ಜಿಲ್ಲೆ

ಜಿಲ್ಲೆಯಲ್ಲಿ ವ್ಯಾಕ್ಸಿನ್‌ಗೆ ಡಿಮಾಂಡ್ ; 500 ರೂ.ಗೆ ಲಸಿಕೆ ಆರೋಪ ; ಶೇ.51 ಮಂದಿಗೆ ಲಸಿಕೆ ಪ್ರಗತಿ

Tumakuru

ತುಮಕೂರು : ಜಿಲ್ಲೆಯಲ್ಲಿ ಈವರೆಗೆ 45 ವರ್ಷ ಮೇಲ್ಪಟ್ಟ 3,94,317 ಜನರಿಗೆ ಲಸಿಕೆ ಹಾಕಲಾಗಿದ್ದು ಶೇ.51 ಪ್ರಗತಿ ಸಾಧಿಸಲಾಗಿದೆ. 18 ರಿಂದ 44 ವರ್ಷದೊಳಗಿನ 57,440 ಮಂದಿಗೆ ಲಸಿಕೆ ನೀಡಲಾಗಿದೆ.

ಕರೊನಾಗೆ ಆರಂಭದಲ್ಲಿ ಲಸಿಕೆ ಪಡೆಯುವಂತೆ ಲಸಿಕಾ ಉತ್ಸವಗಳನ್ನು ಏರ್ಪಡಿಸುವ ಮೂಲಕ 45 ವರ್ಷ ಮೇಲ್ಪಟ್ಟವರನ್ನು ಲಸಿಕೆ ಹಾಕಿಸಿಕೊಳ್ಳಲು ಪ್ರೇರೇಪಿಸಲಾಯಿತು. ಆದರೆ, ಕರೊನಾ ಎರಡನೇ ಅಲೆ ಆರ್ಭಟ ಹೆಚ್ಚಾಗುತ್ತಿದ್ದಂತೆ ಲಸಿಕೆಗೆ ಬೇಡಿಕೆ ಬಂದಿತು. ಇನ್ನು 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಹಾಕಲು ಸರ್ಕಾರ ಘೋಷಣೆ ಮಾಡುತ್ತಿದ್ದಂತೆ ಲಸಿಕೆ ಅಭಾವ ಎದುರಾಯಿತು. ಈ ಹಿನ್ನೆಲೆಯಲ್ಲಿ ಡಿಮಾಂಡ್ ಶುರುವಾಗಿದೆ.

5,65,169 ಮಂದಿಗೆ ಲಸಿಕೆ: ಆರೋಗ್ಯ ಕಾರ್ಯಕರ್ತರು, ಫ್ರಂಟ್‌ಲೈನ್ ವಾರಿಯರ್ಸ್‌ ಸೇರಿ 4,51,830 ಮಂದಿ ಮೊದಲ ಡೋಸ್ ಹಾಗೂ 1,13,329 ಎರಡನೇ ಡೋಸ್ ಪಡೆದಿದ್ದಾರೆ. ಒಟ್ಟು 174 ಲಸಿಕಾ ಕೇಂದ್ರಗಳಲ್ಲಿ ಲಸಿಕೆ ನೀಡಲಾಗುತ್ತಿದೆ.

60 ವರ್ಷಕ್ಕೆ ಮೇಲ್ಪಟ್ಟವರು 1,82,436 ಮಂದಿ ಈವರೆಗೆ ಲಸಿಕೆ ಪಡೆದಿದ್ದಾರೆ. 45-60 ವರ್ಷದ 2,11,887 ಮಂದಿ ಲಸಿಕೆ ಹಾಕಿಸಿಕೊಂಡಿದ್ದಾರೆ. 7,51,243 ಮಂದಿ ಈ ವಯೋಮಾನದವರಿದ್ದಾರೆ. ಇನ್ನು 18 ರಿಂದ 44 ವರ್ಷದೊಳಗೆ 12,24,200 ಮಂದಿಗೆ ಲಸಿಕೆ ನೀಡುವ ಗುರಿ ಹೊಂದಿದ್ದು ಈವರೆಗೆ 57,440 ಜನರು ಲಸಿಕೆ ಪಡೆದಿದ್ದಾರೆ. 2,29,764 ಪುರುಷರು ಹಾಗೂ 2,21,989 ಮಹಿಳೆಯರು ಈವರೆಗೆ ಲಸಿಕೆ ಹಾಕಿಸಿಕೊಂಡಿದ್ದಾರೆ. ಜಿಲ್ಲೆಯಲ್ಲಿ ಅತಿಹೆಚ್ಚು ಕೋವಿಶೀಲ್ಡ್ ಲಸಿಕೆ ನೀಡಲಾಗಿದ್ದು 5,39,090 ಮಂದಿಗೆ ಹಾಕಲಾಗಿದೆ. 26,069 ಮಂದಿ ಕೋವ್ಯಾಕ್ಸಿನ್ ಲಸಿಕೆ ಪಡೆದಿದ್ದಾರೆ.

