ಜಿಲ್ಲೆ

ಬೀದಿಬದಿ ವ್ಯಾಪಾರಿಗಳಿಗೆ ನಗರಸಭೆ ಪಾಠ

ಎನ್.ವೆಂಕಟೇಶ್

ಸಲಹೆ ಸೂಚನೆ ಪಾಲಿಸದಿದ್ದರೆ ನಿರ್ದಾಕ್ಷಿಣ್ಯ ಕ್ರಮ ನಿಷೇಧಿತ ಪ್ಲಾಸ್ಟಿಕ್ ಬಳಕೆ, ಪುಟ್‌ಪಾತ್ ಒತ್ತುವರಿಗೆ ಬೇಸರ

ಚಿಕ್ಕಬಳ್ಳಾಪುರ: ಜಿಲ್ಲಾ ಕೇಂದ್ರದಲ್ಲಿ ಸುಗಮ ಸಂಚಾರ ವ್ಯವಸ್ಥೆ, ಆಹಾರ ಸುರಕ್ಷತೆ ಕಾಯ್ದೆ ಸೇರಿ ವಿವಿಧ ವಿಚಾರಗಳ ಬಗ್ಗೆ ಬೀದಿಬದಿ ವ್ಯಾಪಾರಿಗಳಿಗೆ ಪಾಠ ಮಾಡಿದ ಅಧಿಕಾರಿಗಳು, ಸಲಹೆ ಸೂಚನೆ ಪಾಲಿಸದಿದ್ದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.

ನಗರಸಭೆ ಕಚೇರಿ ಸಭಾಂಗಣದಲ್ಲಿ ಅಧ್ಯಕ್ಷ ಎ.ಗಜೇಂದ್ರ ನೇತೃತ್ವದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಪೊಲೀಸ್, ಆರೋಗ್ಯ, ಕಂದಾಯ ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳು ಮಾರ್ಗಸೂಚಿ ನಿಯಮಗಳ ಬಗ್ಗೆ ತಿಳಿಸಿದರು. ಹಾಗೆಯೇ ಜಿಲ್ಲಾ ಕೇಂದ್ರದಲ್ಲಿ ಅವೈಜ್ಞಾನಿಕ ಕೆಲಸಗಳಿಂದ ಕಾಡುತ್ತಿರುವ ಸಮಸ್ಯೆಗಳ ಬಗ್ಗೆ ಗಮನ ಸೆಳೆದರು.

ಉಪಾಧ್ಯಕ್ಷ ಜೆ.ನಾಗರಾಜ್, ಪೌರಾಯುಕ್ತ ಮನ್ಸೂರ್ ಅಲಿ, ಆರೋಗ್ಯ ಇಲಾಖೆ ಅಧಿಕಾರಿ ಜಿ.ಹರೀಶ್, ಸಂಚಾರ ಠಾಣೆ ಪಿಎಸ್‌ಐ ನಾಗರಾಜ್ ಮತ್ತಿತರರು ಇದ್ದರು.

ಬೀದಿಬದಿ ವ್ಯಾಪಾರಕ್ಕೆ ಬೇಸರ

ಜಿಲ್ಲಾ ಕೇಂದ್ರದಲ್ಲಿ ಹಲವೆಡೆ ರಸ್ತೆ, ಪುಟ್‌ಪಾತ್‌ಗಳನ್ನು ಒತ್ತುವರಿ ಮಾಡಿಕೊಂಡು ವ್ಯಾಪಾರ ಮಾಡಲಾಗುತ್ತಿದೆ. ಇದರಿಂದ ಜನರು ಓಡಾಡಲು ತೊಂದರೆಯಾಗಿದೆ. ಹಾಗೆಯೇ ನಿಷೇಧಿತ ಪ್ಲಾಸ್ಟಿಕ್ ಉತ್ಪನ್ನಗಳನ್ನು ಬಳಸುತ್ತಿರುವುದರ ಜತೆಗೆ ಆಹಾರ ಸುರಕ್ಷತಾ ನಿಯಮಗಳನ್ನು ಉಲ್ಲಂಸಲಾಗುತ್ತಿದೆ ಎಂದು ಸಭೆಯಲ್ಲಿ ಬೇಸರ ವ್ಯಕ್ತವಾಯಿತು. ತ್ಯಾಜ್ಯವನ್ನು ನಗರಸಭೆ ವಾಹನಗಳಿಗೆ ನೀಡಬೇಕು. ಆದರೆ, ಪ್ರಮುಖ ವೃತ್ತಗಳಲ್ಲಿ ಬಿಸಾಡುತ್ತಿರುವುದು ಕಂಡುಬಂದಿದೆ. ಮುಂದಿನ ದಿನಗಳಲ್ಲಿ ಇದಕ್ಕೆ ಅವಕಾಶ ನೀಡುವುದಿಲ್ಲ ಎಂದು ಸೂಚಿಸಲಾಯಿತು.

