ಜಿಲ್ಲೆ

ಕುಂಟುತ್ತಿದೆ ಲಸಿಕಾ ಅಭಿಯಾನ ; ವಿದ್ಯಾರ್ಥಿಗಳಿಗೆ ಆದ್ಯತೆ ಮೇಲೆ ಸಿಗದ ವ್ಯಾಕ್ಸಿನ್

Tumakuru

ತಿಪಟೂರು : ದಿನದಿಂದ ದಿನಕ್ಕೆ ತಾಲೂಕಿನಲ್ಲಿ ಕರೊನಾ ಲಸಿಕಾ ಅಭಿಯಾನ ವೇಗ ಕಳೆದುಕೊಳ್ಳುತ್ತಿದೆ.

ಕಾಲೇಜು ಪ್ರಾರಂಭಕ್ಕೂ ಮುನ್ನ ಆದ್ಯತೆ ಮೇಲೆ ವಿದ್ಯಾರ್ಥಿಗಳಿಗೆ ಲಸಿಕೆ ನೀಡುವ ಕಾರ್ಯವೂ ಸಂಪೂರ್ಣವಾಗಿಲ್ಲ. ಮೇ 21ರ ನಂತರದ ಒಂದೆರೆಡು ವಾರ ಸಮರೋಪಾದಿಯಲ್ಲಿ ನಡೆದಿದ್ದ ಅಭಿಯಾನ ಇತ್ತೀಚೆಗೆ ಕುಂಟುತ್ತಿದೆ. ಕಾಲೇಜು ಪ್ರಾರಂಭಕ್ಕೂ ಮುಂಚೆ ಎಲ್ಲ ವಿದ್ಯಾರ್ಥಿಗಳಿಗೆ ಆದ್ಯತೆ ಮೇಲೆ ಲಸಿಕೆ ಕೊಡಬೇಕೆಂಬ ಸರ್ಕಾರಿ ಆದೇಶ ಪರಿಪೂರ್ಣವಾಗಿಲ್ಲ. ಸಕಾಲದಲ್ಲಿ ಲಸಿಕೆ ಕೊಡಿಸುವ ವ್ಯವಸ್ಥೆ ಮಾಡುವುದು ಕಾಲೇಜು ಪ್ರಾಂಶುಪಾಲರ ಜವಾಬ್ದಾರಿ, ಈ ನಿಟ್ಟಿನಲ್ಲಿ ಅವರೊಂದಿಗೆ ಸಭೆ ನಡೆಸಿ, ಲಿಖಿತವಾಗಿ ತಿಳಿಸಿದ್ದರೂ ಅವರು ಸಹಕರಿಸುತ್ತಿಲ್ಲ ಎಂಬುದು ತಾಲೂಕು ಆಡಳಿತದ ಆರೋಪ.

ಇದಕ್ಕಾಗಿಯೇ 30 ವಿದ್ಯಾರ್ಥಿಗಳ ಒಂದು ಗುಂಪು ರಚಿಸಿ, ಮೇಲುಸ್ತುವಾರಿಗೆ ಒಬ್ಬ ಪ್ರಾಧ್ಯಾಪಕರನ್ನು ನಿಯೋಜಿಸಲಾಗಿದೆ. ತಾಲೂಕು ಆಡಳಿತ ನಿಗದಿಪಡಿಸಿದ ದಿನದಂದು ವಿದ್ಯಾರ್ಥಿಗಳಿಗೆ ಸಂದೇಶ ಕಳಿಸಿ ಲಸಿಕೆ ಪಡೆಯಲು ಕರೆಸಲಾಗುತ್ತದೆ. ಆದರೆ, ಬೆಳಗ್ಗೆಯಿಂದ ಸಾಲಿನಲ್ಲಿ ಕಾಯ್ದರೂ ಕಡೆಗೆ ಲಸಿಕೆ ಮುಗಿದಿದೆ, ಮತ್ತೊಮ್ಮೆ ಬನ್ನಿ ಎಂದು ವಿದ್ಯಾರ್ಥಿಗಳನ್ನು ವಾಪಸ್ ಕಳುಹಿಸಲಾಗಿದೆ ಎಂದು ಕಾಲೇಜು ಪ್ರಾಂಶುಪಾಲರು ದೂರುತ್ತಾರೆ.

ಒಟ್ಟಾರೆ ತಾಲೂಕಿನ ಇಂಜಿನಿಯರಿಂಗ್, ಡಿಗ್ರಿ, ಮತ್ತು ಪಿಯು ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಸೇರಿ 7,331 ಮಂದಿ ಇದ್ದು ಇಲ್ಲಿವರೆಗೂ ಒಟ್ಟು 4,196 ಮಂದಿಗೆ ಲಸಿಕೆ ಹಾಕಲಾಗಿದೆ. ಒಟ್ಟಾರೆ 18 ವರ್ಷ ಮೇಲ್ಪಟ್ಟವರ ಲಸಿಕಾ ಸಾಧನೆ ಕೇವಲ ಶೇ.27 ಮಾತ್ರ.

