ಜಿಲ್ಲೆ

ಡಿಕೆಶಿಗೆ ಮುಖ್ಯಮಂತ್ರಿಯಾಗಲು ಕೊನೆ ಅವಕಾಶ: ಶಾಸಕ ಎ.ಮಂಜು

ಮೈಸೂರು: ರಾತ್ರಿ 12 ಗಂಟೆಯಲ್ಲಿ ಹುಟ್ಟಿದ ಕಾಂಗ್ರೆಸ್ ಪಕ್ಷದಲ್ಲಿ ರಾತ್ರೋರಾತ್ರಿ ಏನು ಬೇಕಾದರೂ ಬದಲಾವಣೆ ಅಗಬಹುದು ಎಂದು ಜೆಡಿಎಸ್ ಶಾಸಕ ಎ.ಮಂಜು ಪ್ರತಿಕ್ರಿಯಿಸಿದರು.

ಸಿದ್ದರಾಮಯ್ಯ ಈಗ ರಾಜ್ಯದ ಮುಖ್ಯಮಂತ್ರಿ ಅಗಿದ್ದರೂ ಅವರು ಪದೆ ಪದೇ ಯಾಕೆ ನಾನೇ ಮುಖ್ಯಮಂತ್ರಿ ಎಂದು ಅವರೇ ಹೇಳುತ್ತಿದ್ದಾರೆ ಗೊತ್ತಾಗುತ್ತಿಲ್ಲ ಎಂದು ಚಾಮುಂಡಿಬೆಟ್ಟದಲ್ಲಿ ಶುಕ್ರವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.

ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗಬೇಕು ಎಂದರೆ ಈಗ ಆಗಬೇಕು. ಇಲ್ಲದೆ ಹೋದರೆ ಮುಂದೆ ಅವರು ಮುಖ್ಯಮಂತ್ರಿ ಆಗಲಾರರು. ಇದು ಅವರಿಗೆ ಕೊನೆಯ ಅವಕಾಶ ಎಂದು ಹೇಳಿದರು.

ಅವರಲ್ಲಿ ಏನಾದರೂ ಒಪ್ಪಂದ ಅಗಿದ್ದರೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡಬೇಕು. ಕಾಂಗ್ರೆೆಸ್‌ನಲ್ಲಿ ಎಷ್ಟು ಶಾಸಕರ ಬೆಂಬಲ ಇದ್ದರೂ ಅವರಿಂದ ಏನು ತೀರ್ಮಾನ ಆಗುವುದಿಲ್ಲ. ಹೈಕಮಾಂಡ್ ಎಲ್ಲವನ್ನೂ ತೀರ್ಮಾನ ಮಾಡುತ್ತದೆ ಎಂದರು.

ಡಿ.ಕೆ.ಶಿವಕುಮಾರ್ ಕಾರಣದಿಂದಲೇ ಹಳೆಯ ಮೈಸೂರು ಭಾಗದಲ್ಲಿ ಒಕ್ಕಲಿಗರು ಕಾಂಗ್ರೆೆಸ್ಸಿಗೆ ಮತ ಹಾಕಿದ್ದರು. ಇದರಿಂದ 30ರಿಂದ 40 ಸ್ಥಾನಗಳು ಕಾಂಗ್ರೆೆಸ್‌ಗೆ ಏರಿಕೆ ಆಯಿತು. ಈಗ ಅಧಿಕಾರ ಸಿಗದಿರುವುದರಿಂದ ಜನರಿಗೆ ನಾವು ಮೋಸ ಹೋಗಿದ್ದೇವೆ ಎಂಬುದು ಅರ್ಥವಾಗುತ್ತಿದೆ ಎಂದು ಹೇಳಿದರು.

ಅಭಿವೃದ್ಧಿ ಕಾರ್ಯಗಳಿಗೆ ಕಾಂಗ್ರೆಸ್ ಸರ್ಕಾರದಲ್ಲಿ ಅನುದಾನವಿಲ್ಲ. ಹೀಗಾಗಿ ಜನರ ಗಮನ ಬೇರೆಡೆ ಸೆಳೆಯಲು ಇಂತಹ ವಿಷಯಗಳ ಪ್ರಚಾರ ಮಾಡುತ್ತಿದೆ. ಮೊದಲ ಅವಧಿಯಲ್ಲಿ ಇದ್ದ ಸಿದ್ದರಾಮಯ್ಯ ಈಗ ಸಂಪೂರ್ಣವಾಗಿ ಬದಲಾಗಿದ್ದಾರೆ. ಸಿದ್ದರಾಮಯ್ಯ ಅಥವಾ ಡಿ.ಕೆ.ಶಿವಕುಮಾರ್ ಯಾರೇ ಮುಖ್ಯಮಂತ್ರಿ ಅದರೂ ಜೆಡಿಎಸ್ ಹಾಗೂ ಬಿಜೆಪಿಗೆ ಸಮಸ್ಯೆೆ ಇಲ್ಲ. 2028ಕ್ಕೆೆ ನಾವೇ ಅಧಿಕಾರಕ್ಕೆೆ ಬಂದೇ ಬರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಶಾಸಕ ಜಿ.ಟಿ. ದೇವೇಗೌಡರು ನಮ್ಮ ಪಕ್ಷದಲ್ಲಿದ್ದಾರೆ. ಮನೆ ಎಂದ ಮೇಲೆ ಸಮಸ್ಯೆೆಗಳು ಇರುತ್ತವೆ. ನಂತರ ಎಲ್ಲವೂ ಬದಲಾಗುತ್ತವೆ. ಹಾಗೆಯೇ ಚುನಾವಣೆ ಬಂದಾಗ ನಾವೆಲ್ಲಾ ಒಟ್ಟಾಗಿ ಸೇರಿಕೊಳ್ಳುತ್ತೇವೆ. ಯಾವ ಸಮಸ್ಯೆೆಗಳು ಇಲ್ಲ ಎಂದರು.