ಮೊಳಕಾಲ್ಮೂರು: ಮಕ್ಕಳಲ್ಲಿ ಆಡಗಿರುವ ಸುಪ್ತ ಪ್ರತಿಭೆಯನ್ನು ಅನಾವರಣಗೊಳಿಸಲು ಪ್ರತಿಭಾ ಕಾರಂಜಿ ಕಾರ್ಯಕ್ರಮ ಅತ್ಯಂತ ಮಹತ್ವಪೂರ್ಣ ಪಡೆದುಕೊಂಡಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ನಿರ್ಮಲಾದೇವಿ ಹೇಳಿದರು.
ತಾಲೂಕಿನ ಹುಚ್ಚಂಗಿದುರ್ಗದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಇಂದಿನ ಮಕ್ಕಳ ಉಜ್ವಲ ಭವಿಷ್ಯಕ್ಕೆ ಶಿಕ್ಷಣದಷ್ಟೇ ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳು ತುಂಬಾ ಪ್ರಾಮುಖ್ಯತೆ ಪಡೆದುಕೊಂಡಿವೆ ಎಂದರು.
ಶಾಲಾ ಹಂತದಲ್ಲಿ ಮಕ್ಕಳ ಸಾಮರ್ಥ್ಯವನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಶಿಕ್ಷಕರಿಂದಾಗಬೇಕು. ಸಿಕ್ಕ ಅವಕಾಶವನ್ನು ಸಮರ್ಥವಾಗಿ ಬೆಳಸಿಕೊಳ್ಳುವಂತೆ ಪ್ರೇರೇಪಿಸಬೇಕು. ಯಾವುದೇ ಚಟುವಟಿಕೆಯಾಗಲಿ ಭಾಗವಹಿಸುವ ಮನೋಭಾವ ಇದ್ದರೆ ಒಂದು ದಿನ ಜಯದ ಮೆಟ್ಟಿಲು ಕಟ್ಟಿಟ್ಟ ಬುತ್ತಿ ಎಂದರು.
ಎಸ್‌ಡಿಎಂಸಿ ಅಧ್ಯಕ್ಷ ಗುರುಸ್ವಾಮಿ ಮಾತನಾಡಿ, ಪ್ರಸ್ತುತ ಕಾಲಮಾನದ ಕ್ರಿಕೆಟ್, ಕಬಡ್ಡಿ, ಕುಸ್ತಿ, ವಾಲಿಬಾಲ್ ಇನ್ನು ಹಲವು ರೀತಿಯ ವಿಶ್ವಮಟ್ಟದ ಕ್ರೀಡಾ ಚಟುವಟಿಕೆಗಳು ದೊಡ್ಡಮಟ್ಟದ ಜನಮನ್ನಣೆ ಪಡೆದುಕೊಳ್ಳಲು ಹಿಂದಿನ ಕಾಲಘಟ್ಟದ ಗ್ರಾಮೀಣ ಕ್ರೀಡೆಗಳು ಮಾದರಿಯಾಗಿವೆ. ಇಂದಿನ ಮಕ್ಕಳಲ್ಲಿ ಓದಿಗಿಂತ ಕ್ರಿಕೆಟ್ ಹುಚ್ಚು ಬಿಡಿಸಲಾರದ ನಂಟಾಗಿದೆ ಎಂದು ತಿಳಿಸಿದರು.
ಕೇವಲ ಆಟಕ್ಕೆ ಸೀಮಿತವಾಗದೆ ಶಿಕ್ಷಣಕ್ಕೂ ಹೆಚ್ಚು ಉತ್ತೇಜನ ಕೊಡಬೇಕು. ಶನಿವಾರ, ಭಾನುವಾರ ಬಂತೆಂದರೆ ಕೈಯಲ್ಲಿ ಬ್ಯಾಟ್, ಬಾಲನ್ನು ಹಿಡಿದು ಹೋಗುವ ಹವ್ಯಾಸಕ್ಕೆ ಕಡಿವಾಣ ಹಾಕಬೇಕು. ಮಕ್ಕಳ ಕಲಿಕಾ ಮಟ್ಟವನ್ನು ಉತ್ತಮ ಪಡಿಸಿಕೊಳ್ಳಲು ಶಿಕ್ಷಕರು ಕಠಿಣ ಅಭ್ಯಾಸದ ಕಡೆ ಮನಪರಿವರ್ತನೆಗೆ ಒತ್ತುಕೊಡಬೇಕು ಎಂದರು.
ವಿಶೇಷವಾಗಿ ಮಕ್ಕಳಲ್ಲಿ ಮೌಲ್ಯಯುತ ಸಂಸ್ಕಾರದ ಗುಣಗಳನ್ನು ಬೆಳಸಬೇಕು. ಇಂದಿನ ಕಾಲಘಟ್ಟದಲ್ಲಿ ಪಾಲಕರು ಮಕ್ಕಳಿಗಾಗಿ ಆಸ್ತಿ ಮಾಡುವ ಬದಲು ಉತ್ತಮ ಶಿಕ್ಷಣ ಕೊಡಿಸಿದರೆ ಎಲ್ಲಿ ಬೇಕಾದರೂ ಬದುಕುವ ಆತ್ಮಸ್ಥೈರ್ಯ ಇರುತ್ತದೆ ಎಂದು ಹೇಳಿದರು.
ಕ್ಷೇತ್ರ ಸಮನ್ವಯಾಧಿಕಾರಿ ಬಿ.ತಿಪ್ಪೇಸ್ವಾಮಿ, ವಿವಿಧ ಶಾಲೆಗಳ ಶಿಕ್ಷಕರಾದ ಲಿಂಗಣ್ಣ, ಕೆ.ಎಚ್.ಸಣ್ಣಯಲ್ಲಪ್ಪ, ಮುರುಗೇಶ, ಜೆ.ಸ್ವಾತಿ, ಪವನ್‌ಕುಮಾರ, ಹೇಮಾವತಿ, ಭಾಗ್ಯಮ್ಮ, ಮುರುಗೇಶ, ಮಂಜುನಾಥ, ರಜನಿಕಾಂತ್, ಪಿ.ಮಂಜುನಾಥ ಇದ್ದರು.