ಬೆಂಗಳೂರು: ಕಲುಷಿತ ನೀರು ಮತ್ತು ಆಹಾರ ಸೇವನೆಯಿಂದಾಗಿ ಅತಿಸಾರ (ಡಯೇರಿಯಾ) ಪ್ರಕರಣಗಳು ಏರಿಕೆಯಾಗುತ್ತಿದ್ದು, ಒಂದೇ ವಾರದಲ್ಲಿ 6,060 ಪ್ರಕರಣ ದೃಢಪಟ್ಟಿವೆ.
ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಸೋಂಕು ರೋಗಗಳ ವರದಿ ಪ್ರಕಾರ ಈ ವರ್ಷ ಜೂನ್ 16ರ ವೇಳೆಗೆ 87,697 ಪ್ರಕರಣ ವರದಿಯಾಗಿವೆ. ಮಾರ್ಚ್ ಅಂತ್ಯಕ್ಕೆ 36,814 ಮಂದಿ ಬಳಲಿದ್ದರು. ಬಳಿಕ ಬಿಸಿಲು-ಮಳೆಯ ವಾತಾವರಣದಿಂದಾಗಿ ಪ್ರಕರಣ ಏರುಗತಿ ಪಡೆದು, ಎರಡೂವರೆ ತಿಂಗಳಲ್ಲಿ 50 ಸಾವಿರಕ್ಕೂ ಅಧಿಕ ಪ್ರಕರಣ ದೃಢಪಟ್ಟಿವೆ.
ಇದೇ ರೀತಿ ನಾಯಿ ಹಾಗೂ ಹಾವು ಕಡಿತ ಪ್ರಕರಣಗಳೂ ಏರಿಕೆ ಕಂಡಿವೆ. ಕಳೆದೊಂದು ವಾರದಲ್ಲಿ 7,066 ಮಂದಿ ನಾಯಿ ಕಡಿತಕ್ಕೆ ಒಳಗಾಗಿದ್ದು, ಈವರೆಗೆ ವರದಿಯಾದ ಪ್ರಕರಣಗಳ ಸಂಖ್ಯೆ 1.56 ಲಕ್ಷಕ್ಕೆ ತಲುಪಿದೆ. ವಾರದಲ್ಲಿ 408 ಹಾವು ಕಡಿತ ಪ್ರಕರಣ ವರದಿಯಾಗಿವೆ. ಈವರೆಗೆ ವರದಿಯಾದ ಒಟ್ಟು ಹಾವು ಕಡಿತ ಪ್ರಕರಣಗಳು 4,710ಕ್ಕೆ ಏರಿಕೆಯಾಗಿದ್ದು, 27 ಮಂದಿ ಮೃತಪಟ್ಟಿದ್ದಾರೆ.
ಪ್ರಾಣಿಗಳ ಮೂಲಕ ಹರಡುವ ಬ್ಯಾಕ್ಟೀರಿಯಾ ಸೋಂಕು (ಲೆಪ್ಟೊಸ್ಪಿರೋಸಿಸ್) ವಾರದಲ್ಲಿ 57 ಮಂದಿಗೆ ದೃಢಪಟ್ಟಿದೆ. ಈವರೆಗೆ 587 ಮಂದಿ ಸೋಂಕಿತರಾಗಿದ್ದಾರೆ. ಮಂಗನ ಕಾಯಿಲೆಯೂ (ಕೆಎಫ್‌ಡಿ) ವಾರದಲ್ಲಿ ಮೂರು ಮಂದಿಯಲ್ಲಿ ಖಚಿತಪಟ್ಟಿದೆ. ಒಟ್ಟಾರೆ ಕೆಎಫ್‌ಡಿ ಪ್ರಕರಣಗಳ ಸಂಖ್ಯೆ 355ಕ್ಕೆ ಏರಿಕೆಯಾಗಿದೆ.