ಜಿಲ್ಲೆ

ಪೋಷಣ್ ಅಭಿಯಾನಕ್ಕೆ ಚಾಲನೆ

reportermys

ಮಡಿಕೇರಿ: ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಪೌಷ್ಟಿಕತೆ ಅತಿ ಮುಖ್ಯ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಸದಸ್ಯ ಕಾರ್ಯದರ್ಶಿ ಕೆ.ಬಿ.ಪ್ರಸಾದ್ ಹೇಳಿದರು.


ಪೋಷಣ್ ಮಾಸಾಚರಣೆ ಪ್ರಯುಕ್ತ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಇವರ ಸಹಯೋಗದೊಂದಿಗೆ ನಾಪೋಕ್ಲು ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಪೋಷಣ್ ಅಭಿಯಾನದಡಿ ಶುಕ್ರವಾರ ಆಯೋಜಿಸಿದ್ದ ಪೋಷಣ್ ಮಾಸಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.


ಮಹಿಳೆಯರಿಗೆ, ಮಕ್ಕಳಿಗೆ, ಶ್ರಮಿಕರಿಗೆ ಹೀಗೆ ಎಲ್ಲಾ ಜನರಿಗೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಡಿ ಉಚಿತ ಕಾನೂನು ನೆರವು ಕಲ್ಪಿಸಲಾಗುವುದು. ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಪೌಷ್ಟಿಕತೆ ಅತಿ ಮುಖ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.


ನಾಪೋಕ್ಲು ಗ್ರಾ.ಪಂ.ಸದ್ಯಸ ಆಮೀನ, ಪೌಷ್ಟಿಕ ಆಹಾರ ಸೇವನೆಯಿಂದ ಆಗುವ ಲಾಭ ಮತ್ತು ಸ್ಥಳೀಯ ಆಹಾರ ಪದಾರ್ಥ ಬಳಸುವ ಬಗ್ಗೆ ಮಾಹಿತಿ ನೀಡಿದರು.


ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಶಿಶು ಅಭಿವೃದ್ಧಿ ಯೋಜನೆಯ ಮಹಿಳಾ ಮೇಲ್ವಿಚಾರಕಿ ಸಿ.ಪಿ.ಸವಿತ ಮಾತನಾಡಿ, ಪೌಷ್ಠಿಕ ಆಹಾರದ ಅಗತ್ಯತೆ, ನೀರು ಮತ್ತು ನೈರ್ಮಲ್ಯದಡಿ ಕಾರ್ಯಕ್ರಮ ಉಪಯೋಗ ಬಗ್ಗೆ ಮಾಹಿತಿ ನೀಡಿದರು.


ಕರ್ನಾಟಕ ಪಬ್ಲಿಕ್ ಶಾಲೆಯ ಮಕ್ಕಳು, ಅಂಗನವಾಡಿ ಕಾರ್ಯಕರ್ತೆ, ಆಶಾ ಕಾರ್ಯಕರ್ತೆಯರೆಲ್ಲ ಸೇರಿ ಪೋಷಣ್ ಅಭಿಯಾನ ನಡೆಸಿದರು. ಕಾರ್ಯಕ್ರಮದಲ್ಲಿ ಪೌಷ್ಟಿಕ ಆಹಾರಗಳ ಪ್ರದರ್ಶನ ನಡೆಯಿತು.


ಕಾರ್ಯಕ್ರಮದಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಯ ಮುಖ್ಯ ಶಿಕ್ಷಕಿ ಚಂದ್ರಕಲಾ, ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಜಾನಕಿ, ಪೊಷಣ್ ಅಭಿಯಾನ ಯೋಜನೆಯ ತಾಲೂಕು ಸಂಯೋಜಕ ಸುಗುಣ, ಅಂಗನವಾಡಿ ಕಾರ್ಯಕರ್ತೆಯರ ಸಂಘದ ಅಧ್ಯಕ್ಷ ಪವಿತ್ರ, ಅಂಗನವಾಡಿ ಕಾರ್ಯಕರ್ತೆಯರ ಸಂಘದ ಕಾರ್ಯದರ್ಶಿ ಆಶಾಲತ ಹಾಗೂ ನಾಪೋಕ್ಲು ಮತ್ತು ಬಲ್ಲಮಾವಟಿ ವಲಯದ ಅಂಗನವಾಡಿ ಕಾರ್ಯಕರ್ತೆ ಹಾಗೂ ಆಶಾ ಕಾರ್ಯಕರ್ತೆಯರು ಹಾಜರಿದ್ದರು.