ಅಥಣಿ ಗ್ರಾಮೀಣ: ಮುತ್ತು ಕಟ್ಟುವುದು, ಅರೆಬೆತ್ತಲೆ ಸೇವೆಯಂತಹ ಮಹಿಳಾ ದೌರ್ಜನ್ಯ ಪ್ರಕರಣಗಳ ಬಗ್ಗೆ 21ನೇ ಶತಮಾನದಲ್ಲಿ ಜಾಗೃತಿ ಜಾಥಾ ನಡೆಯುತ್ತಿರುವುದು ದುರ್ದೈವದ ಸಂಗತಿ ಎಂದು ಜಿಪಂ ಮಾಜಿ ಸದಸ್ಯೆ ಡಾ. ಸವಿತಾ ಪೂಜಾರಿ ಹೇಳಿದರು.
ಕೊಕಟನೂರ ಗ್ರಾಮದ ಶ್ರೀ ರೇಣುಕಾ ಯಲ್ಲಮ್ಮ ದೇವಿ ಜಾತ್ರೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ದೇವದಾಸಿ ಪದ್ಧತಿ ನಿರ್ಮೂಲನೆ ಜಾಗೃತಿ ಜಾಥಾದಲ್ಲಿ ಮಾತನಾಡಿ, ಅನಕ್ಷರತೆ ಮತ್ತು ಮೂಢನಂಬಿಕೆಯಿಂದ ದೇವರು ಬಂದಂತೆ ನಟಿಸುವುದು, ದೇವಿ ಹೆಸರಲ್ಲಿ ಬೆತ್ತಲೆ ಸೇವೆ ಮಾಡುವುದು ತಪ್ಪು. ಬದಲಾಗಿ ಬಟ್ಟೆ ಧರಿಸಿ ಸೇವೆ ಸಲ್ಲಿಸುವ ಮೂಲಕ ದೇವಿ ಕೃಪೆಗೆ ಪಾತ್ರರಾಗಬೇಕು ಎಂದರು.
ಬೆಳಗಾವಿ ದೇವದಾಸಿ ಪುನರ್ವಸತಿ ಯೋಜನಾಧಿಕಾರಿ ಪುಷ್ಪಲತಾ ಶಹಮಾನೆ ಮಾತನಾಡಿ, ಅನಿಷ್ಟ ಪದ್ಧತಿ ವಿರುದ್ಧ ಗಟ್ಟಿಯಾಗಿ ನಿಲ್ಲಬೇಕು. ಜಿಡ್ಡುಗಟ್ಟಿದ ಕೂದಲು ದೇವರ ಕೃಪೆ, ವರ ಮತ್ತು ಶಾಪವಲ್ಲ. ಅದು ಪ್ಲೆಕಾಫಲಾನಿಕಾ ಎಂಬ ಸೋಂಕು ತಗುಲಿ ಕೂದಲಲ್ಲಿ ಸತ್ವ ಇಲ್ಲದೇ ಜಿಡ್ಡುಗಟ್ಟುತ್ತದೆ. ಅದನ್ನು ಸ್ವಚ್ಛಗೊಳಿಸಿ ಆರೋಗ್ಯಪೂರ್ಣ ಜೀವನ ನಡೆಸಬೇಕು ಎಂದು ತಿಳಿಸಿದರು.
ಗ್ರಾಪಂ ಅಧ್ಯಕ್ಷೆ ಶಾನವ್ವ ಪೂಜಾರಿ, ಸಿಡಿಪಿಒ ರೇಣುಕಾ ಹೊಸಮನಿ, ವೈದ್ಯಾಧಿಕಾರಿ ಡಾ. ಚಂದ್ರಕಾಂತ ಧೂಳಶೆಟ್ಟಿ, ಸಮಾಜಕಲ್ಯಾಣ ಅಧಿಕಾರಿ ಬಸವರಾಜ ಯಾದವಾಡ, ಪಿಡಿಒ ಎಸ್.ಎಸ್. ತುಂಗಳ, ಗ್ರಾಮಾಡಳಿತಾಧಿಕಾರಿ ಕಲ್ಮೇಶ ಕಲಮಡಿ, ಅರ್ಜುನ ಪೂಜಾರಿ ಇತರರಿದ್ದರು.