ಹೆಚ್ಚಿನ ಸಮಯ ಬೇಕು

ರಾತ್ರಿ ವೇಳೆ ಬೀದಿಬದಿ ವ್ಯಾಪಾರದ ನಿಗದಿತ ಸಮಯವನ್ನು ವಿಸ್ತರಿಸಬೇಕು. ಹಾಗೆಯೇ ವ್ಯಾಪಾರಕ್ಕೆ ಅನುಕೂಲವಾಗುವಂತೆ ನಗರದಲ್ಲಿ ಪ್ರಮುಖ ಸ್ಥಳಗಳನ್ನು ಗುರುತಿಸಿಕೊಡಲು ಬೀದಿಬದಿ ವ್ಯಾಪಾರಸ್ಥರು ಮನವಿ ಮಾಡಿದರು.

ವಹಿವಾಟಿಗೆ ತೊಂದರೆ ಇಲ್ಲ

ಜನ ಮತ್ತು ವಾಹನ ಸಂಚಾರಕ್ಕೆ ತೊಂದರೆಯಾಗದಂತೆ ಸರ್ಕಾರಿ ನಿಯಮಗಳನ್ನು ಪಾಲಿಸಿಕೊಂಡು ವಹಿವಾಟು ನಡೆಸಲು ಅಭ್ಯಂತರವಿಲ್ಲ. ಆದರೆ, ನಮ್ಮನ್ನು ಕೇಳುವವರ‌್ಯಾರು ಎಂಬ ಭಾವನೆಯಲ್ಲಿ ಬೇಕಾಬಿಟ್ಟಿಯಾಗಿ ವರ್ತಿಸುವುದನ್ನು ಸಹಿಸಲಾಗುವುದಿಲ್ಲ. ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪೊಲೀಸ್ ಅಧಿಕಾರಿಗಳು ಎಚ್ಚರಿಕೆ ನೀಡಿದರು.

ಸಭೆಯಲ್ಲಿ ನಿರ್ಣಯಗಳು* ಎಲ್ಲೆಂದರಲ್ಲಿ ವಹಿವಾಟು ನಡೆಸದಿರುವುದು

* ಪುಟ್‌ಪಾತ್ ಅಕ್ರಮ ಒತ್ತುವರಿ ತೆರವು

* ಪ್ಲಾಸ್ಟಿಕ್ ಬಳಸದಿರುವುದು.

* ಸಂಬಂಧಪಟ್ಟ ಪ್ರಾಧಿಕಾರದ ಅನುಮತಿ

* ಸಕ್ಷಮ ಪ್ರಾಧಿಕಾರಗಳ ನಿಯಮ ಪಾಲನೆ

* ರಾತ್ರಿ ನಿಗದಿತ ಅವಧಿಯವರೆಗೂ ವಹಿವಾಟು

* ಸಮರ್ಪಕ ಸ್ವಚ್ಛತಾ ನಿರ್ವಹಣೆ

"ಜನರ ಆರೋಗ್ಯದ ಹಿತದೃಷ್ಟಿಯಿಂದ ತಿಂಡಿ ತಿನಿಸು, ಆಹಾರ ಪದಾರ್ಥ ಮಾರಾಟದ ಹೋಟೆಲ್, ಅಂಗಡಿಗಳು ಕಡ್ಡಾಯವಾಗಿ ಆಹಾರ ಸುರಕ್ಷತಾ ಕಾಯ್ದೆ ನಿಯಮಗಳಿಗೊಳಪಟ್ಟು ಕಾರ್ಯ ನಿರ್ವಹಿಸಬೇಕು." - ಜಿ.ಹರೀಶ್, ಆರೋಗ್ಯಾಧಿಕಾರಿ, ಚಿಕ್ಕಬಳ್ಳಾಪುರ "ನಗರಸಭೆ ವ್ಯಾಪ್ತಿಯಲ್ಲಿ ಸುಗಮ ವಹಿವಾಟು ನಡೆಸಲು ಬೀದಿಬದಿ ವ್ಯಾಪಾರಿಗಳಿಗೆ ಅಗತ್ಯ ಸಹಕಾರ ಇರುತ್ತದೆ. ಆದರೆ, ಯಾರೇ ಆಗಲಿ ನಿಯಮ ಉಲ್ಲಂಸುವ ಧೋರಣೆ ಬಿಡಬೇಕು." - ಎ.ಗಜೇಂದ್ರ, ನಗರಸಭೆ ಅಧ್ಯಕ್ಷ, ಚಿಕ್ಕಬಳ್ಳಾಪುರ "ನಗರ ವ್ಯಾಪ್ತಿಯಲ್ಲಿ ಜನಸ್ನೇಹಿ ವ್ಯವಸ್ಥೆಗಾಗಿ ಶ್ರಮಿಸಲಾಗುತ್ತಿದೆ. ಇದಕ್ಕೆ ಪ್ರತಿಯೊಬ್ಬರೂ ಅಗತ್ಯ ಸಹಕಾರ ನೀಡಬೇಕು. ಚಾಚೂ ತಪ್ಪದೇ ನಿಯಮಗಳನ್ನು ಪಾಲಿಸಬೇಕು." - ಜೆ.ನಾಗರಾಜ್, ನಗರಸಭೆ ಉಪಾಧ್ಯಕ್ಷ, ಚಿಕ್ಕಬಳ್ಳಾಪುರ