ಕೊಟ್ಟೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಸಿ.ಎಸ್.ಸಿ.ಕೇಂದ್ರಗಳಲ್ಲಿ ಕೇಂದ್ರ ಸರ್ಕಾರದ ಪಿ.ಎಂ. ಸೂರ್ಯಘರ್ ನೋಂದಣಿ, ಎನ್.ಪಿ.ಎಸ್. ಯೋಜನೆ ಸೇರಿದಂತೆ 30ಕ್ಕೂ ಹೆಚ್ಚು ಸೇವೆಗಳನ್ನು ನೀಡುತ್ತಿದ್ದು, ಪ್ರತಿಯೊಬ್ಬರೂ ಇದರ ಸೌಲಭ್ಯ ಪಡೆದುಕೊಳ್ಳಬೇಕು ಎಂದು ಯೋಜನೆಯ ವಿಜಯನಗರ ಜಿಲ್ಲಾ ನಿರ್ದೇಶಕ ಸತೀಶ ಶೆಟ್ಟಿ ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಕೊಟ್ಟೂರು ವ್ಯಾಪ್ತಿಯ ಮಡ್ಡೇರ್ ಓಣಿ ಸಿ.ಎಸ್.ಸಿ ಕೇಂದ್ರದಲ್ಲಿ ಶುಕ್ರವಾರ ನವರಾತ್ರಿ ಪ್ರಯುಕ್ತ ಆಯೋಜಿಸಿದ್ದ ಪೂಜಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಯೋಜನೆಯ ಸಿ.ಎಸ್.ಸಿ. ಕೇಂದ್ರಗಳಲ್ಲಿ ದೊರೆಯುವ ಸೌಲಭ್ಯಗಳ ಕುರಿತು ಸಂಪೂರ್ಣ ಮಾಹಿತಿ ನೀಡಿ, ಪಾನ್ ಕಾರ್ಡ್, ಪಾಸ್ ಪೋರ್ಟಗಳನ್ನು ಕಡಿಮೆ ವೆಚ್ಚದಲ್ಲಿ ಮಾಡಿಕೊಡಲಾಗುತ್ತಿದ್ದು, ಸಾರ್ವಜನಿಕರು ಇದರ ಸೌಲಭ್ಯ ಪಡೆದುಕೊಳ್ಳಬೇಕು ಎಂದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಂಘ ಕೇವಲ ಸಭೆಗೆ ಸೀಮಿತವಲ್ಲ. ಬದುಕಿನ ಬದಲಾವಣೆಗೂ ಪೂರಕ. ಈ ಹಿನ್ನೆಲೆಯಲ್ಲಿ ಪೂಜ್ಯರ ಮಾರ್ಗದರ್ಶನದಲ್ಲಿ ಪೂಜಾ ಕಾರ್ಯಕ್ರಮ ಆಯೋಜನೆ, ಸಂಸ್ಕಾರ, ಸಂಸ್ಕೃತಿ ಹಾಗೂ ಮಾನವೀಯ ಮೌಲ್ಯಗಳ ತಿಳಿಸುವ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ತಾಲೂಕು ಯೋಜನಾಧಿಕಾರಿ ನವೀನ ಕುಮಾರ್, ಶಿವಲಿಂಗಪ್ಪ, ಶಿವರಾಜ ಹಾಗೂ ಸಿಬ್ಬಂದಿ ಇದ್ದರು. ಶಿವರಾಜ ನೇಕಾರ್ ಸ್ವಾಗತಿಸಿದರು. ಸೇವಾದಾರರಾದ ಕೆ. ಜಯರಾಮ ನಿರೂಪಿಸಿದರು. ಸಾಕಮ್ಮ ವಂದಿಸಿದರು.