ನೆಲಮಂಗಲದ ಜಯನಗರದ ಬಳಿ ಆರೋಗ್ಯ ಇಲಾಖೆ ಹಾಗೂ ನಗರಸಭೆ ಸಹಯೋಗದಲ್ಲಿ ಲಾರ್ವ ಸಮೀಕ್ಷೆ ಆಂದೋಲನದಲ್ಲಿ ಟಿಎಚ್‌ಒ ಡಾ.ಯೋಗೀಶ್, ನಗರಸಬೆ ಪೌರಾಯುಕ್ತ ಮನುಕುಮಾರ್ ನೀರು ಪರಿಶೀಲಿಸಿದರು. 
ಜಿಲ್ಲೆ

ಡೆಂಘೆ ನಿಯಂತ್ರಣಕ್ಕೆ ಸ್ವಚ್ಛತೆಯೇ ಪರಿಹಾರ

ಶಿವರಾಜ.ಎಂ

*ನೆಲಮಂಗಲ ಸುತ್ತಮುತ್ತ ಲಾರ್ವ ಸಮೀಕ್ಷೆ ಆಂದೋಲನ
*ತಾಲೂಕು ಆರೋಗ್ಯಾಧಿಕಾರಿ ಡಾ.ಯೋಗೀಶ್ ಅಭಿಮತ

ವಿಜಯವಾಣಿ ಸುದ್ದಿಜಾಲ ನೆಲಮಂಗಲ
ಸೊಳ್ಳೆ ಉತ್ಪತ್ತಿಗೆ ಕಾರಣವಾಗುವ ಲಾರ್ವ ಬೆಳವಣಿಗೆ ತಡೆಯಲು ಸಾರ್ವಜನಿಕರು ಮನೆಯ ಸುತ್ತಲಿನ ಪರಿಸರದಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಯೋಗೀಶ್ ತಿಳಿಸಿದರು.
ಡೆಂಘೆ ಪ್ರಕರಣ ಹೆಚ್ಚಳ ಹಿನ್ನೆಲೆಯಲ್ಲಿ ನಗರದ ಜಯನಗರದ ಬಳಿ ಆರೋಗ್ಯ ಇಲಾಖೆ ಹಾಗೂ ನಗರಸಭೆ ಸಹಯೋಗದಲ್ಲಿ ಲಾರ್ವ ಸಮೀಕ್ಷೆ ಆಂದೋಲನದಲ್ಲಿ ಮಾತನಾಡಿದರು.
ಡೆಂಘೆ ನಿಯಂತ್ರಣ ಸರ್ಕಾರದ ಇಲಾಖೆಗಳ ಕೆಲಸ ಮಾತ್ರವಲ್ಲ. ಸಾರ್ವಜನಿಕರ ಸಹಕಾರವೂ ಅಗತ್ಯವಾಗಿದೆ. ಸಾಮಾನ್ಯವಾಗಿ ಹಗಲಿನಲ್ಲಿ ಕಚ್ಚುವ ಈಡೀಸ್ ಸೊಳ್ಳೆಯಿಂದ ಡೆಂಘೆ ರೋಗ ಉಲ್ಭಣವಾಗಲಿದೆ. ತಾಲೂಕಿನಲ್ಲಿ ಜ್ವರ ಪ್ರಕರಣಗಳನ್ನು ಪರೀಕ್ಷಿಸಲಾಗಿದ್ದು 26 ಪ್ರಕರಣ ಗುರುತಿಸಲಾಗಿದೆ . ಎಲ್ಲರಿಗೂ ಅಗತ್ಯ ಚಿಕಿತ್ಸೆ ನೀಡಿದ್ದು, 10 ಮಂದಿ ಗುಣಮುಖರಾಗಿದ್ದಾರೆ ಎಂದರು.
ಎಲ್ಲೆಡೆ ವ್ಯಾಪಕವಾಗಿ ಹರಡುತ್ತಿರುವ ಡೆಂಘೆ ತಡೆಗಟ್ಟಲು ನಾಗರಿಕರು ಮನೆಯ ಸುತ್ತಮುತ್ತ 2 ಮತ್ತು 3 ದಿನಗಳ ಕಾಲ ನೀರು ಸಂಗ್ರಹವಾಗದಂತೆ ಎಚ್ಚರಿಕೆ ವಹಿಸಬೇಕು. ಸಂಗ್ರಹವಾದರೂ ಅದನ್ನು ಸೂಕ್ತವಾಗಿ ವಿಲೇವಾರಿ ಮಾಡಬೇಕು. ಈ ನಿಟ್ಟಿನಲ್ಲಿ ತಾಲೂಕಿನ ಪ್ರತಿ ಗ್ರಾಮಪಂಚಾಯಿತಿ, ನಗರ ಪ್ರದೇಶಗಳಲ್ಲಿ ಸಾರ್ವಜನಿಕರಿಗೆ ಅರಿವು ಮೂಡಿಸಲು ನಿರ್ದೇಶನ ನೀಡಲಾಗಿದೆ. ಪ್ರಸ್ತುತ ಮಳೆಗಾಲ ಆರಂಭವಾಗಿದ್ದು, ಬಯಲಿನಲ್ಲಿ ಅಥವಾ ಮನೆಯಲ್ಲಿ ನೀರು ಶೇಖರಣೆಯಾಗುವ ತೊಟ್ಟಿಗಳು, ಡ್ರಮ್, ಬ್ಯಾರೆಲ್, ಒಡೆದ ಬಾಟಲಿ, ಅನುಪಯುಕ್ತ ಟೈರ್‌ಗಳು, ಎಳನೀರಿನ ಚಿಪ್ಪುಗಳು, ಒಡೆದ ಬಾಟಲಿಗಳಲ್ಲಿ ನೀರು ಸಂಗ್ರಹವಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕಿದೆ. ಪ್ರತಿ ಶುಕ್ರವಾರ ಅರೋಗ್ಯ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು ಆಯಾ ಭಾಗದ ಎಲ್ಲ ಮನೆಮನೆಗಳಿಗೂ ಭೇಟಿ ನೀಡಿ ಲಾರ್ವ ಸಮೀಕ್ಷೆಯನ್ನು ಆಂದೋಲನದ ಮಾದರಿಯಲ್ಲಿ ಹಮ್ಮಿಕೊಳ್ಳಲು ಸೂಚಿಸಲಾಗಿದೆ ಎಂದರು.
ತಾಲೂಕು ಆರೋಗ್ಯ ನಿರೀಕ್ಷಕ ರಾಜಕುಮಾರ್, ಶೈಲೇಂದ್ರ, ಪುಟ್ಟರಂಗೇಗೌಡ, ಸನಂದ್‌ಕುಮಾರ್, ಶಶಿಕುಮಾರ್, ವನಜಾಕ್ಷಿ, ಸುಧಾ, ಆಶಾಕಾರ್ಯಕರ್ತೆ ಜಯಲಕ್ಷ್ಮೀ, ಶಾರದಾ ಉಪಸ್ಥಿತರಿದರು.