ಮೈಸೂರು: ಮೈಸೂರು ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ (ಮೈಮುಲ್) ಆ.15 ರಿಂದ ಸೆಪ್ಟೆಂಬರ್ 20 ರವರೆಗೆ ಹಮ್ಮಿಕೊಂಡಿರುವ ‘ನಂದಿನಿ ಸಿಹಿ ಉತ್ಸವ’ಕ್ಕೆ ಮಂಗಳವಾರ ನಗರದ ಮೈಮುಲ್ ಮೆಗಾ ಡೇರಿ ಆವರಣದ ನಂದಿನಿ ಮಿಲ್ಕ್ ಗ್ಯಾಲಕ್ಸಿಯಲ್ಲಿ ಚಾಲನೆ ದೊರೆ ಯಿತು.
ಸಿಹಿ ಉತ್ಸವಕ್ಕೆ ಚಾಲನೆ ನೀಡಿದ ಮೈಮುಲ್ ಅಧ್ಯಕ್ಷ ಪಿ.ಎಂ. ಪ್ರಸನ್ನ ಮಾತನಾಡಿ, ವರ್ಷಕ್ಕೆ ಎರಡು ಬಾರಿ ಮೈಮುಲ್ ವತಿಯಿಂದ ಸಿಹಿ ಉತ್ಸವವನ್ನು ಆಚರಿಸಲಾಗುತ್ತದೆ. ಈ ಬಾರಿ ಗೌರಿ ಗಣೇಶೋತ್ಸವ ಹಾಗೂ ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಆ.15 ರಿಂದ ಸೆಪ್ಟೆಂಬರ್ 20 ರವರೆಗೆ ಸಿಹಿ ಉತ್ಸವ ಹಮ್ಮಿಕೊಳ್ಳಲಾಗಿದ್ದು, ಈ ಉತ್ಸವದಲ್ಲಿ ಮೈಮುಲ್‌ನ ಸಿಹಿ ಉತ್ಪನ್ನಗಳ ಮೇಲೆ ಶೇ.20 ರಷ್ಟು ರಿಯಾಯಿತಿ ಪಡೆಯಬಹುದು ಎಂದು ಹೇಳಿದರು.
ಡಿಸೆಂಬರ್ ಅಂತ್ಯದಲ್ಲಿ ಮತ್ತೊಂದು ಸಿಹಿ ಉತ್ಸವನ್ನು ಆಚರಿಸಲಾಗುವುದು. ನಂದಿನಿ ಉತ್ಪನ್ನಗಳು ಹೆಚ್ಚು ಜನರಿಗೆ ತಲುಪಬೇಕು ಎಂಬ ಉದ್ದೇಶದಿಂದ ಸಿಹಿ ಉತ್ಸವವನ್ನು ಆಚರಿಸಲಾಗುತ್ತಿದೆ. ಈ ಉತ್ಸವದಲ್ಲಿ ಹೆಚ್ಚಿನ ವಹಿವಾಟು ನಿರೀಕ್ಷಿಸಲಾಗುತ್ತಿದೆ. ದಸರಾ ಉತ್ಸವ ಸಂದರ್ಭದಲ್ಲೂ ಸಿಹಿ ಉತ್ಸವ ಆಚರಿಸಲು ಚಿಂತನೆ ನಡೆಸಲಾಗುವುದು, ಈ ಕುರಿತು ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್) ಜತೆಗೆ ಮಾತುಕತೆ ನಡೆಸಲಾಗುವುದು ಎಂದರು.
ಈ ಸಂದರ್ಭ ಮೈಮುಲ್ ನಿರ್ದೇಶಕರಾದ ಎ.ಟಿ. ಸೋಮಶೇಖರ್, ಕೆ. ಉಮಾಶಂಕರ್, ಕೆ.ಜಿ. ಮಹೇಶ್, ಸಿ.ಓಂಪ್ರಕಾಶ್, ಕೆ. ಈರೇಗೌಡ, ಕೆ.ಎಸ್. ಕುಮಾರ್, ದ್ರಾಕ್ಷಾಯಿಣಿ ಬಸವರಾಜಪ್ಪ, ಲೀಲಾ ಬಿ.ಕೆ. ನಾಗರಾಜ್, ಬಿ.ನೀಲಾಂಬಿಕೆ ಮಹೇಶ್ ಕುರಹಟ್ಟಿ, ಶಿವಗಾಮಿ ಷಣ್ಮುಗಂ, ಡಿ. ರಾಜೇಂದ್ರ, ಬಿ.ಎನ್. ಸದಾನಂದ, ಆರ್. ಚೆಲುವರಾಜು, ಗುರುಸ್ವಾಮಿ, ವ್ಯವಸ್ಥಾಪಕ ನಿರ್ದೇಶಕ ಬಿ.ಎನ್. ವಿಜಯ ಕುಮಾರ್, ವ್ಯವಸ್ಥಾಪಕರಾದ ಕೆ.ಎಸ್. ಜಗದೀಶ್, ಎಚ್.ಕೆ. ಜಯಶಂಕರ್ ಹಾಗೂ ಇತರರು ಇದ್ದರು.