ಮಂಡ್ಯ: ಮಂಡ್ಯ ನಗರಕ್ಕೆ ಹೈಟೆಕ್ ಸ್ಪರ್ಶ ನೀಡುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗುತ್ತಿದೆ. ಅದರಂತೆ ನಗರಸಭೆ ವ್ಯಾಪ್ತಿಯ 35 ವಾರ್ಡ್‌ನ ಸಮಗ್ರ ಅಭಿವೃದ್ದಿಗೆ 200 ಕೋಟಿ ರೂ ಅನುದಾನ ಬಳಕೆ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಸುಸಜ್ಜಿತ ನಗರವಾಗಿ ಬದಲಾವಣೆ ಕಾಣಲಿದೆ ಎಂದು ಶಾಸಕ ರವಿಕುಮಾರ್ ಗಣಿಗ ವಿಶ್ವಾಸ ವ್ಯಕ್ತಪಡಿಸಿದರು.
ಮಹಾವೀರ ವೃತ್ತ ಹಾಗೂ ಹೊಸಹಳ್ಳಿ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆ ಅಭಿವೃದ್ದಿಗೆ ನಗರದ ಹೊಸಹಳ್ಳಿಯ ಗುರುಮಠ ಸಮೀಪ ಚಾಲನೆ ನೀಡಿ ಮಾತನಾಡಿದ ಅವರು, ಜಿಲ್ಲಾ ಕೇಂದ್ರವಾಗಿರುವ ಮಂಡ್ಯ ನಗರ ನಿರೀಕ್ಷಿತ ಅಭಿವೃದ್ದಿ ಕಂಡಿಲ್ಲ. ನಗರ ವ್ಯಾಪ್ತಿಯ ಪ್ರಮುಖ ರಸ್ತೆಗಳು ತೀರಾ ಹದಗೆಟ್ಟ ಸ್ಥಿತಿಯಲ್ಲಿವೆ. ಅವುಗಳ ಅಭಿವೃದ್ದಿಗೆ ಕ್ರಮ ವಹಿಸಲಾಗಿದ್ದು, ನಗರ ವ್ಯಾಪ್ತಿಯಲ್ಲಿ ಹಲವು ಸಾರ್ವಜನಿಕ ಸ್ನೇಹಿ ಯೋಜನೆಗಳು ಕಾರ್ಯಗತಗೊಳ್ಳಲಿದೆ. ಇದರಿಂದ ನಗರದ ಚಿತ್ರಣ ಬದಲಾಗಲಿದೆ ಎಂದು ತಿಳಿಸಿದರು.
ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ಪ್ರಮುಖ ರಸ್ತೆಗಳ ಆಧುನೀಕರಣ ಹಾಗೂ ಚರಂಡಿ ಅಭಿವೃದ್ದಿಗೆ ಯೋಜನೆ ರೂಪಿಸಲಾಗಿದೆ. 9 ಕೋಟಿ ರೂ ವೆಚ್ಚದಲ್ಲಿ ಹೊಸಹಳ್ಳಿ ಸಂಪರ್ಕ ರಸ್ತೆ ಮತ್ತು ಹೊಳಲು ವೃತ್ತದ ಸಂಪರ್ಕ ರಸ್ತೆ ಅಭಿವೃದ್ದಿಪಡಿಸಿ ಅತ್ಯಾಧುನಿಕ ರೀತಿಯ ವಿದ್ಯುತ್ ದೀಪ ಅಳವಡಿಕೆ, ಫುಟ್‌ಪಾತ್ ನಿರ್ಮಾಣಕ್ಕೆ ಕ್ರಮ ವಹಿಸಲಾಗುವುದು. 800 ಮೀಟರ್ ವ್ಯಾಪ್ತಿಯ ಮಹಾವೀರ ವೃತ್ತದಿಂದ ಹೊಸಹಳ್ಳಿ ಬಿಸಿಲು ಮಾರಮ್ಮ ದೇವಾಲಯ ವೃತ್ತ ಸಂಪರ್ಕಿಸುವ ಪ್ರಮುಖ ರಸ್ತೆಯ ಉನ್ನತ್ತೀಕರಣಕ್ಕೆ ಡೆಲ್ಟಾ ಮತ್ತು ನಗರಸಭೆ ಸಹಯೋಗದಲ್ಲಿ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ವೃತ್ತಗಳ ಸೌಂದರ್ಯಿಕರಣ ಮತ್ತು ಪುಟ್‌ಪಾತ್ ನಿರ್ಮಾಣಕ್ಕೆ ಒತ್ತು ನೀಡಲಾಗಿದೆ ಎಂದರು.
