ಮೈಸೂರು: ಅಯೋಧ್ಯೆಯ ರಾಮಮಂದಿರದಲ್ಲಿ ಶ್ರೀರಾಮಲಲ್ಲಾ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ನಂ. 1 ಕನ್ನಡ ದಿನಪತ್ರಿಕೆ ‘ವಿಜಯವಾಣಿ’ ವತಿಯಿಂದ ಹೊರತರಲಾದ ‘ರಾಮೋತ್ಸವ’ ವಿಶೇಷ ಸಂಚಿಕೆಯನ್ನು ಸೋಮವಾರ ಅನಾವರಣಗೊಳಿಸಲಾಯಿತು.
ಅವಧೂತ ದತ್ತಪೀಠದಲ್ಲಿ ಆಯೋಜಿಸಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ವಿಶೇಷ ಸಂಚಿಕೆ ಬಿಡುಗಡೆ ಮಾಡಿ ಶುಭ ಹಾರೈಸಿದರು.
ಆಸಕ್ತಿಯಿಂದ ಸಂಚಿಕೆಯನ್ನು ಗಮನಿಸಿದ ಶ್ರೀಗಳು, ಲೇಖನಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ನಂ. 1 ಕನ್ನಡ ದಿನಪತ್ರಿಕೆಯಾಗಿರುವ ‘ವಿಜಯವಾಣಿ’ ಸಾಮಾಜಿಕ, ಧಾರ್ಮಿಕ ಕಾರ್ಯಗಳಲ್ಲಿಯೂ ಮುಂಚೂಣಿಯಲ್ಲಿ ಮಾಹಿತಿ ನೀಡುತ್ತಿದೆ. ರಾಮಲಲ್ಲಾ ಪ್ರತಿಷ್ಠಾಪನೆ ಸಮಯದಲ್ಲಿ ವಿಶೇಷ ಸಂಚಿಕೆ ಹೊರತಂದಿರುವುದು ಶ್ಲಾಘನೀಯ ಕಾರ್ಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಅಯೋಧ್ಯೆಯಲ್ಲಿ ಬಾಲರಾಮನ ಮೂರ್ತಿ ಕೆತ್ತನೆ ಮಾಡಿರುವ ಶಿಲ್ಪಿ ಮೈಸೂರಿನ ಅರುಣ್ ಯೋಗಿರಾಜ್ ಅವರ ತಂದೆ ಯೋಗಿರಾಜ್ ಅವರು ಶ್ರೀಮಠದೊಂದಿಗೆ ಬಾಂಧವ್ಯ ಹೊಂದಿದ್ದರು. ಮಠಕ್ಕೂ ಅನೇಕ ಶಿಲ್ಪಗಳನ್ನು ನೀಡಿದ್ದಾರೆ. ಅಯೋಧ್ಯೆಯಲ್ಲಿ ನಮ್ಮ ಶ್ರೀಮಠದಿಂದ ಮಂದಿರ ನಿರ್ಮಿಸುತ್ತಿದ್ದು, ಅವುಗಳನ್ನು ಅಲ್ಲಿ ಪ್ರತಿಷ್ಠಾಪನೆ ಮಾಡಲಾಗುವುದು ಎಂದರು.
ಕೋಟ್ಯಂತರ ಭಾರತೀಯರ ಅಭಿಲಾಷೆಯಂತೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಗೊಂಡಿದ್ದು, ಈಗ ಮೂರ್ತಿ ಪ್ರತಿಷ್ಠಾಪನೆ ಮಾಡಿರುವುದು ಎಲ್ಲರ ಮನದಲ್ಲಿ ಸಂತಸ ಮೂಡಿಸಿದೆ. ಈ ಕ್ಷಣಕ್ಕಾಗಿ ಎಲ್ಲೆಡೆ ಹಿಂದುಗಳು ಕಾತರದಿಂದ ಕಾಯುತ್ತಿದ್ದರು. ಶ್ರೀರಾಮನ ಮಂದಿರ ನಿರ್ಮಾಣದ ಜತೆಗೆ ದೇಶವೂ ರಾಮರಾಜ್ಯವಾಗಿ ಎಲ್ಲರೂ ಸುಭಿಕ್ಷದಿಂದ ಬಾಳುವೆ ಮಾಡಬೇಕು ಎಂದು ಹರಸಿದರು.
ಅವದೂತ ದತ್ತ ಪೀಠದ ಕಿರಿಯ ಸ್ವಾಮೀಜಿ ಶ್ರೀ ದತ್ತ ವಿಜಯಾನಂದತೀರ್ಥ ಶ್ರೀಗಳು, ‘ವಿಜಯವಾಣಿ’ ಸ್ಥಾನಿಕ ಸಂಪಾದಕ ಎಂ.ಆರ್.ಸತ್ಯನಾರಾಯಣ, ಜಾಹೀರಾತು ವಿಭಾಗದ ಶಮಂತ್, ಮೈಸೂರು ನಗರ ಪತ್ರಿಕಾ ಪ್ರತಿನಿಧಿಗಳಾದ ಶಾಂತೇಶ್, ಪ್ರಕಾಶ್ ಇತರರು ಇದ್ದರು.