ನಗರದ ಜಿಎಸ್‌ಎಸ್‌ಎಸ್ ಮಹಿಳಾ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮೂರು ದಿನಗಳ ಕಾಲ ಆಯೋಜಿಸಿರುವ ವಾರ್ಷಿಕ ತಾಂತ್ರಿಕ-ಸಾಂಸ್ಕೃತಿಕ ಉತ್ಸವ ‘ಗೀತಯಾನ-2023’ಕ್ಕೆ ಚಾಲನೆ ದೊರೆಯಿತು.
ಕಾಲೇಜಿನ ಎಂ.ಗೋವಿಂದರಾವ್ ಮೆಮೋರಿಯಲ್ ಹಾಲ್‌ನಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗಣ್ಯರು ಚಾಲನೆ ನೀಡಿದರು.
ಮೈಸೂರು ರಂಗಾಯಣದ ಮಾಜಿ ನಿರ್ದೇಶಕ ಅಡ್ಡಂಡ ಸಿ.ಕರಿಯಪ್ಪ ಮಾತನಾಡಿ, ವಿದ್ಯಾರ್ಥಿಗಳು ಅಳವಡಿಸಿಕೊಳ್ಳಬೇಕಾದ ನೈತಿಕ ಮೌಲ್ಯಗಳ ಕುರಿತು ಮಾರ್ಗದರ್ಶ ಮಾಡಿದರು. ಶಿಕ್ಷಕರು ಮತ್ತು ಪಾಲಕರ ಬೆಂಬಲವನ್ನು ಶ್ಲಾಘಿಸಿದರು. ಸಮಾಜಕ್ಕೆ ಮಹಿಳೆಯರು ನೀಡಿದ ಕೊಡುಗೆಗಳ ಬಗ್ಗೆ ಬೆಳಕು ಚೆಲ್ಲಿದರು. ರಾಷ್ಟ್ರದ ಉತ್ಪಾದಕತೆಗೆ ಸಹಕರಿಸುವ ನಾಗರಿಕರಾಗಲು ವಿದ್ಯಾರ್ಥಿಗಳನ್ನು ಪ್ರೇರೇಪಿಸಿದರು. ಸರ್ ಎಂ.ವಿಶ್ವೇಶ್ವರಯ್ಯ ಅವರ ಸಾಧನೆ ಬಗ್ಗೆ ತಿಳಿಸಿದರು.
ಮುಖ್ಯ ಅತಿಥಿ ಡಾ.ರಾಜ್ ಸಿ.ಮೋಹನ್ ಅವರು, ಪ್ರಸ್ತುತ ಸನ್ನಿವೇಶದಲ್ಲಿ ಇಂಜಿನಿಯರಿಂಗ್ ಕೌಶಲಗಳನ್ನು ಅಭಿವೃದ್ಧಿಪಡಿಸಲು ಆಲಿಸುವಿಕೆ ಮತ್ತು ವೀಕ್ಷಣೆಯ ಮಹತ್ವವನ್ನು ತಿಳಿಸಿದರು. ಮಹಿಳೆಯರಿಗೆ ಗುಣಮಟ್ಟದ ತಾಂತ್ರಿಕ ಶಿಕ್ಷಣ ನೀಡುವಲ್ಲಿ ಜಿಎಸ್‌ಎಸ್‌ಎಸ್ ಸಂಸ್ಥೆ ಮಾಡುತ್ತಿರುವ ಪ್ರಯತ್ನವನ್ನು ಶ್ಲಾಘಿಸಿದ ಅವರು, ಪ್ರಸ್ತುತ ಆಧುನಿಕ ತಂತ್ರಜ್ಞಾನದ ಮಹತ್ವದ ಬಗ್ಗೆ ತಿಳಿಸಿಕೊಟ್ಟರು.
ಇದೇ ವೇಳೆ 2021-22ನೇ ಶೈಕ್ಷಣಿಕ ಸಾಲಿನಲ್ಲಿ ಉನ್ನತ ಶ್ರೇಣಿಯಲ್ಲಿ ಸಾಧನೆ ಮಾಡಿರುವ ವಿದ್ಯಾರ್ಥಿಗಳನ್ನು ಗಣ್ಯರು ಸನ್ಮಾನಿಸಿದರು. ಜಿಎಸ್‌ಎಸ್‌ಎಸ್‌ನ ಆಡಳಿತ ಸಮಿತಿ ಸದಸ್ಯರಾದ ಆರ್.ಕೆ.ಭರತ್, ಬಿ.ಕೆ.ನಟರಾಜ್, ಆಡಳಿತಾಧಿಕಾರಿ ಅನುಪಮಾ ಬಿ.ಪಂಡಿತ್ ಇತರರಿದ್ದರು.