ಅರಕೇರಾ: ಚಂದ್ರಯಾನ-3, ಆದಿತ್ಯ ಎಲ್-1 ನೌಕೆ ಯಶಸ್ವಿ ಉಡಾವಣೆ ಮಾಡಿ ಜಗತ್ತಿನ ಗಮನ ಸೆಳೆದ ಇಸ್ರೋ ಸಂಸ್ಥೆಯಲ್ಲಿ ತಾಲೂಕಿನ ಮುಷ್ಟೂರಿನ ಜಹೀದಾ ಬೇಗಂ ಜಲಾಲ್ ಸಾಬ್ ಕೂಡ ಅಳಿಲು ಸೇವೆ ಮಾಡಿದ್ದು, ಈ ಭಾಗದ ಜನರು ಹೆಮ್ಮೆಪಡುತ್ತಿದ್ದಾರೆ.
ಜಹೀದಾ ಬೇಗಂ, 2017ರಲ್ಲಿ ಇಸ್ರೋಗೆ ಸೇರಿದ್ದು, ಪ್ರೊಡಕ್ಷನ್ ಟೆಸ್ಟಿಂಗ್ ವಿಭಾಗದಲ್ಲಿ ಟೆಸ್ಟಿಂಗ್ ಇಂಜಿನೀಯರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಸಿರವಾರದ ಸರ್ಕಾರಿ ಶಾಲೆಯಲ್ಲಿ ಪೂರ್ಣಗೊಳಿಸಿದ್ದಾರೆ. ನಂತರ ರಾಯಚೂರಿನ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಡಿಪ್ಲೊಮಾ ಇನ್ ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಷನ್ ಮುಗಿಸಿಕೊಂಡು ಇಸ್ರೋದಲ್ಲಿ ಟೆಸ್ಟಿಂಗ್ ಇಂಜಿನಿಯರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿರುವ ಸಿರವಾರದ ಹುಸೇನ್ ಸಾಬ್ ಅವರ ಪುತ್ರಿ ಜಹೀದಾ ಬೇಗಂ, ಮೂರು ತಿಂಗಳ ಹಿಂದೆ ಉಡಾವಣೆಯಾದ ಚಂದ್ರಯಾನ-3, ಆದಿತ್ಯ ಎಲ್-1 ಸೇರಿ ವಿವಿಧ ಉಪಗ್ರಹಗಳ ಉಡಾವಣೆ ಪ್ರಕ್ರಿಯೆಯಲ್ಲಿ ಕೆಲಸ ಮಾಡಿದ್ದಾರೆ.
ಇಡೀ ವಿಶ್ವ ಭಾರತದತ್ತ ಮುಖ ಮಾಡಿದೆ. ಇಸ್ರೋ ಸಾಧನೆಯಲ್ಲಿ ನನಗೆ ಅಳಿಲು ಸೇವೆ ಮಾಡುವುದಕ್ಕೆ ಅವಕಾಶ ಸಿಕ್ಕಿರುವುದು ಪುಣ್ಯ. ದೇಶಸೇವೆ ಮಾಡುವುದಕ್ಕೆ ಇಸ್ರೋ ಸಂಸ್ಥೆಯಲ್ಲಿ ಉದ್ಯೋಗಿಯಾಗಿರುವುದು ಸಂತಸ ತಂದಿದೆ. ಹೊಸ ಹೊಸ ಆವಿಷ್ಕಾರಗಳು, ಚಿಂತನೆಗಳು ಇಸ್ರೋ ಸಂಸ್ಥೆಯಿಂದ ಕಲಿಯುತ್ತಿದ್ದೇನೆ.ಜಹೀದಾ ಬೇಗಂ, ಟೆಸ್ಟಿಂಗ್ ಇಂಜಿನಿಯರ್, ಇಸ್ರೋ ಸಂಸ್ಥೆ