ಜಿಲ್ಲೆ

ಸಾಂಕ್ರಾಮಿಕ ರೋಗಗಳ ತಡೆ ಜಾಗೃತಿ

ಸುನಿಲ್ ಪೊನ್ನೇಟಿ

ಕುಶಾಲನಗರ:

ಪ್ರತಿಯೊಬ್ಬರೂ ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಂಡು

ಆರೋಗ್ಯ, ನೈರ್ಮಲ್ಯ, ವೈಯಕ್ತಿಕ ಸ್ವಚ್ಛತೆ ಹಾಗೂ ಶುಚಿತ್ವಕ್ಕೆ ಹೆಚ್ಚಿನ ಕಾಳಜಿ ವಹಿಸುವ ಮೂಲಕ

ಸೊಳ್ಳೆಗಳ ಕಡಿತದಿಂದ ಬರುವ ಸಾಂಕ್ರಾಮಿಕ ರೋಗಗಳ ತಡೆಗಟ್ಟುವಿಕೆಗೆ ಮುನ್ನೆಚ್ಚರಿಕೆ ವಹಿಸುವ ಅಗತ್ಯವಿದೆ ಎಂದು ಜಿಲ್ಲಾ ಸರ್ವೇಕ್ಷಣ ಅಧಿಕಾರಿ ಡಾ ಬಿ.ಎಲ್. ಶ್ರೀನಿವಾಸ್ ಹೇಳಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ಕುಶಾಲನಗರ ತಾಲೂಕು ಆರೋಗ್ಯ ಇಲಾಖೆಯ ಸಹಯೋಗದೊಂದಿಗೆ ಕೂಡ್ಲೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಸೊಳ್ಳೆಗಳಿಂದ ಹರಡುವ ಸಾಂಕ್ರಾಮಿಕ ರೋಗಗಳ ಬಗ್ಗೆ ಮಾಹಿತಿ ನೀಡಿ ಮಾತನಾಡಿದರು.

ಸಾಂಕ್ರಾಮಿಕ ರೋಗಗಳ ನಿವಾರಣೆಗೆ ಸಮುದಾಯದ ಸಹಕಾರ ಅಗತ್ಯ. ಶಾಲಾ ಮಕ್ಕಳ ಆರೋಗ್ಯ ಬಹಳ ಮುಖ್ಯವಾದುದು. ಈ ದಿಸೆಯಲ್ಲಿ ಶಾಲಾವರಣ, ಶಾಲೆಯ ಶೌಚಾಲಯ ಹಾಗೂ ನೀರಿನ ಟ್ಯಾಂಕ್ ಗಳಲ್ಲಿ ಮತ್ತು ಶಾಲಾ ಅಡುಗೆ ಕೋಣೆ ಸೇರಿದಂತೆ ಎಲ್ಲೆಡೆ ಹೇಗೆ ಸ್ವಚ್ಛತೆ ಕಾಪಾಡಿಕೊಳ್ಳಬೇಕು ಹಾಗೂ ಶಾಲಾ ಮಕ್ಕಳಲ್ಲಿ ಸ್ವಚ್ಛತೆ ಕಾಪಾಡುವಲ್ಲಿ ಅನುಸರಿಸಬೇಕಾದ ಕ್ರಮಗಳ ಕುರಿತು ಮಾಹಿತಿ ನೀಡಿದರು.

ಸೊಳ್ಳೆಗಳ ಕಡಿತದಿಂದ ಬರುವ ಸಾಂಕ್ರಾಮಿಕ ರೋಗಗಳ ತಡೆಗಟ್ಟುವಿಕೆಗೆ ಮುನ್ನೆಚ್ಚರಿಕೆ ವಹಿಸುವುದು ಅಗತ್ಯವಾಗಿದೆ. ತಮ್ಮ ಮನೆಯ ನೀರಿನ ತೊಟ್ಟಿ, ಡ್ರಮ್, ಚರಂಡಿಗಳಲ್ಲಿ ಹೆಚ್ಚು ದಿನಗಳ ಕಾಲ ನೀರು ಸಂಗ್ರಹಣೆ ಮಾಡುವುದರಿಂದ ಸೊಳ್ಳೆ ಲಾರ್ವ ಉತ್ಪತ್ತಿಗೊಂಡು ಸಂತಾನಾಭಿವದ್ಧಿ ಹೊಂದುತ್ತವೆ. ಇದನ್ನು ನಿಯಂತ್ರಿಸಲು ನೀರಿನ ತೊಟ್ಟಿಗಳನ್ನು ಆಗಿಂದಾಗ್ಗೆ ಸ್ವಚ್ಚಗೊಳಿಸಬೇಕು. ಮಲೇರಿಯಾ, ಡೆಂಘಿ, ಚಿಕೂನ್‌ಗುನ್ಯಾ ರೋಗಗಳು ಸೊಳ್ಳೆಗಳಿಂದ ಹರಡುವ ಸಾಂಕ್ರಾಮಿಕ ರೋಗಗಳಾಗಿದ್ದು, ಸಾರ್ವಜನಿಕರು ಜಾಗೃತಗೊಂಡಲ್ಲಿ ತಡೆಗಟ್ಟಬಹುದು ಎಂದರು.

ಜಿಲ್ಲಾ ಸಾಂಕ್ರಾಮಿಕ ರೋಗ ಶಾಸ್ತ್ರಙ್ಞ ಅಧಿಕಾರಿ ಕಿಶೋರ್ ಮಾತನಾಡಿ, ಪ್ರತಿಯೊಬ್ಬರು ತಮ್ಮ ಮನೆ ಮತ್ತು ಸುತ್ತಮುತ್ತಲ ಪರಿಸರವನ್ನು ಸ್ವಚ್ಛತೆಯಿಂದ ಕಾಪಾಡಿಕೊಳ್ಳುವುದು ಅವಶ್ಯಕವಾಗಿದೆ. ಡೆಂಘೀ, ಚಿಕೂನ್‌ಗುನ್ಯ, ಮಲೇರಿಯಾ ಇನ್ನಿತರ ಸಾಂಕ್ರಾಮಿಕ ರೋಗಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಮೂಲಕ ಎಲ್ಲರೂ ಸೂಕ್ತ ನಿಯಮ ಪಾಲಿಸಿದರೆ ರೋಗ ತಡೆಗಟ್ಟಲು ಸಾಧ್ಯ ಎಂದು ಹೇಳಿದರು.

ಪ್ರೌಢಶಾಲಾ ಮುಖ್ಯ ಶಿಕ್ಷಕ ಟಿ.ಜಿ. ಪ್ರೇಮಕುಮಾರ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಆರೋಗ್ಯ, ನೈರ್ಮಲ್ಯ ಹಾಗೂ ಸ್ವಚ್ಚತೆ ಬಗ್ಗೆ ಅರಿವು ಮೂಡಿಸಲಾಗುತ್ತಿದೆ ಎಂದರು.

ಮುಖ್ಯ ಶಿಕ್ಷಕಿ ಎಚ್.ಎಸ್. ಸುಜಾತ, ಪ್ರೌಢಶಾಲಾ ನೋಡಲ್ ಅಧಿಕಾರಿ ಬಿ.ಡಿ. ರಮ್ಯ, ಶಿಕ್ಷಕರಾದ ದಯಾನಂದ ಪ್ರಕಾಶ್, ಬಿ.ಎನ್.ಸುಜಾತ, ಎಸ್.ಎಂ.ಗೀತಾ, ಅನ್ಸಿಲಾ ರೇಖಾ ಇತರರು ಇದ್ದರು.