ತೀರಾ ದುಸ್ಥಿತಿಯಲ್ಲಿದ್ದ ರೈಲ್ವೇ ಸೇತುವೆಯನ್ನು 38 ಲಕ್ಷ ರೂ ವೆಚ್ಚದಲ್ಲಿ ಅಭಿವೃದ್ದಿಪಡಿಸಲಾಗಿದೆ. ಮೂರು ಕೋಟಿ ರೂ ವೆಚ್ಚದಲ್ಲಿ ಕನ್ನಿಕ ಪರಮೇಶ್ವರಿ ದೇವಾಲಯ ವೃತ್ತದಿಂದ ಚಾಮುಂಡೇಶ್ವರಿ ದೇವಾಲಯ ವೃತ್ತದ ರಸ್ತೆ ಅಭಿವೃದ್ದಿ ಕೈಗೆತ್ತಿಕೊಳ್ಳಲಾಗಿದ್ದು, 2ನೇ ಹಂತದಲ್ಲಿ ಅಂದಾಜು ಆರೂವರೆ ಕೋಟಿ ರೂ ವೆಚ್ಚದಲ್ಲಿ ಗೌರಿ ಶಂಕರ ಸಮುದಾಯ ಭವನದ ಹೊರಗಿನ ರಸ್ತೆ ಅಭಿವೃದ್ದಿ ಮಾಡಲಾಗುವುದು. 3ನೇ ವಾರ್ಡ್ ನಿವಾಸಿಗಳಿಗೆ ಮಳೆಗಾಲದಲ್ಲಿ ಉಂಟಾಗುತ್ತಿದ್ದ ಅತಿವೃಷ್ಠಿ ತಡೆಗೆ ಕ್ರಮ ವಹಿಸಲಾಗಿದ್ದು, 10 ಕೋಟಿ ರೂ ವಿಶೇಷ ಅನುದಾನದಲ್ಲಿ ವಾರ್ಡ್‌ನ ಸಮಗ್ರ ಅಭಿವೃದ್ದಿ ಹಾಗೂ ಮೂಲ ಸೌಕರ್ಯಗಳನ್ನು ಕಲ್ಪಿಸಲಾಗುವುದು ಎಂದು ವಿವರಿಸಿದರು.
ಮುಖ್ಯರಸ್ತೆಗಳಿಗೆ ಹೈಟೆಕ್ ನಾಮಫಲಕ ಅಳವಡಿಕೆ, ಕಲ್ಲಹಳ್ಳಿ ಸ್ಮಶಾನದಲ್ಲಿ 6 ಕೋಟಿ ರೂ ವೆಚ್ಚದಲ್ಲಿ ಅತ್ಯಾಧುನಿಕ ವಿದ್ಯುತ್ ಚಿತಾಗಾರ ನಿರ್ಮಾಣ ಮತ್ತು ಕೆರೆ ಅಭಿವೃದ್ದಿಗೆ ಆದ್ಯತೆ ನೀಡಲಾಗುವುದು. ಅಂತೆಯೇ 11 ಕೋಟಿ ರೂ ವೆಚ್ಚದಲ್ಲಿ ವಿ.ವಿ.ನಗರ ಮತ್ತು ಗುತ್ತಲು ಸಮೀಪದ ಚರಂಡಿಗಳ ಉನ್ನತೀಕರಣಕ್ಕೆ ಕ್ರಮ ವಹಿಸಲಾಗುವುದೆಂದು ತಿಳಿಸಿದರು.
ನಗರಸಭೆ ಅಧ್ಯಕ್ಷ ಎಂ.ವಿ.ಪ್ರಕಾಶ್, ಉಪಾಧ್ಯಕ್ಷ ಅರುಣ್‌ಕುಮಾರ್, ಮಾಜಿ ಅಧ್ಯಕ್ಷ ಎಚ್.ಎಸ್.ಮಂಜು, ಸದಸ್ಯೆ ಪವಿತ್ರಾ ಬೋರೇಗೌಡ, ಪೌರಾಯುಕ್ತೆ ಪಂಪಾಶ್ರೀ, ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ರುದ್ರಪ್ಪ ಇತರರಿದ್ದರು.