ಜಿಲ್ಲೆ

ಸಹ್ಯಾದ್ರಿ ಕ್ಷೇಮ ನಿಧಿ ಆರಂಭ

ಯಲ್ಲಾಪುರ: ಸಹ್ಯಾದ್ರಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘದಿಂದ ಸದಸ್ಯರ ಅನುಕೂಲಕ್ಕಾಗಿ ಸಹ್ಯಾದ್ರಿ ಕ್ಷೇಮ ನಿಧಿ ಆರಂಭಿಸಲಾಗುತ್ತಿದೆ ಎಂದು ಸಂಘದ ಅಧ್ಯಕ್ಷ ಉಮೇಶ ಭಾಗ್ವತ ಹೇಳಿದರು.

ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ನಿಧಿಯ ಮೂಲಕ ಸದಸ್ಯರ ಅನಾರೋಗ್ಯದ ವೇಳೆ ಚಿಕಿತ್ಸೆಗೆ 25 ಸಾವಿರದಿಂದ 1 ಲಕ್ಷದವರೆಗೆ ನೆರವಾಗಬಹುದಾಗಿದೆ. ಸದಸ್ಯರು ಮಾತ್ರವಲ್ಲದೇ, ಸಂಘದ ಮೂಲಕ ಅಡಕೆ ವಿಕ್ರಿ ಮಾಡುವವರೂ ಈ ಸೌಲಭ್ಯಕ್ಕೆ ಅರ್ಹರಾಗಿರುತ್ತಾರೆ ಎಂದರು.

ಅಡಕೆ ದಲಾಲಿ ಆರಂಭಿಸಿದ ಎರಡನೇ ಪ್ರಾಥಮಿಕ ಪತ್ತಿನ ಸಹಕಾರಿ ಇದಾಗಿದೆ. ಯಲ್ಲಾಪುರ ತಾಲೂಕಿನ 10 ಸಹಕಾರಿ ಸಂಘಗಳು, ಜೊಯಿಡಾ, ಶಿರಸಿ, ಅಂಕೋಲಾದ ಕೆಲ ಸಹಕಾರಿ ಸಂಘಗಳೂ ವಿಸ್ವಾಸದಿಂದ ಸಂಘದ ಮೂಲಕ ಅಡಕೆ ವಿಕ್ರಿ ನಡೆಸುತ್ತಿವೆ. ಅಡಕೆ ವ್ಯವಹಾರವನ್ನು ಇನ್ನಷ್ಟು ಅಭಿವೃದ್ಧಿಪಡಿಸುವ ಯೋಜನೆ ಹೊಂದಿದ್ದೇವೆ ಎಂದು ವಿವರಿಸಿದರು.

ಸಂಘದ ಉಪಾಧ್ಯಕ್ಷ ರಾಘವೇಂದ್ರ ಕೋಣೆಮನೆ, ನಿರ್ದೇಶಕರಾದ ಶ್ರೀಕಾಂತ ಹೆಬ್ಬಾರ, ರಾಘವೇಂದ್ರ ಭಟ್ಟ, ಸೂರ್ಯನಾರಾಯಣ ಭಟ್ಟ, ರಾಮಕೃಷ್ಣ ಹೆಗಡೆ, ಶ್ರೀಪಾದ ಗಾಂವ್ಕರ, ಗಣಪತಿ ಗೌಡ, ಅರುಣ ನಾಯ್ಕ, ವಿನುತಾ ಗದ್ದೆ, ಮುಖ್ಯಕಾರ್ಯನಿರ್ವಾಹಕ ದತ್ತಾತ್ರೇಯ ಹೆಗಡೆ, ಶಾಖಾ ವ್ಯವಸ್ಥಾಪಕ ಅನಂತ ಹೆಗಡೆ ಇದ್ದರು.