ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್  
ಜಿಲ್ಲೆ

ಅಭ್ಯರ್ಥಿಗಳ ಮೇಲೆ ಲಾಠಿಚಾರ್ಜ್: ನೈತಿಕ ಹೊಣೆ ಹೊತ್ತು ಪ್ರಧಾನಿ ರಾಜೀನಾಮೆ ನೀಡಲಿ

ಪ್ರಮುಖ ಮುಖ್ಯಾಂಶಗಳು

  • ಸುದ್ದಿಗೋಷ್ಠಿಯಲ್ಲಿ ಯು.ಟಿ. ಖಾದರ್ ಹೇಳಿಕೆ
ಮಂಗಳೂರು: ನೀಟ್ ಅಕ್ರಮದ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸುವ ಮೂಲಕ ಕೇಂದ್ರ ಸರ್ಕಾರ ದೇಶದ ಸಂವಿಧಾನ ಹಾಗೂ ಪ್ರಜಾಪ್ರಭುತ್ವಕ್ಕೆ ಅಪಚಾರ ಮಾಡಿದೆ. ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯ ನೈತಿಕ ಹೊಣೆಗಾರಿಕೆಯನ್ನು ಹೊತ್ತು ಕೇಂದ್ರ ಶಿಕ್ಷಣ ಸಚಿವರು ಹಾಗೂ ಪ್ರಧಾನಮಂತ್ರಿಗಳು ರಾಜೀನಾಮೆ ನೀಡಬೇಕು ಹಾಗೂ ಸಾವಿಗೀಡಾದ 20 ಮಂದಿ ವಿದ್ಯಾರ್ಥಿಗಳ ಕುಟುಂಬಕ್ಕೆ ಪರಿಹಾರ ಒದಗಿಸಬೇಕು ಎಂದು ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಹೇಳಿದರು.
ಬುಧವಾರ ಸರ್ಕ್ಯೂಟ್ ಹೌಸ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,
ದೇಶದಲ್ಲಿ ಲಕ್ಷಾಂತರ ವಿದ್ಯಾರ್ಥಿಗಳಿಗೆ ಆಗಿರುವ ಅನ್ಯಾಯ, ಮಕ್ಕಳನ್ನು ಕಳೆದುಕೊಂಡ ಹೆತ್ತವರ ನೋವಿಗೆ ಧ್ವನಿಯಾಗಿ ಪ್ರತಿಭಟನೆ ನಡೆಯುತ್ತಿದೆ. ಅತ್ತ ಸಂಸತ್ತಿನಲ್ಲಿಯೂ ಚರ್ಚೆಗೆ ಅವಕಾಶ ನೀಡದೆ, ಇತ್ತ ಪ್ರತಿಭಟನೆ ಮಾಡುವವರ ಮಾಡುವವರ ಮೇಲೆ ಲಾಠಿ ಪ್ರಯೋಗ ಮಾಡುತ್ತಿರುವುದು ಖಂಡನೀಯ. ವಿದ್ಯಾರ್ಥಿಗಳ ಬೇಡಿಕೆಯನ್ನು ಆರಂಭದಲ್ಲಿಯೇ ಕೇಂದ್ರ ಸರ್ಕಾರ ಮನ್ನಿಸಿದ್ದರೆ ಇಂತಹ ಘಟನೆಗಳಿಗೆ ಕಾರಣವಾಗುತ್ತಿರಲಿಲ್ಲ. ಕೇಂದ್ರ ಸರ್ಕಾರ ಪ್ರತಿಭಟನಾನಿರತರ ಬೇಡಿಕೆಗಳಿಗೆ ತಕ್ಷಣವೇ ಸ್ಪಂದಿಸಬೇಕು. ಪ್ರಧಾನಿ ಮೌನ ಮುರಿಯಬೇಕು ಎಂದು ಯು.ಟಿ. ಖಾದರ್ ಆಗ್ರಹಿಸಿದರು.
ಪ್ರತಿಭಟನಾ ಸ್ಥಳಕ್ಕೆ ನಕಲಿ ಪೊಲೀಸರು ಬಂದಿದ್ದಾರೆ ಎನ್ನಲಾಗುತ್ತಿದ್ದು, ಬಂದಿದ್ದರೆ ಅವರನ್ನು ಅಸಲಿ ಪೊಲೀಸರೇ ಕರೆಸಿರಬಹುದು. ಪಂಜಾಬ್‌ನ ರೈತರು ಪ್ರತಿಭಟನೆ ನಡೆಸಿದಾಗಲೂ ಕೇಂದ್ರ ಸರ್ಕಾರ ಈ ರೀತಿ ಮಾಡಿತ್ತು. ಇದೀಗ ವಿದ್ಯಾರ್ಥಿಗಳ ಮೇಲೆಯೂ ಅವರು ಹೊರಗಿನಿಂದ ಬಂದವರು, ದೇಶದ್ರೋಹಿಗಳು ಎಂದೆಲ್ಲಾ ಅಪಪ್ರಚಾರ ಮಾಡಲಾಗುತ್ತಿದೆ. ಹೊರಗಿನವರಾಗಿದ್ದರೆ ಕೇಂದ್ರದ ಗುಪ್ತಚರ ಇಲಾಖೆ ಏನು ಮಾಡುತ್ತಿದೆ ಎಂದು ಯು.ಟಿ.ಖಾದರ್ ಪ್ರಶ್ನಿಸಿದರು.
ವಿದ್ಯಾರ್ಥಿಗಳ ಪ್ರತಿಭಟನೆಯನ್ನು ಕಾಂಗ್ರೆಸ್ ಪಕ್ಷ ಹಾಗೂ ನಾಯಕ ರಾಹುಲ್ ಗಾಂಧಿಯವರು ಗಂಭೀರವಾಗಿ ಪರಿಗಣಿಸಿದ್ದಾರೆ. ತಾಲೂಕು ಹಾಗೂ ಮುಂದಿನ ದಿನಗಳಲ್ಲಿ ಜಿಲ್ಲಾಮಟ್ಟದಲ್ಲಿಯೂ ಕಾಂಗ್ರೆಸ್‌ನಿಂದ ಪ್ರತಿಭಟನೆ ನಡೆಯಲಿದೆ ಎಂದರು.
ಕೊಡಗಿನ ಶಾಸಕ ಡಾ. ಮಂತರ್ ಗೌಡ, ನಾಯಕರಾದ ಸದಾಶಿವ ಉಳ್ಳಾಲ, ಮಮತಾ ಗಟ್ಟಿ, ರಮೇಶ್ ಶೆಟ್ಟಿ, ನವಾಝ್, ಸುಹೇಲ್ ಕಂದಕ್, ಶೇಖರ್ ಸುದ್ದಿಗೋಷ್ಠಿಯಲ್ಲಿದ್ದರು.