ಇಂಡಿ ತಾಲೂಕು ತಡವಲಗಾದ ಜೋಡಗುಡಿಯಲ್ಲಿ ನಡೆದ ಹಾಸ್ಯ ಸಂಜೆ ಕಾರ್ಯಕ್ರಮಕ್ಕೆ ಗಂಗಾವತಿ ಪ್ರಾಣೇಶ, ಬಾಬುರಾಜೇಂದ್ರ ನಾಯಕ ಉದ್ಘಾಟಿಸಿದರು. ಅಭಿನವ ರಾಚೋಟೇಶ್ವರ ಶಿವಾಚಾರ್ಯರು, ಕೊಟ್ಟೂರು ಸಿದ್ದಲಿಂಗ ಶಿವಾಚಾರ್ಯರು ಇದ್ದರು. 
ಜಿಲ್ಲೆ

ನಗು ಜೀವನದ ದೊಡ್ಡ ಆಸ್ತಿ

Vijayapura - Desk - Parashuram Keri

ಇಂಡಿ: ತಾಲೂಕಿನ ಸುಕ್ಷೇತ್ರ ತಡವಲಗಾ ಗ್ರಾಮದ ಜೋಡುಗುಡಿಯ ಮರುಳಸಿದ್ದೇಶ್ವರ ನೂತನ ದೇವಾಲಯದ ಲೋಕಾರ್ಪಣೆ ನಿಮಿತ್ತವಾಗಿ ಶನಿವಾರ ಸಾಯಂಕಾಲ ಜೋಡಗುಡಿಯಲ್ಲಿ ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ, ಬಸವರಾಜ ಮಾಮನಿ, ನರಸಿಂಹ ಜೋಶಿ ತಂಡದ ನಗೆ ಸಂಭ್ರಮ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಾಡಿಸಿತು.

ಸ್ವದೇಶಿ ಜಾಗರಣ ಮಂಚ ಸಂಚಾಲಕ ಶಂಕರಗೌಡ ಪಾಟೀಲ (ಡೋಮನಾಳ) ಮಾತನಾಡಿ, ನಗು ಜೀವನದ ದೊಡ್ಡ ಆಸ್ತಿ, ಯಾವಾಗಲೂ ನಗುತ್ತಲಿದ್ದರೆ ಜೀವನ ಸುಂದರವಾಗಿರುತ್ತದೆ. ಸಿದ್ಧೇಶ್ವರ ಶ್ರೀಗಳು ಸಹ ನಗುವಿನ ಬಗ್ಗೆ ತಮ್ಮ ಪ್ರವಚನದಲ್ಲಿ ಸಾರಿಸಾರಿ ಹೇಳುತ್ತಿದ್ದರು. ನಗುತ್ತಲಿದ್ದರೆ ಎಲ್ಲ ದುಃಖ ದುಮ್ಮಾನಗಳು, ರೋಗ ರುಜಿನಗಳು ದೂರವಾಗುತ್ತವೆ ಎಂದರು.

ಗಂಗಾವತಿ ಪ್ರಾಣೇಶ ಮಾತನಾಡಿ, ಜೀವನ ಎಂದರೆ ಅದು ಮೂರು ದಿನಗಳ ಸಂತೆ, ನಗುವಾಗ ನಕ್ಕು ಬಿಡಿ, ನಗುವ ಸಂದರ್ಭ ಒದಗಿ ಬಂದರೂ ಬಿಗುವಿನ ಮೊಗ ತೋರಿಸಬೇಡಿ ಎಂಬ ಸಲಹೆಯೊಂದಿಗೆ ತಮ್ಮ ಹಾಸ್ಯ ಮಾತುಗಳನ್ನು ಪ್ರಾರಂಭಿಸಿ, ನಗುವು ಸಾಂಕ್ರಾಮಿಕ ಪರಹಿತ ಚಿಂತನೆಯ ಆತ್ಮವಾಗಿದೆ. ನಗುವಿನಿಂದ ಆಯುಷ್ಯ ಹೆಚ್ಚಾಗುತ್ತದೆ ಎಂದು ಹೇಳಿದರು.

ನರಸಿಂಹ ಜೋಶಿ ಮಾತನಾಡಿ, ಹಾಸ್ಯವು ಹೃದಯಗಳನ್ನು ಸೆರೆ ಹಿಡಿಯುತ್ತದೆ. ಅತಿ ವಾಸ್ತವಿಕತೆಯ ಕುರುಹುಗಳನ್ನು ಸಹ ನೀಡುತ್ತದೆ. ನಗುವಿಗೆ ವಯೋವೃದ್ಧಿಯ ಮಿತಿಯಿಲ್ಲ. ಹಾಸ್ಯವು ಮುಖದ ಮೇಲೆ ಸಾಂಕ್ರಾಮಿಕ ನಗುವನ್ನು ಹೆಣೆಯುವ ದಾರವಾಗಿದೆ ಎಂದರು.

ಬಿಜೆಪಿ ಮುಖಂಡ ಬಾಬುರಾಜೇಂದ್ರ ನಾಯಕ ಉದ್ಘಾಟಿಸಿದರು. ತಡವಲಗಾ ಹಿರೇಮಠದ ಅಭಿನವ ರಾಚೋಟೇಶ್ವರ ಶಿವಾಚಾರ್ಯರು, ಕೊಟ್ಟೂರು ಸಿದ್ದಲಿಂಗ ಶಿವಾಚಾರ್ಯರು, ರೋಡಗಿ ಶ್ರೀಗಳು, ಗೋಳಸಾರದ ಅಭಿನವ ಪುಂಡಲಿಂಗ ಮಾಹಾರಾಜರು, ಶಿವಾನಂದ ಶಾಸ್ತ್ರಿಗಳು ಸಾನ್ನಿಧ್ಯ ವಹಿಸಿದ್ದರು. ಮಲ್ಲನಗೌಡ ಪಾಟೀಲ, ಗುರುನಾಥ ಬಗಲಿ, ಅಪ್ಪು ಕಲ್ಲೂರ, ಜಟ್ಟೆಪ್ಪ ಮರಡಿ, ಗುಂಡು ರೂಗಿ, ಮಲ್ಕಪ್ಪ ತಡ್ಲಗಿ, ಬಾಬುಸಾವುಕಾರ ಮೇತ್ರಿ, ಬಸವರಾಜ ಇಂಡಿ, ಚಂದ್ರಶೇಖರ ರೂಗಿ, ಮಳಸಿದ್ದಪ್ಪ ಬ್ಯಾಳಿ, ಕಾಂತು ಇಂಡಿ, ಸಚಿನ್ ಇಂಡಿ ಇತರರಿದ್ದರು.