ತುಮಕೂರು, ಚಿಕ್ಕನಾಯಕನಹಳ್ಳಿ. ಮಧುಗಿರಿ ಮತ್ತು ಪಾವಗಡ ತಾಲೂಕಿನಲ್ಲಿ ಅಲ್ಲಿನ ಕಾಲೇಜುಗಳಲ್ಲೇ ಕ್ಯಾಂಪ್ ಮಾಡಿ ಲಸಿಕೆ ನೀಡಲಾಗುತ್ತಿದೆ. ಇದೇ ವ್ಯವಸ್ಥೆ ಇಲ್ಲೂ ಮಾಡಿದರೆ ಅನುಕೂಲವಾಗಲಿದೆ. ಆದರೆ ಇದರ ಬಗ್ಗೆ ಮನಸ್ಸು ಮಾಡದ ತಾಲೂಕು ಆಡಳಿತ ವಿದ್ಯಾರ್ಥಿಗಳನ್ನು ಸರದಿಯಲ್ಲಿ ನಿಲ್ಲುವಂತೆ ಮಾಡುತ್ತಿದೆ. ಮುಖ್ಯವಾಗಿ ಲಸಿಕೆ ಸಿಗದೆ ನಿರಾಶರಾದ ಅನೇಕ ವಿದ್ಯಾರ್ಥಿಗಳು ಮತ್ತೊಮ್ಮೆ ಇಲ್ಲಿಗೆ ಬರುತ್ತಿಲ್ಲದಿರುವುದೂ ಲಸಿಕಾ ಅಭಿಯಾನ ಯಶಸ್ವಿಗೆ ಹಿನ್ನೆಡೆಯಾಗಿದೆ.

45 ವರ್ಷ ಮೇಲ್ಪಟ್ಟ ಶೇ.78 ಮಂದಿಗೆ ಲಸಿಕೆ ಹಾಕುವ ಮೂಲಕ ತಾಲೂಕು ಅತಿ ಹೆಚ್ಚಿನ ಸಾಧನೆ ಮಾಡಿದೆ ಎಂದು ತಾಲೂಕು ಆಡಳಿತ ಭುಜ ತಟ್ಟಿಕೊಂಡರೂ, ಪ್ರಮುಖವಾಗಿ ಕಾಲೇಜು ವಿದ್ಯಾರ್ಥಿಗಳಿಗೆ ಸಂಪೂರ್ಣವಾಗಿ ಲಸಿಕೆ ನೀಡುವ ಸಾಧನೆ ಮಾಡಬೇಕಿದೆ.

ಮುಂದುವರಿದ ಗೊಂದಲ: ಮೊದಲನೇ ಡೋಸ್ ಪಡೆದವರು, ಎರಡನೇ ಡೋಸ್ ಪಡೆಯಬೇಕೆಂಬ ಮೊಬೈಲ್ ಸಂದೇಶದ ಅನುಸಾರ ಕೆಲಸ ಕಾರ‌್ಯಗಳನ್ನು ಬಿಟ್ಟು ಲಸಿಕೆ ಪಡೆಯಲು ನಗರದ ಮಿನಿವಿಧಾನ ಸೌಧಕ್ಕೆ ಬಂದು ಸರದಿಯಲ್ಲಿ ಕಾದು ಟೋಕನ್ ಪಡೆದರೂ, ಕೊನೇ ಗಳಿಗೆಯಲ್ಲಿ ಲಸಿಕೆ ಮುಕ್ತಾಯವಾಯ್ತು, ಮತ್ತೊಮ್ಮೆ ಬನ್ನಿ ಎಂದು ಹೇಳಿ ವಾಪಸ್ ಕಳುಹಿಸುತ್ತಿರುವುದು ಅನೇಕರಿಗೆ ಸಮಸ್ಯೆಯಾಗಿದೆ. ಸರ್ಕಾರವೇ ರೂಪಿಸಿರುವ ವ್ಯವಸ್ಥೆಯಡಿ, ಇಲಾಖೆಯಿಂದ ಬರುವ ಮೊಬೈಲ್ ಸಂದೇಶದ ಆಧಾರದಲ್ಲಿ ಎರಡನೇ ಡೋಸ್ ಪಡೆಯಲು ಹೋದರೆ, ಲಸಿಕೆ ಮುಗಿದಿದೆ ಎನ್ನುವುದರ ಅರ್ಥವಾದರೂ ಏನು? ಸತತ ಲಾಕ್‌ಡೌನ್‌ನಿಂದ ಹೊರಬಂದು ಜೀವನ ಕಟ್ಟಿಕೊಳ್ಳುತ್ತಿರುವ ಹೊತ್ತಿನಲ್ಲಿ ದಿನವಿಡೀ ಕಾದು ವಾಪಸ್ ಬಂದರೆ ನಮ್ಮ ದೈನಂದಿನ ಜೀವನದ ಗತಿ ಏನು ಎಂಬುದು ಜನಸಾಮಾನ್ಯರ ಪ್ರಶ್ನೆಯಾಗಿದೆ.

45 ವರ್ಷ ಮೇಲ್ಪಟ್ಟ, ಮೊದಲ ಡೋಸ್ ಲಸಿಕೆ ಪಡೆದ ಕೆಲವರು ನಂತರ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಎರಡನೇ ಡೋಸ್ ಲಸಿಕೆ ಪಡೆಯುವುದರಿಂದ ತಾಲೂಕಿನ ಪ್ರಗತಿ ಶೇ.78ಕ್ಕಿಂತಲೂ ಹೆಚ್ಚು . ಆದರೂ 18 ವರ್ಷ ಮೇಲ್ಪಟ್ಟವರಿಗೆ ಶೇ.27 ಸಾಧನೆ ಕಡಿಮೆಯೇ. ಲಸಿಕೆ ಲಭ್ಯತೆ ಮೇಲೆ ಅವಲಂಭಿಸಿದೆ. ಕಾಲೇಜು ಕ್ಯಾಂಪ್ ಮಾಡಲು ಸಾಧ್ಯವಾಗಿಲ್ಲ. ಆರ್.ಜಿ. ಚಂದ್ರಶೇಖರ್, ತಹಸೀಲ್ದಾರ್ ತಿಪಟೂರು