ಸುಬ್ರಹ್ಮಣ್ಯ: ಕೇರ್ಪಡ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವ ಕಾರ್ಯಕ್ರಮ ಬುಧವಾರ ಆರಂಭಗೊಂಡಿದೆ. ಇದರ ಪ್ರಾರಂಭಿಕ ಅಂಗವಾಗಿ ಭಕ್ತರು ಹಸಿರು ಹೊರೆಕಾಣಿಕೆ ಸಮರ್ಪಿಸಿದರು. ಕೇರ್ಪಡದಲ್ಲಿ ನಡೆದ ವಿರಾಟ್ ಧಾರ್ಮಿಕ ಮಹೋತ್ಸವಕ್ಕೆ ಭಕ್ತರು ಭಕ್ತಿಪೂರ್ವಕವಾಗಿ ಸುವಸ್ತುಗಳನ್ನು ಸಮರ್ಪಿಸಿದರು.
ವೈಭವದ ಮೆರವಣಿಗೆ:
ಬುಧವಾರ ಊರ ಪರವೂರ ಭಕ್ತರಿಂದ ಹಸಿರು ಕಾಣಿಕೆ ಸಮರ್ಪಣೆ ನಡೆಯಿತು.ಅಲೆಕ್ಕಾಡಿ ಪೇಟೆಯಿಂದ ಬೃಹತ್ ಹಸಿರು ಹೊರೆಕಾಣಿಕೆ ಮೆರವಣಿಗೆ ಆರಂಭಗೊಂಡಿತು.ಮೆರವಣಿಗೆಗೆ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಸಂತ ನಡುಬೈಲು ಚಾಲನೆ ನೀಡಿದರು. 15ಕ್ಕೂ ಅಧಿಕ ವಾಹನಗಳಲ್ಲಿ ಚೆಂಡೆ ಮತ್ತು ಸಿಂಗಾರಿ ಮೇಳದ ನಿನಾದದ ನಡುವೆ ಬೃಹತ್ ಮೆರವಣಿಗೆಯಲ್ಲಿ ಹಸಿರು ಹೊರೆಕಾಣಿಕೆಯನ್ನು ತಂದು ದೇವಳಕ್ಕೆ ಸಮರ್ಪಿಸಿದರು. ಕ್ಷೇತ್ರದ ತಂತ್ರಿ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಬುಧವಾರದಿಂದ ಜ.7ರ ವರೆಗೆ ನಡೆಯಲಿದೆ.
ಉಗ್ರಾಣ ಮುಹೂರ್ತ:
ಬೆಳಗ್ಗೆ ದೇವಳದಲ್ಲಿ ಸಾಮೂಹಿಕ ಪ್ರಾರ್ಥನೆ, ಉಗ್ರಾಣ ಮುಹೂರ್ತದ ವಿಧಿವಿಧಾನ ನೆರವೇರಿತು. ದೇವಳದ ಪ್ರಧಾನ ಅರ್ಚಕ ಶ್ರೀಹರಿ ಕುಂಜೂರಾಯ ವೈದಿಕ ವಿಧಿವಿಧಾನ ನೆರವೇರಿಸಿದರು. ಮಧ್ಯಾಹ್ನ ಮಹಾಪೂಜೆ ನಡೆದು ಪ್ರಸಾದ ವಿತರಿಸಲಾಯಿತು. ಸಂಜೆ ಕ್ಷೇತ್ರಕ್ಕೆ ಆಗಮಿಸಿದ ತಂತ್ರಿಗಳಿಗೆ ಹಾಗೂ ಇತರ ಋತ್ವಿಜರಿಗೆ ಪೂರ್ಣಕುಂಭ ಸ್ವಾಗತ ಮಾಡಲಾಯಿತು. ದೇವತಾ ಪ್ರಾರ್ಥನೆ, ಸ್ವಸ್ತಿ ಪುಣ್ಯಾಹವಾಚನ, ಆಚಾರ್ಯಾದಿ ಋತ್ವಿಗ್ವರಣ, ಪ್ರಾಸಾದ ಶುದ್ಧಿ, ಅಂಕುರಾರೋಪಣ, ರಾಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಪೂಜಾಬಲಿ, ಮಹಾಪೂಜೆ, ಪ್ರಸಾದ ವಿತರಣೆ ಜರುಗಿತು. ಕೇರ್ಪಡ ಶ್ರೀ ಮಹಿಷಮರ್ದಿನಿ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ನಡೆಯಿತು.
ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಸಂತ ನಡುಬೈಲು, ಸದಸ್ಯರಾದ ವೆಂಕಪ್ಪ ಗೌಡ ಆಲಾಜೆ, ರೂಪರಾಜ ರೈ ಕೆ, ನಾಗೇಶ್ ಆಳ್ವ ಕಟ್ಟಬೀಡು, ಯೋಗಾನಂದ ಉಳ್ಳಲಾಡಿ, ಭಾಗ್ಯಪ್ರಸನ್ನ, ರಘುನಾಥ ಎಂಜೀರು, ವಾರಿಜಾಕ್ಷಿ ಕೇರ್ಪಡ, ಬ್ರಹ್ಮಕಲಶೋತ್ಸವ ಸಮಿತಿ ಸಂಚಾಲಕ ಶಿವಾನಂದ ಬೊಳ್ಕಜೆ, ಪ್ರಧಾನ ಕಾರ್ಯದರ್ಶಿ ಅನೂಪ್ ಕುಮಾರ್ ಆಳ್ವ ಸೇರಿದಂತೆ ಬ್ರಹ್ಮಕಲಶೋತ್ಸವ ಸಮಿತಿ ಪದಾಧಿಕಾರಿಗಳು, ಸದಸ್ಯರು, ವಿವಿಧ ಸಮಿತಿಗಳ ಪದಾಧಿಕಾರಿಗಳು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಮತ್ತು ಭಕ್ತರು ಉಪಸ್ಥಿತರಿದ್ದರು.
ಇಂದಿನ ಧಾರ್ಮಿಕ ಕಾರ್ಯಕ್ರಮಗಳು
2ರಂದು ಬೆಳಗ್ಗೆ ಗಂಟೆ 5.30ರಿಂದ ಉಷಃಪೂಜೆ, ಮಹಾಗಣಪತಿ ಹೊಮ, ಅಂಕುರಪೂಜೆ, ಚತುಃಶುದ್ಧಿ, ಧಾರೆ, ಅವಗಾಹ, ಪಂಚಕ ಬಿಂಬಶುದ್ಧಿ, ಖತನಾದಿ ಸ್ಥಳಶುದ್ಧಿ, ದ್ವಾರ ಪ್ರಾಯಶ್ಚಿತ ಹೋಮಗಳು, ಮಧ್ಯಾಹ್ನ 12ಕ್ಕೆ ಪ್ರಸಾದ ವಿತರಣೆ, ಹೋಮಗಳ ಕಲಾಶಾಭೀಷೇಕ, ಮಹಾಪೂಜೆ, ಸಂಜೆ 5.30ರಿಂದ ದೀಪಾರಾಧನೆ, ಅಂಕುರಪೂಜೆ, ಕುಂಡಶುದ್ಧಿ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ. ಸಂಜೆ 6ರಿಂದ ಭಜನಾ ಕಾರ್ಯಕ್ರಮ, 7ರಿಂದ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದ್ದು, ಶ್ರೀ ಕಾಣಿಯೂರು ರಾಮತೀರ್ಥ ಮಠದ ಶ್ರೀ ವಿದ್ಯಾವಲ್ಲಭ ಶ್ರೀಪಾದರು ಆಶೀರ್ವಚನ ನೀಡುವರು. ದ.ಕ.ಮಾಜಿ ಸಂಸದ ಅಧ್ಯಕ್ಷತೆ ವಹಿಸುವರು. ಕೆಮ್ಮಿಂಜೆ ಕಾರ್ತಿಕ್ ತಂತ್ರಿಗಳು ಧಾರ್ಮಿಕ ಉಪನ್ಯಾಸ ನೀಡುವರು. ರಾತ್ರಿ 9ರಿಂದ ಸಾಂಸ್ಕೃತಿ ಕಾರ್ಯಕ್ರಮದಲ್ಲಿ ಹರಿಕಥಾ ಕಾಲಕ್ಷೇಪ, ಮ್ಯಾಜಿಕ್ ಶೋ, ಮಿಮಿಕ್ರಿ ಮತ್ತು ಜಗ್ಲಿಂಗ್ ಶೋ ನಡೆಯಲಿದೆ.