ಡಿಮಾಂಡೇ ಬಂಡವಾಳ: 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ವಿತರಣೆಗೆ ಮುಂದಾಗುತ್ತಿದ್ದಂತೆ ದೊಡ್ಡ ಮಟ್ಟದ ಗೊಂದಲ ಸೃಷ್ಟಿಯಾಯಿತು. ಏಕಾಏಕಿ ಲಸಿಕೆ ಅಭಾವ ಸೃಷ್ಟಿಯಾಯಿತು. ಖಾಸಗಿ ಆಸ್ಪತ್ರೆಗಳಲ್ಲಿ ಕರೊನಾ ಲಸಿಕೆ ದರವನ್ನು 900 ರಿಂದ 1200 ರೂ.ವರೆಗೆ ಸರ್ಕಾರ ನಿಗದಿಪಡಿಸಿತು. ಇದು ಸರ್ಕಾರಿ ಆಸ್ಪತ್ರೆಗಳಲ್ಲಿ ಲಸಿಕೆಗೆ ಡಿಮಾಂಡ್ ಸೃಷಿಸಿತು. ಇದನ್ನೇ ಬಂಡವಾಳ ಮಾಡಿಕೊಂಡು ಕೆಲವು ಲಸಿಕಾ ಕೇಂದ್ರಗಳಲ್ಲಿ ಆಸ್ಪತ್ರೆ ಸಿಬ್ಬಂದಿಯೇ ಪರಿಚಿತರಿಗೆ ದೂರವಾಣಿ ಕರೆಮಾಡಿ 500 ರೂ. ಗೆ ಲಸಿಕೆ ನೀಡುತ್ತಿರುವ ಆರೋಪವಿದೆ.

500 ರೂ.ಗೆ ಲಸಿಕೆ? : ಕರೊನಾ ಲಸಿಕೆಗೆ ಹೆಚ್ಚಿದ ಡಿಮಾಂಡ್ ಹಾಗೂ ಖಾಸಗಿ ಆಸ್ಪತ್ರೆಯಲ್ಲಿ ಲಸಿಕೆಗೆ ಸರ್ಕಾರ ಇಂತಿಷ್ಟು ದರ ನಿಗದಿಪಡಿಸಿದ ಬಳಿಕ ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕದ್ದುಮುಚ್ಚಿ ಲಸಿಕೆ ಮಾರಾಟ ಮಾಡುತ್ತಿರುವ ಆರೋಪ ಕೇಳಿಬಂದಿದೆ. 45 ವರ್ಷ ಮೇಲ್ಪಟ್ಟವರಿಗೆ ನೀಡುವ ವಯಲ್‌ನಲ್ಲಿ ಉಳಿಯುವ ಲಸಿಕೆಯನ್ನು ಪರಿಚಯದವರಿಗೆ ಹಾಗೂ ಲಸಿಕಾ ಕೇಂದ್ರಕ್ಕೆ ಹತ್ತಿರ ಇರುವವರಿಗೆ ದೂರವಾಣಿ ಕರೆ ಮಾಡಿ ಕರೆಸಿಕೊಂಡು 500 ರೂ. ಪಡೆದು ಹಾಕುತ್ತಿದ್ದಾರೆ ಎನ್ನಲಾಗಿದೆ. ಆದರೆ ಈ ಬಗ್ಗೆ ಯಾವುದೇ ನಿರ್ದಿಷ್ಟ ದೂರು ಸಲ್ಲಿಕೆಯಾಗಿಲ್ಲ.

ಜಿಲ್ಲೆಯಲ್ಲಿ 45 ವರ್ಷ ಮೇಲ್ಪಟ್ಟ ಶೇ.51 ಮಂದಿಗೆ ಲಸಿಕೆ ನೀಡಲಾಗಿದೆ. 18-44 ವರ್ಷದೊಳಗೆ ಶೇ.2 ಮಂದಿಗೆ ಲಸಿಕೆ ಹಾಕಲಾಗಿದೆ. ಲಸಿಕೆ ಮಾರಾಟದ ಬಗ್ಗೆ ನಿರ್ದಿಷ್ಟ ದೂರುಗಳಿಲ್ಲ. ಊಹಾಪೋಹಗಳು, ಆಧಾರರಹಿತ ಆರೋಪಗಳ ಹಿನ್ನೆಲೆಯಲ್ಲಿ ಕಾನೂನಿನ ಚೌಕಟ್ಟಿನಲ್ಲಿ ಕ್ರಮಕೈಗೊಳ್ಳಲು ಸಾಧ್ಯವಿಲ್ಲ. ಡಾ.ಕೇಶವರಾಜ್, ಆರ್‌ಸಿಎಚ್ ಅಧಿಕಾರಿ