ಕುಶಾಲನಗರ: ಜಾಗತಿಕ ತಾಪಮಾನ ಹೆಚ್ಚಳ, ಅನಾವೃಷ್ಟಿ, ಅರಣ್ಯ ನಾಶ ಮುಂತಾದ ಪ್ರಾಕೃತಿಕ ವಿಕೋಪಗಳ ತಡೆಗಾಗಿ ಪ್ರತಿಯೊಬ್ಬರೂ ಕನಿಷ್ಠ ವರ್ಷಕ್ಕೊಂದಾದರೂ ಗಿಡವನ್ನು ನೆಟ್ಟು ಪೋಷಿಸಿ ಎಂದು ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್‌ಗೌಡ ಕರೆ ನೀಡಿದರು.
ಶಾಲಾ ಶಿಕ್ಷಣ ಇಲಾಖೆ ಹಾಗೂ ಅರಣ್ಯ ಇಲಾಖೆ ವತಿಯಿಂದ ಆಯೋಜಿಸಿದ್ದ ಸಸ್ಯ ಶ್ಯಾಮಲಾ ಕಾರ್ಯಕ್ರಮವನ್ನು ಕುಶಾಲನಗರದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ಆವರಣದಲ್ಲಿ ಮಂಗಳವಾರ ಗಿಡ ನೆಡುವ ಮೂಲಕ ಉದ್ಘಾಟಿಸಿ ಮಾತನಾಡಿದರು. ದ್ಯಾರ್ಥಿಗಳು ಗಿಡ ನೆಡಲು ಮತ್ತು ಪೋಷಿಸಲು ಕಾರ್ಯ ಪ್ರವೃತ್ತವಾಗಬೇಕೆಂದರು.
ಹಸಿರಿನಿಂದ ಕಂಗೊಳಿಸುವ ಶಾಲೆಯ ವಾತಾವರಣವು ಕಲಿಕೆಗೆ ಮತ್ತು ಸಾಧನೆಗೆ ಹೆಚ್ಚು ಪ್ರೇರಣೆ ನೀಡುತ್ತದೆ. ಎಲ್ಲರೂ ಒಗ್ಗಟ್ಟಾಗಿ ಪರಿಸರವನ್ನು ಉಳಿಸಿದರೆ ಮಾತ್ರ ಭವಿಷ್ಯದಲ್ಲಿ ಉತ್ತಮ ಗಾಳಿ, ಮಳೆ ಮತ್ತು ಪ್ರಕೃತಿಯ ಲಾಭವನ್ನು ಪಡೆಯಬಹುದು ಎಂದರು.
ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜೇಶ್ ಮದಲಾಪುರ, ಮುಖ್ಯಶಿಕ್ಷಕಿ ಬಿ.ಎನ್.ಪುಷ್ಪಾ, ಶಾಲೆಯ ಸಹ ಶಿಕ್ಷಕರು, ಸಿಬ್ಬಂದಿ ವರ್ಗ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ವಿ.ಪಿ ಶಶಿಧರ್, ಕೆ.ಪಿ. ಚಂದ್ರಕಲಾ, ಪುರಸಭೆ ಸದಸ್ಯರಾದ ಪ್ರಮೋದ್ ಮುತ್ತಪ್ಪ, ಶೇಕ್ ಕಲೀಮುಲ್ಲಾ ಮತ್ತು ಪ್ರಮುಖರು ಉಪಸ್ಥಿತರಿದ್ದರು.