ಜಿಲ್ಲೆ

ಭೂಮಿಯ ಮೇಲೆ ಉಲ್ಕೆಗಳ ವರ್ಷಧಾರೆ

ಗೋಪಾಲಕೃಷ್ಣ ಪಾದೂರ್

ಉಡುಪಿ: ಭೂಮಿಯ ಮೇಲೆಯೇ ಬಿತ್ತು ಅಂತ ಅನಿಸುವ ಉಲ್ಕಾಪಾತಗಳು ಭೂ ವಾತಾವರಣದಿಂದಾಗಿ ಸುಮಾರು 60 ರಿಂದ 70 ಕಿಮಿ ಎತ್ತರದ ಆಕಾಶದಲ್ಲೇ ಧೂಳಿನ ಕಣಗಳ ಘರ್ಷಣೆಯಿಂದ ಉರಿದು ಹೋಗುತ್ತವೆ. ವರ್ಷದಲ್ಲಿ ಸುಮಾರು 22 ಉಲ್ಕಾಪಾತ ಸಂಭವಿಸುತ್ತವೆ. ಆದರೆ ಅವೆಲ್ಲವೂ ಚೆನ್ನಾಗಿರುವುದಿಲ್ಲ. ಉಲ್ಕೆಗಳ ಸಂಖ್ಯೆ ಹೆಚ್ಚೇನೂ ಇರುವುದಿಲ್ಲ. ಡಿ.14 ಮತ್ತು 15ರಂದು ತಡರಾತ್ರಿ ಸಂಭವಿಸುವ ಉಲ್ಕಾಪಾತದಲ್ಲಿ ಗಂಟೆಗೆ ನೂರಕ್ಕಿಂತಲೂ ಹೆಚ್ಚು ಬಣ್ಣ ಬಣ್ಣದ ಉಲ್ಕೆಗಳನ್ನು ನೋಡಿ ಆನಂದಿಸಬಹುದು.

ಪ್ರತಿ ವರ್ಷ ಡಿಸೆಂಬರ್​ ಮಧ್ಯ ಭಾಗದಲ್ಲಿ ಮಿಥುನ ರಾಶಿಯಿಂದ ಚಿಮ್ಮುವ "ಜೆಮಿನಿಡ್​' ಉಲ್ಕಾಪಾತ ಮಧ್ಯರಾತ್ರಿಯಿಂದ ವಿಜೃಂಭಿಸಲಿವೆ. ಉಲ್ಕೆಗಳು ಹೆಚ್ಚಿನವು ಸೂರ್ಯನ ಸುತ್ತುವ ಧೂಮಕೇತುಗಳ ಧೂಳು. ಆದರೆ ಇಂದಿನ ಜೆಮಿನಿಡ್​ ಹಾಗಲ್ಲ. ಇದೊಂದು ದೀರ್ಘ ವೃತ್ತಾಕಾರದಲ್ಲಿ ಸೂರ್ಯನನ್ನು ಸುತ್ತುವ ಸುಮಾರು 6 ಕಿಮೀ ಗಾತ್ರದ ಕಲ್ಲುಂಡೆಯ 3200 ಪೇಥಾನ್​ ಆಸ್ಟೆರೈಯ್ಡ್​ನ ಧೂಳು. ರಾತ್ರಿ ಸುಮಾರು 1 ಗಂಟೆಗೆ ನಡು ನೆತ್ತಿಗೆ ಬರುವ ಮಿಥುನ ರಾಶಿಯಿಂದ ಗಂಟೆಗೆ 120 ಉಲ್ಕೆಗಳನ್ನು ಗುರುತಿಸಬಹುದು. ಬೇರೆಲ್ಲಾ ಉಲ್ಕಾಪಾತಗಳಿಗಿಂತ ಇದು ವಿಭಿನ್ನ. ಇದರಲ್ಲಿ ಬಿಳಿ , ಕೆಂಪು , ಹಳದಿ , ಹಸಿರು ಹಾಗೂ ನೀಲಿ ಹೀಗೆ ಎಲ್ಲಾ ಬಣ್ಣಗಳ ಉಲ್ಕೆಗಳನ್ನೂ ನೋಡಬಹುದು ಎನ್ನುತ್ತಾರೆ ಭೌತಶಾಸ್ತ್ರಜ್ಞ ಡಾ. ಎ . ಪಿ . ಭಟ್​.