ಕೊಳ್ಳೇಗಾಲ: ತಾಲೂಕಿನ ವಿವಿಧೆಡೆ 30 ಲಕ್ಷ ರೂ. ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಸಂಸದ ಸುನೀಲ್ ಬೋಸ್ ಗುರುವಾರ ಚಾಲನೆ ನೀಡಿದರು.
ಪಟ್ಟಣದ ಜಿ.ವಿ ಗೌಡ ಶಿಕ್ಷಣ ಸಂಸ್ಥೆಯಲ್ಲಿರುವ ರಂಗ ಮಂದಿರದ ಮೇಲೆ 10 ಲಕ್ಷ ರೂ. ವೆಚ್ಚದಲ್ಲಿ ಹೆಚ್ಚುವರಿ ಕಟ್ಟಡ ನಿರ್ಮಾಣ ಕಾಮಗಾರಿ, ತಾಲೂಕಿನ ಮಧುವನಹಳ್ಳಿ ಗ್ರಾಮದ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದಲ್ಲಿ 10 ಲಕ್ಷ ರೂ.ವೆಚ್ಚದಲ್ಲಿ ಶೌಚಗೃಹ ನಿರ್ಮಾಣ ಕಾಮಗಾರಿ, ಸತ್ತೇಗಾಲ ಗ್ರಾಮದಲ್ಲಿರುವ ಶ್ರೀ ಸಿದ್ದಪ್ಪಾಜಿ ದೇವಾಲಯದಲ್ಲಿ 10 ಲಕ್ಷ ರೂ.ವೆಚ್ಚದಲ್ಲಿ ಮುಂದುವರೆದ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದರು.
ಈ ವೇಳೆ ಜಿ.ವಿ ಗೌಡ ಶಿಕ್ಷಣ ಸಂಸ್ಥೆಯಲ್ಲಿ ಆಯೋಜಿಸಿದ್ದ ವೇದಿಕೆ ಕಾರ್ಯಕ್ರಮ ಉದ್ದೇಶಿಸಿ ಸಂಸದ ಸುನೀಲ್ ಬೋಸ್ ಮಾತನಾಡಿ, ಪ್ರಸ್ತುತ ಸಮಾಜದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಜೀವನ ನಡೆಸಲು ಸಾಮಾನ್ಯ ಜ್ಞಾನ ಅಗತ್ಯವಿದೆ. ಅದಕ್ಕಾಗಿ ಪ್ರತಿಯೊಬ್ಬರಿಗೂ ಶಿಕ್ಷಣ ಬೇಕಿದೆ. ಗುರಿ ಸಾಧನೆಗೆ ವಿದ್ಯಾರ್ಥಿಗಳು ಶ್ರಮಿಸಬೇಕು. ಬದುಕಲು ಶಿಕ್ಷಣ ಅತ್ಯಗತ್ಯ. ಆದರೆ, ಪರೀಕ್ಷೆಯಲ್ಲಿ ಫೇಲಾದರೆ, ಕಡಿಮೆ ಅಂಕ ಪಡೆದರೆ ಜೀವನದ ಮೇಲೆ ಬೇಸರ ಹೊಂದಬಾರದು. ವಿವಿಧ ಕ್ಷೇತ್ರದಲ್ಲೂ ಸಾಧನೆ ಮಾಡುವ ಅವಕಾಶವಿದೆ ಎಂದು ಕಿವಿಮಾತು ಹೇಳಿದರು.
30 ಲಕ್ಷ ರೂ.ವೆಚ್ಚದಲ್ಲಿ ವಿವಿಧೆಡೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನಡೆಸಿದ್ದೇನೆ. ಜಿ.ವಿ ಗೌಡ ಶಿಕ್ಷಣ ಸಂಸ್ಥೆ ಕಡಿಮೆ ಶುಲ್ಕದಲ್ಲಿ ಶಿಕ್ಷಣ ಸೇವೆ ನೀಡುತ್ತಿರುವುದು ಪ್ರಶಂಸನೀಯ ಸಂಗತಿ. ಜಿ.ವಿ ಗೌಡ ಶಿಕ್ಷಣ ಸಂಸ್ಥೆ ಹೆಚ್ಚುವರಿ ಕಟ್ಟಡ ನಿರ್ಮಾಣಕ್ಕೆ 10 ಲಕ್ಷ ರೂ.ನೀಡಿದ್ದೇನೆ. ಮುಂದಿನ ದಿನಗಳಲ್ಲಿ 12 ಲಕ್ಷ ರೂ. ಅನುದಾನ ನೀಡುತ್ತೇನೆ ಎಂದು ಭರವಸೆ ನೀಡಿದರು.
ಮಾಜಿ ಶಾಸಕ ಆರ್.ನರೇಂದ್ರ ಮಾತನಾಡಿ, ಜಿ.ವಿ ಗೌಡ ಶಿಕ್ಷಣ ಸಂಸ್ಥೆಯ ರಂಗ ಮಂದಿರದ ಮೇಲೆ ಆಡಳಿತ ಭವನ ಮಾಡಲು 22 ಲಕ್ಷ ರೂ.ಗೆ ಸಂಸದರಿಗೆ ಬೇಡಿಕೆ ಇಡಲಾಗಿತ್ತು. ಸದ್ಯ 10 ಲಕ್ಷ ರೂ.ಅನುದಾನ ನೀಡಿದ್ದಾರೆ. ಮುಂದಿನ ದಿನಗಳಲ್ಲಿ 12 ಲಕ್ಷ ರೂ. ನೀಡುವ ಭರವಸೆ ನೀಡಿದ್ದಾರೆ. 1995-96ರಲ್ಲಿ ಒಕ್ಕಲಿಗರ ಸಮುದಾಯ ವಿದ್ಯಾರ್ಥಿಗಳಿಗೆ ಉಚಿತ ನಿಲಯ ಪ್ರಾರಂಭ ಮಾಡಲಾಗಿತ್ತು. ಬಳಿಕ ಡಿಎಡ್ ಕಾಲೇಜು ಆರಂಭಿಸಲಾಯಿತು. ಇದೀಗ ಎಲ್ ಕೆಜಿ ಯಿಂದ ಪಿಯುಸಿ ವರೆಗೂ ಶಿಕ್ಷಣ ನೀಡಲಾಗುತ್ತಿದೆ ಎಂದು ಹೇಳಿದರು.
ಚಾಮುಲ್ ಅಧ್ಯಕ್ಷ ನಂಜುಂಡಸ್ವಾಮಿ ಮಧುವನ ಹಳ್ಳಿ, ನಗರಸಭೆ ಅಧ್ಯಕ್ಷೆ ರೇಖಾ ರಮೇಶ್,ರಾಜ್ಯ ಉಪ್ಪಾರ ನಿಗಮದ ಮಾಜಿ ಅಧ್ಯಕ್ಷ ಶಿವಕುಮಾರ್, ರಾಜ್ಯ ಯುವ ಕಾಂಗ್ರೆಸ್ ಮಾಜಿ ಕಾರ್ಯದರ್ಶಿ ಚೇತನ್ ದೊರೈರಾಜ್, ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಚಂದ್ರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ತೋಟೇಶ್, ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಮಾದೇಶ್, ಕಾರ್ಯದರ್ಶಿ ಸಿದ್ದೇಗೌಡ, ನಗರಸಭೆ ಸದಸ್ಯರು ಹಾಗೂ ಮುಖಂಡರು ಇದ್ದರು.