ಮೈಸೂರು: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ನಗರದ ಎಸ್.ಎಂ.ಟಿ ಆಸ್ಪತ್ರೆಯಲ್ಲಿ ಭಾನುವಾರ ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರು ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಕ್ಕಳು ಅಂಗಾಂಗಗಳ ನ್ಯೂನ್ಯತೆಗೆ ಒಳಗಾಗಬಾರದು ಎಂಬ ಮುನ್ನಚ್ಚರಿಕೆ ಕ್ರಮವಾಗಿ ಸರ್ಕಾರ ಪೋಲಿಯೋ ಲಸಿಕಾ ಅಭಿಯಾನ ಹಮ್ಮಿಕೊಂಡಿದೆ. ಎಲ್ಲ ಪಾಲಕರು ತಮ್ಮ ಐದು ವರ್ಷದೊಳಗಿನ ಮಕ್ಕಳಿಗೆ ನಿರ್ಲಕ್ಷ್ಯ ಮಾಡದೆ ಕಡ್ಡಾಯವಾಗಿ ಪೋಲಿಯೋ ಹಾಕಿಸಬೇಕು. ಸಮಾಜದಲ್ಲಿ ಎಲ್ಲ ಮಕ್ಕಳು ಆರೋಗ್ಯದಿಂದ ಗುಣಮಟ್ಟದ ಶಿಕ್ಷಣ ಪಡೆಯಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಅಂಗವಿಕಲ ಮಕ್ಕಳಿಗೆ ಗಾಲಿಕುರ್ಚಿ, ಎಂ.ಆರ್.ಯೋಜನೆಯಡಿ ಸಾಮಗ್ರಿ ಕಿಟ್, ಕಾರ್ಮಿಕ ಇಲಾಖೆಯಿಂದ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಲ್ಯಾಪ್‌ಟಾಪ್ ವಿತರಿಸಲಾಯಿತು.
ವಿಧಾನ ಪರಿಷತ್ ಸದಸ್ಯರಾದ ಡಾ.ಡಿ.ತಿಮ್ಮಯ್ಯ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ.ಗಾಯತ್ರಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಪಿ.ಸಿ.ಕುಮಾರಸ್ವಾಮಿ, ಮೈಸೂರು ವೈದ್ಯಕೀಯ ಮಹಾವಿದ್ಯಾಲಯದ ಹಾಗೂ ಸಂಶೋಧನಾ ಕೇಂದ್ರದ ನಿರ್ದೇಶಕಿ ಡಾ.ದಾಕ್ಷಾಯಿಣಿ, ಜಿಲ್ಲಾ ಆರ್.ಸಿ.ಎಚ್‌ಅಧಿಕಾರಿ ಡಾ.ಜಯಂತ್, ನೋಡಲ್ ಅಧಿಕಾರಿ ಡಾ.ವಸಂತ್, ಸಿಎಚ್‌ಒ ಡಾ.ವೆಂಕಟೇಶ್ ಇತರರು ಇದ್ದರು.