ಜಿಲ್ಲೆ

ಪಡಿತರ ವಿತರಿಸಲು ಹಮಾಲರ ಆಗ್ರಹ

ವಿಜಯಪುರ: ಪಡಿತರ ಪೂರೈಸುವಂತೆ ಒತ್ತಾಯಿಸಿ ಲಾರಿ ಹಮಾಲರ ಜಿಲ್ಲಾ ಸಂಘ ಹಾಗೂ ಎಪಿಎಂಸಿ ಹೆಣ್ಣುಮಕ್ಕಳ ತಳದವರ ಸಂಘದ ಪದಾಧಿಕಾರಿಗಳು ಗುರುವಾರ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲರಿಗೆ ಮನವಿ ಸಲ್ಲಿಸಿದರು.
ರೈತ, ಕಾರ್ಮಿಕ ಮುಖಂಡ ಭೀಮಶಿ ಕಲಾದಗಿ ಮಾತನಾಡಿ, ಕರೊನಾ ವೈರಸ್ ಹರಡುವುದನ್ನು ತಡೆಯಲು ಲಾಕ್‌ಡೌನ್ ಮಾಡಿದ್ದರಿಂದ ಲಾರಿ ಬಂದ್ ಹಾಗೂ ಎಪಿಎಂಸಿ ಬಂದ್ ಆಗಿ 18 ದಿನ ಕಳೆದವು. ಎಪಿಎಂಸಿ ಅಧಿಕಾರಿಗಳು ಹಾಗೂ ಮರ್ಚಂಟ್ ಅಸೋಸಿಯೇಷನ್ ಎಲ್ಲರೂ ಸೇರಿ ಮಿಟಿಂಗ್ ಮಾಡಿ ವ್ಯಾಪಾರವನ್ನು ಶುರು ಮಾಡಲು ಹೇಳಿದರು. ಅದಕ್ಕಾಗಿ ಏ.6ರಂದು ಎಪಿಎಂಸಿ ಪುನರಾರಂಭಿಸಲಾಗಿದೆ ಎಂದರು.
ಎಪಿಎಂಸಿ ಸಮಿತಿ ಸಹಾಯಕ ಕಾರ್ಯದರ್ಶಿ ಲಾರಿ ಹಮಾಲದವರಿಗೆ ಹಾಗೂ ತಳದವರಿಗೆ ಪಾಸ್‌ಗಳನ್ನು ನೀಡಿದ್ದಾರೆ. ಆದರೆ, ಕರೊನಾ ಹಾವಳಿಯಿಂದ ರೈತರು ಹಾಗೂ ವ್ಯಾಪಾರಸ್ಥರು ಮಾರ್ಕೆಟ್‌ಗೆ ಬರುತ್ತಿಲ್ಲ. ಕಾರ್ಡ್ ಇದ್ದವರಿಗೂ, ಇಲ್ಲದವರಿಗೂ ಅಕ್ಕಿ, ಗೋಧಿ, ತೊಗರಿ ಬೇಳೆ, ಎಣ್ಣೆ, ಸಾಬೂನು ಕೊಡಬೇಕೆಂದು ಸರ್ಕಾರ ಆದೇಶಿಸಿದೆ. ಆದರೂ ನ್ಯಾಯಬೆಲೆ ಅಂಗಡಿ ವಿತರಕರು ಸರ್ಕಾರ ಕೊಡತಕ್ಕಂಥ ಆಹಾರ ಧಾನ್ಯ ಕೊಡುತ್ತಿಲ್ಲ. ಪೊಲೀಸರು ಲಾಠಿ ಬೀಸುತ್ತಿದ್ದಾರೆ. ಇದರಿಂದ ಭಯಗೊಂಡ ಕೂಲಿ ಕಾರ್ಮಿಕರು ಮನೆಯಲ್ಲೇ ಉಪವಾಸ ಬೀಳುತ್ತಿದ್ದಾರೆ. ಜಿಲ್ಲೆಯಲ್ಲಿ ಶೇ.24ರಷ್ಟು ಮಾತ್ರ ಪಡಿತರ ವಿತರಣೆಯಾಗಿದೆ. ಆದಕಾರಣ ಜಿಲ್ಲಾಧಿಕಾರಿಗಳು ಎಚ್ಚರವಹಿಸಿ ಜಿಲ್ಲೆಯಲ್ಲಿ ಯಾರೂ ಹಸಿವಿನಿಂದ ಬಳಲಬಾರದು ಎಂದು ಒತ್ತಾಯಿಸಿದರು. ಜಿಲ್ಲಾಡಳಿತ ತಕ್ಷಣ ನ್ಯಾಯಬೆಲೆ ಅಂಗಡಿಕಾರರು ವಾಹನಗಳಲ್ಲಿ ಮನೆ ಮನೆಗೆ ಪಡಿತರ ವಿತರಣೆ ಮಾಡಿ, ಹಮಾಲರ ಹಾಗೂ ಬಡ ತಳದವರನ್ನು ಕಾಪಾಡಬೇಕೆಂದು ವಿನಂತಿಸಿದರು.
ಸದ್ಯದ ಪರಿಸ್ಥಿತಿ ಕುರಿತು ವಿಚಾರಿಸಲಾಗುವುದೆಂದು ಜಿಲ್ಲಾಧಿಕಾರಿಗಳು ಭರವಸೆ ನೀಡಿದರು. ಎಪಿಎಂಸಿ ಮರ್ಚಂಟ್ ಅಸೋಸಿಯೇಷನ್ ಅಧ್ಯಕ್ಷ ರವೀಂದ್ರ ಬಿಜ್ಜರಗಿ, ಸಿಐಟಿಯು ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ ಹಂದ್ರಾಳ, ಉಪಾಧ್ಯಕ್ಷ ನಿಲೇಶ ಶಹಾ, ಜಿಲ್ಲಾ ಲಾರಿ ಹಮಾಲರ ಯೂನಿಯನ್ ಅಧ್ಯಕ್ಷ ಮಲ್ಲಿಕಸಾಬ ಟಕ್ಕಳಕಿ, ಉಪಾದ್ಯಕ್ಷ ನಾಗು ಮುಂಜಾನೆ, ಪ್ರದಾನ ಕಾರ್ಯದರ್ಶಿ ಸಾಬು ಗುಗದಡ್ಡಿ, ಹಾಜಿಲಾಲ ಟಕ್ಕಳಕಿ ಮತ್ತಿತರರು ಇದ್ದರು.