಪ ಮಾತನಾಡಿ, ಅಂದಿನ ಅಪರ ಮುಖ್ಯ ಕಾರ್ಯದರ್ಶಿ ಪುನರ್ವಸತಿಯ ರೂಪುರೇಷೆ ತಯಾರಿಸಿ ತಲಾ 5 ಎಕರೆ ಭೂಮಿ, ಮನೆ, ಕೃಷಿಗೆ ನೆರವು, ನಾಗರಿಕ ಸೌಕರ್ಯ, ಶಿಕ್ಷಣ ಕುರಿತು ನೀಲಿನಕ್ಷೆ ತಯಾರಿಸಿದ್ದರು. ಮೈಸೂರು ವಿಭಾಗಧಿಕಾರಿಗಳ ಅಧ್ಯಕ್ಷತೆಯ ಸಮಿತಿಯಿಂದ ಸರ್ಕಾರ ಪುನರ್ವಸತಿ ಮಾಡಬೇಕಾದವರ ಪಟ್ಟಿ ಖಾತ್ರಿ ಪಡಿಸಿಕೊಂಡಿದ್ದರೂ, 10 ವರ್ಷಗಳಲ್ಲಿ ಬಂದ ಎಲ್ಲಾ ಸರ್ಕಾರಗಳ ಮುಖ್ಯಮಂತ್ರಿಗಳಿಗೂ ಎರೆಡೆರಡು ಬಾರಿ ವಿನಂತಿಸಿದ್ದರೂ ಹೈಕೋರ್ಟ್ ಆದೇಶ ಪಾಲಿಸದಿರುವುದು ಕರ್ತವ್ಯ ಲೋಪ ಅಲ್ಲವೇ ಎಂದು ಬೇಸರ ವ್ಯಕ್ತಪಡಿಸಿದರು. ಈ ವೇಳೆ ಡೀಡ್ ಸಂಸ್ಥೆಯ ಶಾರದಾ ವಳಗೆರೆ ಇತರರು ಹಾಜರಿದ್ದರು.